ADVERTISEMENT

20 ಗಣ್ಯರಿಗೆ ಬಸವನಗುಡಿ ರತ್ನ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2011, 19:30 IST
Last Updated 7 ಆಗಸ್ಟ್ 2011, 19:30 IST
20 ಗಣ್ಯರಿಗೆ ಬಸವನಗುಡಿ ರತ್ನ ಪ್ರಶಸ್ತಿ
20 ಗಣ್ಯರಿಗೆ ಬಸವನಗುಡಿ ರತ್ನ ಪ್ರಶಸ್ತಿ   

ಬೆಂಗಳೂರು: ಆದರ್ಶ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪ್ರದರ್ಶನ ಮತ್ತು ಸುಗಮ ಸಂಗೀತ ವೈಭವ ಸಮಾರಂಭದಲ್ಲಿ ಕವಿ ಮಾರ್ಕಂಡಪುರಂ ಶ್ರೀನಿವಾಸ್, ಉದ್ಯಮಿ ವಾಸುದೇವ ಅಡಿಗ, ಚಿತ್ರನಿರ್ದೇಶಕ ದ್ವಾರ್ಕಿ ರಾಘವ, ಅಬಲಾಶ್ರಮ ಸಂಸ್ಥೆಯ ಶೇಷು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 20 ಮಂದಿ ಗಣ್ಯರಿಗೆ `ಬಸವನಗುಡಿ ರತ್ನ~ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಶಸ್ತಿ ನೀಡಿ ಮಾತನಾಡಿದ ಶಾಸಕ ಎಲ್.ಎ.ರವಿಸುಬ್ರಹ್ಮಣ್ಯ, `ಸಮಾಜದಲ್ಲಿ ಸೇವೆ ಸಲ್ಲಿಸುತ್ತಿರುವ ಗಣ್ಯರನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ಮಹತ್ವದ್ದು. ಬಸವನಗುಡಿ ವಿಶೇಷವಾದ ಪ್ರದೇಶ. ಇಲ್ಲಿ ಅನೇಕ ಪ್ರತಿಭೆಗಳು, ಸಮಾಜ ಕಟ್ಟುವ ಗಣ್ಯರು ಇದ್ದಾರೆ~ ಎಂದರು.

`ಸಂಗೀತ ಪಾಠಶಾಲೆ ನಡೆಸುತ್ತಿರುವ ಕಿಕ್ಕೇರಿ ಕೃಷ್ಣಮೂರ್ತಿ ಅವರು ಛಲದಂಕಮಲ್ಲನಂತೆ ದುಡಿಯುತ್ತಿದ್ದಾರೆ. ಅಬಲಾಶ್ರಮಕ್ಕೆ ಪ್ರಶಸ್ತಿ ನೀಡುವ ಮೂಲಕ ಸಂಸ್ಥೆ ತನ್ನ ಗೌರವ ಹೆಚ್ಚಿಸಿಕೊಂಡಿದೆ. ಅಬಲಾಶ್ರಮ ದುರ್ಬಲ ಹೆಣ್ಣು ಮಕ್ಕಳಿಗೆ ತವರುಮನೆಯಂತೆ ಆಶ್ರಯ ನೀಡಿದೆ. ಅನೇಕ ವಿವಾಹ ಮಹೋತ್ಸವಗಳನ್ನು ಸಂಸ್ಥೆ ನೆರವೇರಿಸಿದೆ~ ಎಂದು ತಿಳಿಸಿದರು.

      ಸನ್ಮಾನ ಸ್ವೀಕರಿಸಿ ಮಾತನಾಡಿದ ಅಬಲಾಶ್ರಮದ ಶೇಷು, `ಅಬಲಾಶ್ರಮಕ್ಕೆ 106 ವರ್ಷಗಳ ಇತಿಹಾಸವಿದೆ. ಎಲೆ ಮರೆಕಾಯಿಯಂತೆ ಒಂದು ಶತಮಾನಕ್ಕೂ ಹೆಚ್ಚು ಕಾಲ ಸಮಾಜದ ಸೇವೆಯಲ್ಲಿ ತೊಡಗಿದೆ. ಈ ಪ್ರಶಸ್ತಿ ನಿಜ ವಾಗಿಯೂ ಅಬಲಾಶ್ರಮ ಸ್ಥಾಪಿಸಿದ ವೆಂಕಟವರದ ಐಯ್ಯಂಗಾರ್ ಹಾಗೂ ಅವರ ಪತ್ನಿ ಕೃಷ್ಣಮ್ಮ ಅವರಿಗೆ ಸಲ್ಲಬೇಕು. ಐಯ್ಯಂಗಾರ್ ಆ ಕಾಲದಲ್ಲಿಯೇ ಸ್ವತಃ ವಿಧವಾ ವಿವಾಹವಾಗಿ ಸಮಾಜಕ್ಕೆ ಸ್ಫೂರ್ತಿಯಾಗಿದ್ದರು~ ಎಂದರು.

 ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ, `ಸಂಸ್ಥೆಯಲ್ಲಿ ಅನೇಕ ಪ್ರತಿಭೆಗಳು ಮೂಡಿ ಬಂದಿವೆ. ಗಾಯಕ ದಿವಂಗತ ಸಿ.ಅಶ್ವತ್ಥ್ ಸಂಸ್ಥೆಗೆ ಸ್ಫೂರ್ತಿದಾಯಕವಾಗಿದ್ದಾರೆ. ಸಮಾಜದಲ್ಲಿ ಸದ್ದಿಲ್ಲದೆ ದುಡಿಯುತ್ತಿರುವವರನ್ನು ಗುರುತಿಸಿ ಸನ್ಮಾನಿಸಲಾಗಿದೆ. ಸಂಸ್ಥೆಗೆ ಜನರ ಸಂಪೂರ್ಣ ಬೆಂಬಲ ಸಕಾರ ಅಗತ್ಯ~ ಎಂದು ಹೇಳಿದರು. 

  ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆದ ಸಂಸ್ಥೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕವಿಗಳಾದ ಬಿ.ಆರ್.ಲಕ್ಷ್ಮಣರಾವ್, ಸಾಹಿತಿ ಕೋಟೇಶ್ವರ ಸೂರ್ಯನಾರಾಯಣ ರಾವ್, ಪಾಲಿಕೆ ಸದಸ್ಯ ಬಿ.ಎಸ್.ಸತ್ಯನಾರಾಯಣ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.