ಬೆಂಗಳೂರು: ನಗರದಲ್ಲಿ ಶಾಲೆ ಬಿಟ್ಟ ಮಕ್ಕಳ ಬಗ್ಗೆ ನಡೆಸುತ್ತಿರುವ ಸಮೀಕ್ಷೆ ಪೂರ್ಣಗೊಳಿಸಲು ಬಿಬಿಎಂಪಿಗೆ ಹೈಕೋರ್ಟ್ ಎರಡು ತಿಂಗಳ ಕಾಲಾವಕಾಶ ನೀಡಿದೆ.
2013ರಲ್ಲಿ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠ, ವಿಚಾರಣೆ ಮುಂದೂಡಿತು.
‘ಶಾಲೆ ಬಿಟ್ಟ ಮಕ್ಕಳ ನಿಖರ ಮಾಹಿತಿ ಕಲೆ ಹಾಕಲು ಮನೆ–ಮನೆ ಸಮೀಕ್ಷೆ ನಡೆಸಲಾಗುತ್ತಿದೆ. 2021ರ ಸೆಪ್ಟೆಂಬರ್ ವೇಳೆಗೆ ಶೇ 12.14ರಷ್ಟು ಸಮೀಕ್ಷೆ ನಡೆದಿತ್ತು. ಈಗ ಶೇ 51ರಷ್ಟು ಪೂರ್ಣಗೊಂಡಿದೆ’ ಎಂದು ಬಿಬಿಎಂಪಿ ಪರ ವಕೀಲರು ಮಾಹಿತಿ ನೀಡಿದರು.
‘ಮಾಹಿತಿ ನೀಡಲು ಹಿಂಜರಿಯುವ ಜನರಿಗೆ ತಿಳಿವಳಿಕೆ ನೀಡಿ ಸಮೀಕ್ಷೆ ನಡೆಸಲು ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ. ಹೀಗಾಗಿ, ಸಮೀಕ್ಷೆ ಪೂರ್ಣಗೊಳಿಸಲು ಮೂರು ತಿಂಗಳ ಕಾಲಾವಕಾಶ ಬೇಕು’ ಎಂದು ಮನವಿ ಮಾಡಿದರು. ಆದರೆ, ಪೀಠ ಎರಡು ತಿಂಗಳ ಕಾಲಾವಕಾಶ ನೀಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.