ADVERTISEMENT

20 ಕಿ.ಮೀ. ದೂರ ಕೊಚ್ಚಿ ಹೋದ ಪುಷ್ಪಾ ದೇಹ

ನಿಂಗಮ್ಮ ಪತ್ತೆಗಾಗಿ ರಾಜಕಾಲುವೆಯಲ್ಲಿ ಮುಂದುವರಿದ ಶೋಧ ಕಾರ್ಯ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2017, 19:36 IST
Last Updated 15 ಅಕ್ಟೋಬರ್ 2017, 19:36 IST

ಬೆಂಗಳೂರು: ಕುರುಬರಹಳ್ಳಿಯ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಪುಷ್ಪಾ ಅವರ ಶವ ಮೈಸೂರು ರಸ್ತೆಯ ಕುಂಬಳಗೋಡು ಸೇತುವೆ ಬಳಿ ದೊರೆತಿದೆ. ಪುಷ್ಪಾ ತಾಯಿ ನಿಂಗಮ್ಮ ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಶುಕ್ರವಾರ ಬಿದ್ದ ಭಾರಿ ಮಳೆಗೆ ನಿಂಗಮ್ಮ ಹಾಗೂ ಪುಷ್ಪಾ ಕೊಚ್ಚಿ ಹೋಗಿದ್ದರು. ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌, ಅಗ್ನಿಶಾಮಕ ದಳದ ಸಿಬ್ಬಂದಿಯು ಶನಿವಾರ ಶೋಧ ಕಾರ್ಯ ನಡೆಸಿದ್ದರೂ ತಾಯಿ–ಮಗಳನ್ನು ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ. ಕುರುಬರಹಳ್ಳಿಯಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ ಕುಂಬಳಗೋಡಿನಲ್ಲಿ ಭಾನುವಾರ ಶವ ಪತ್ತೆಯಾಗಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ (ಎನ್‌ಡಿಆರ್‌ಎಫ್‌) ಸಹಾಯಕ ಕಮಾಂಡೆಂಟ್‌ ಸುದೀಪ್‌ ನೇತೃತ್ವದಲ್ಲಿ 26 ಮಂದಿಯ ಒಂದು ತಂಡ ಹಾಗೂ 14 ಮಂದಿಯ ಇನ್ನೊಂದು ತಂಡವು ಅಗ್ನಿಶಾಮಕ ದಳ ಹಾಗೂ ಬಿಬಿಎಂಪಿ ಸಿಬ್ಬಂದಿಯ ಸಹಕಾರದೊಂದಿಗೆ ಭಾನುವಾರ ಬೆಳಿಗ್ಗೆ ಶೋಧ ಕಾರ್ಯ ನಡೆಸಿತು.

ADVERTISEMENT

ಸುಮನಹಳ್ಳಿ ಸೇತುವೆಯಿಂದ ಆರಂಭವಾದ ಕಾರ್ಯಾಚರಣೆಯು ಕುಂಬಳಗೋಡಿನವರೆಗೆ ಸಾಗಿತು. ಕುಂಬಳಗೋಡು ಸೇತುವೆ ಬಳಿ ಮರದ ಬುಡವೊಂದಕ್ಕೆ ಶವ ಸಿಕ್ಕಿಕೊಂಡಿತ್ತು. ಹಗ್ಗಗಳ ಸಹಾಯದಿಂದ ಶವವನ್ನು ಹೊರಗೆ ತರಲಾಯಿತು.

‘ನಾಗರಬಾವಿ, ಬೈರಮಂಗಲ ರಾಜಕಾಲುವೆ ಸೇರಿ ಒಟ್ಟು ಐದು ಸ್ಥಳಗಳಲ್ಲಿ ಹುಡುಕಾಟ ನಡೆಸಿದ್ದೆವು. ಆಗಾಗ್ಗೆ ಸುರಿಯುತ್ತಿದ್ದ ಮಳೆಯಿಂದಾಗಿ ಕಾರ್ಯಾಚರಣೆ ನಡೆಸಲು ಕಷ್ಟವಾಗಿತ್ತು. ರಾಜಕಾಲುವೆಯಲ್ಲಿ ನೀರಿನ ಹರಿವು ಹೆಚ್ಚಾಗಿತ್ತು. ಇದರಿಂದ ಶೋಧ ಕಾರ್ಯವು ಸವಾಲಾಗಿ ಪರಿಣಮಿಸಿತ್ತು. ಕಾಲುವೆಯಲ್ಲಿದ್ದ ಬಂಡೆಗಳಿಂದಾಗಿ ತಂಡದ ಒಂದು ಬೋಟ್‌ಗೆ ಹಾನಿಯಾಗಿದೆ. ಆದರೂ ಧೃತಿಗೆಡದೆ ಶವವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ’ ಎಂದು ಅಗ್ನಿಶಾಮಕ ದಳದ ಉಪನಿರ್ದೇಶಕ ಮಾರ್ಕಂಡೇಯ ‘ಪ್ರಜಾವಾಣಿ’ಗೆ ತಿಳಿಸಿದರು.

ಮುಂದುವರಿದ ಶೋಧ: ‘ನಿಂಗಮ್ಮ ಪತ್ತೆಗಾಗಿ ಶೋಧ ಮುಂದುವರಿದಿದೆ. ಕುಂಬಳಗೋಡಿನಿಂದ ನಾಲ್ಕು ಕಿ.ಮೀ. ದೂರದವರೆಗೆ ಹುಡುಕಾಟ ನಡೆಸಲಾಯಿತು. ಆದರೆ, ನಿಂಗಮ್ಮ ಪತ್ತೆಯಾಗಿಲ್ಲ. ಸೋಮವಾರವೂ ಶೋಧ ಮುಂದುವರಿಯಲಿದೆ’ ಎಂದು ಮೇಯರ್‌ ಆರ್‌.ಸಂಪತ್‌ ರಾಜ್‌ ತಿಳಿಸಿದರು.

ಅಪಾರ್ಟ್‌ಮೆಂಟ್‌ಗೆ ನುಗ್ಗಿದ ನೀರು: ಯಲಹಂಕದಲ್ಲಿ ರಾಜಕಾಲುವೆಯ ತಡೆಗೋಡೆ ಒಡೆದಿದ್ದರಿಂದ ಸತ್ಯ ಲಕ್ಸುರಿ ಅಪಾರ್ಟ್‌ಮೆಂಟ್‌ ಸಮುಚ್ಚಯದ ನೆಲಮಾಳಿಗೆಗೆ ನೀರು ನುಗ್ಗಿತ್ತು. ಬಿಬಿಎಂಪಿ ಸಿಬ್ಬಂದಿ ನೀರನ್ನು ತೆರವುಗೊಳಿಸಿದರು.

ಕಾಟನ್‌ಪೇಟೆ ಪೊಲೀಸ್‌ ಠಾಣೆಯ ಹಿಂಭಾಗ ಹಾಗೂ ಮಲ್ಲೇಶ್ವರದ ಕೆ.ಸಿ.ಜನರಲ್‌ ಆಸ್ಪತ್ರೆ ಬಳಿ ತಲಾ ಒಂದು ಮರ ಬಿದ್ದಿವೆ. ಗೋಡೆ ಕುಸಿತ: ಧರ್ಮರಾಯಸ್ವಾಮಿ ದೇವಸ್ಥಾನದ ಬಳಿ ಹಳೇ ಮನೆಯ ಗೋಡೆ ಕುಸಿದಿದೆ. ಮನೆಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ.

ಹೊಸಕೋಟೆ: ಪಟ್ಟಣದಲ್ಲಿ ಶನಿವಾರ ರಾತ್ರಿ 93.4 ಮಿ.ಮೀ. ಮಳೆ ಬಿದ್ದಿದೆ. ಸರ್ಕಾರಿ ಆಸ್ಪತ್ರೆ ಹಾಗೂ 12 ಮನೆಗಳು ಜಲಾವೃತವಾಗಿದ್ದವು. ಪಟ್ಟಣದ ಹೊರವಲಯದ ಅಗಸನ ಕೆರೆ ಕೋಡಿ ಹೋಗಿದೆ. ತಾಲ್ಲೂಕಿನ ಸೂಲಿಬೆಲೆ, ಯೆನಗುಂಟೆ, ಬೆಟ್ಟಹಳ್ಳಿಯಲ್ಲೂ ತಲಾ ಎರಡು ಮನೆಗಳ ಗೋಡೆಗಳು ಕುಸಿದಿವೆ. ಒಳಗೆರೆಪುರದಲ್ಲಿ ಮೂರು ಮನೆಗಳ ಗೋಡೆಗಳು ಬಿದ್ದಿವೆ.

***
ಸಂಪೂರ್ಣ ಜಲಾವೃತ

ಶನಿವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಬೊಮ್ಮನಹಳ್ಳಿ ಕ್ಷೇತ್ರದ ಹೊಂಗಸಂದ್ರ ವಾರ್ಡಿನ ಓಂಶಕ್ತಿ ಬಡಾವಣೆ ಹಾಗೂ ವಾಜಪೇಯಿ ಬಡಾವಣೆ ಸಂಪೂರ್ಣ ಜಲಾವೃತಗೊಂಡಿದ್ದವು. ಸುಮಾರು 600 ಮನೆಗಳಿಗೆ ನೀರು ನುಗ್ಗಿತ್ತು. ರಸ್ತೆಯಲ್ಲಿ 3 ಅಡಿ ನೀರು ನಿಂತಿತ್ತು. ಮನೆಗೆ ನುಗ್ಗಿದ್ದ ನೀರನ್ನು ನಿವಾಸಿಗಳು ರಾತ್ರಿಯಿಡೀ ಹೊರಗೆ ಹಾಕಿದರು.

ಜನರು ಮನೆಗಳಿಂದ ಹೊರ ಬರಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಿಜೆಪಿ ಕಾರ್ಯಕರ್ತರು ಸಂತ್ರಸ್ತರಿಗೆ ಹಾಲು ಹಾಗೂ ಬಿಸ್ಕತ್‌ ವಿತರಿಸಿದರು. ಇದೇ ಬಡಾವಣೆಯಲ್ಲಿರುವ ಗಾರ್ಮೆಂಟ್ಸ್ ಕಾರ್ಖಾನೆಯೊಂದಕ್ಕೆ ನೀರು ನುಗ್ಗಿತ್ತು. ಕಾರ್ಖಾನೆಯಲ್ಲಿದ್ದ ಅನೇಕ ವಸ್ತುಗಳಿಗೆ ಹಾನಿ ಉಂಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.