ADVERTISEMENT

22 ವಾರಗಳ ಭ್ರೂಣದ ಗರ್ಭಪಾತಕ್ಕೆ ಒಪ್ಪಿಗೆ

ಅತ್ಯಾಚಾರ ಆರೋಪದ ಸಂತ್ರಸ್ತೆ–16ರ ಬಾಲಕಿಯ ಅರ್ಜಿ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2018, 19:30 IST
Last Updated 5 ಏಪ್ರಿಲ್ 2018, 19:30 IST
22 ವಾರಗಳ ಭ್ರೂಣದ ಗರ್ಭಪಾತಕ್ಕೆ ಒಪ್ಪಿಗೆ
22 ವಾರಗಳ ಭ್ರೂಣದ ಗರ್ಭಪಾತಕ್ಕೆ ಒಪ್ಪಿಗೆ   

ಬೆಂಗಳೂರು: ಅತ್ಯಾಚಾರಕ್ಕೆ ಒಳಗಾಗಿ ಗರ್ಭಿಣಿಯಾಗಿದ್ದಾಳೆ ಎನ್ನಲಾದ 16 ವರ್ಷದ ಬಾಲಕಿಯ ಗರ್ಭಪಾತಕ್ಕೆ ಹೈಕೋರ್ಟ್‌ ಒಪ್ಪಿಗೆ ನೀಡಿದೆ.

ಈ ಕುರಿತಂತೆ ಸಂತ್ರಸ್ತ ಬಾಲಕಿಯ ತಂದೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಆರ್.ಎಸ್.ಚೌಹಾಣ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಲೇವಾರಿ ಮಾಡಿದೆ.

‘ಗರ್ಭಪಾತ ನಡೆಸುವ ದೃಷ್ಟಿಯಿಂದ ಬಾಲಕಿಯನ್ನು ಗುರುವಾರವೇ (ಏಪ್ರಿಲ್ 5) ವಾಣಿ ವಿಲಾಸ ಆಸ್ಪತ್ರೆಗೆ ದಾಖಲಿಸಿ. ಗರ್ಭಪಾತದ ನಂತರ ಸಂಪೂರ್ಣ ಚೇತರಿಸಿಕೊಂಡಿದ್ದಾಳೆ ಎಂಬುದು ಖಚಿತವಾದ ಮೇಲೆಯೇ ಆಕೆಯನ್ನು ಬಿಡುಗಡೆ ಮಾಡಿ’ ಎಂದು ಆಸ್ಪತ್ರೆಯ ಸೂಪರಿಂಟೆಂಡೆಂಟ್‌ ಅವರಿಗೆ ನ್ಯಾಯಪೀಠ ನಿರ್ದೇಶಿಸಿದೆ.

ADVERTISEMENT

‘ಇದೊಂದು ಸೂಕ್ಷ್ಮ ಪ್ರಕರಣ. ಈ ಹಿಂದೆ ಇಂತಹುದೇ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಆಧರಿಸಿ ಮತ್ತು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ವರದಿಯ ಅನ್ವಯ ಗರ್ಭಪಾತಕ್ಕೆ ಒಪ್ಪಿಗೆ ನೀಡಲಾಗಿದೆ’ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.

‘ಬಾಲಕಿ ಮೇಲಿನ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ರೂಪದಲ್ಲಿ ಭ್ರೂಣದ ಡಿಎನ್‌ಎ ಅಗತ್ಯವೆಂದು ಕಂಡು ಬಂದರೆ ಸಂರಕ್ಷಿಸಿ ಇಡಬೇಕು. ಹೈದರಾಬಾದ್‌ನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ಡಿಎನ್‌ಎ ಪರೀಕ್ಷೆ ನಡೆಸಬೇಕು. ಎರಡು ತಿಂಗಳಿನಲ್ಲಿ ಈ ವರದಿ ನೀಡಬೇಕು. ಶಸ್ತ್ರಚಿಕಿತ್ಸೆ, ಆಹಾರ, ಆಸ್ಪತ್ರೆ ಖರ್ಚನ್ನು ರಾಜ್ಯ ಸರ್ಕಾರವೇ ಭರಿಸಬೇಕು’ ಎಂದೂ ಆದೇಶದಲ್ಲಿ ತಿಳಿಸಲಾಗಿದೆ.

‘ಅತ್ಯಾಚಾರಕ್ಕೆ ಒಳಗಾಗಿ ನಾನು ಈ ಗರ್ಭ ಧರಿಸಿದ್ದೇನೆ. ಇದು ನನಗೆ ಭವಿಷ್ಯದಲ್ಲಿ ವೈಯಕ್ತಿಕವಾಗಿ, ಸಾಮಾಜಿಕವಾಗಿ ಮತ್ತು ಕೌಟುಂಬಿಕವಾಗಿ ಸಮಸ್ಯೆಗಳನ್ನು ತಂದೊಡ್ಡಲಿದೆ. ಆದ್ದರಿಂದ ಗರ್ಭಪಾತ ನಡೆಸಲು ಆಸ್ಪತ್ರೆಯ ಆಡಳಿತ ಮಂಡಳಿಗೆ ನಿರ್ದೇಶಿಸಬೇಕು’ ಎಂದು ಕೋರಿ ಸಂತ್ರಸ್ತ ಬಾಲಕಿ ಈ ಅರ್ಜಿ ಸಲ್ಲಿಸಿದ್ದಳು.

ರಾಜ್ಯ ಸರ್ಕಾರದ ಪರ ವಿಜಯಕುಮಾರ್ ಎ.ಪಾಟೀಲ ವಾದ ಮಂಡಿಸಿದರು.
**
ರವಿ ಬೆಳಗೆರೆಗೆ ನೋಟಿಸ್‌
ಬೆಂಗಳೂರು: ಸಹೋದ್ಯೋಗಿ ಪತ್ರಕರ್ತನ ಹತ್ಯೆಗೆ ಸುಪಾರಿ ನೀಡಿದ ಆರೋಪ ಎದುರಿಸುತ್ತಿರುವ ಪತ್ರಕರ್ತ ರವಿ ಬೆಳಗೆರೆಗೆ ನೋಟಿಸ್‌ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.

'ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಅಧೀನ ನ್ಯಾಯಾಲಯ ನೀಡಿರುವ ಜಾಮೀನು ರದ್ದುಪಡಿಸಬೇಕು' ಎಂದು ಕೋರಿ ಸಿಸಿಬಿ ಪೊಲೀಸರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್‌ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಪ್ರತಿವಾದಿ ರವಿ ಬೆಳಗೆರೆಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.