ADVERTISEMENT

ಸಾರಿಗೆ: ₹ 2.30 ಲಕ್ಷ ಕೋಟಿ ಯೋಜನೆ

ಸಮಗ್ರ ಸಂಚಾರ ಯೋಜನೆ ಕರಡು ಪ್ರಕಟ l ಮೂರು ಹಂತಗಳಲ್ಲಿ ಜಾರಿ

ಪ್ರವೀಣ ಕುಮಾರ್ ಪಿ.ವಿ.
Published 10 ಡಿಸೆಂಬರ್ 2019, 19:57 IST
Last Updated 10 ಡಿಸೆಂಬರ್ 2019, 19:57 IST
   

ಬೆಂಗಳೂರು: ನಗರದಲ್ಲಿ ಪರಿಣಾಮಕಾರಿ ಹಾಗೂ ಸುಸ್ಥಿರ ಸಾರಿಗೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ‘ಸಮಗ್ರ ಸಂಚಾರ ಯೋಜನೆ’ಯ (ಸಿಎಂಪಿ) ಕರಡನ್ನು ರೂಪಿಸಿದೆ. ಮೂರು ಹಂತಗಳಲ್ಲಿ ಈ ಯೋಜನೆಯಡಿ ವಿವಿಧ ಕಾಮಗಾರಿ
ಗಳನ್ನು ಅನುಷ್ಠಾನಗೊಳಿಸುವ ಉದ್ದೇಶ ಹೊಂದಿರುವ ಸರ್ಕಾರ ಇದಕ್ಕೆ ಒಟ್ಟು ₹ 2,30,104 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜು ಮಾಡಿದೆ.

ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಹಾಗೂ ನಗರ ಭೂಸಾರಿಗೆ ನಿರ್ದೇಶನಾಲಯ (ಡಲ್ಟ್‌) ಸೇರಿ ಈ ಕರಡನ್ನು ಸಿದ್ಧಪಡಿಸಿವೆ. ನಗರ ಮಹಾ ಯೋಜನೆ (ಸಿಡಿಪಿ) ಮತ್ತು ಇತರ ಆರ್ಥಿಕ ಅಧ್ಯಯನಗಳನ್ನು ಆಧರಿಸಿ ಸಿಎಂಪಿಯ ಅಗತ್ಯ ಹಾಗೂ ವ್ಯಾಪ್ತಿಯ ಕುರಿತು ವಿಶ್ಲೇಷಿಸಲಾಗಿದೆ. ಇದರ ಆಧಾರದಲ್ಲಿ ಸಿಎಂಪಿಯ ಧ್ಯೇಯೋದ್ದೇಶಗಳನ್ನು ವಿಷದಪಡಿಸಲಾಗಿದೆ. ಅದಕ್ಕನುಗುಣವಾಗಿ ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿ ಯೋಜನೆಗಳ ರೂಪರೇಷೆಗಳನ್ನು ರಚಿಸಲಾಗಿದೆ.

ಈಗಿರುವ ಜನಸಂಖ್ಯೆ, ಜನ ಸಾಂದ್ರತೆ, ಪ್ರಾದೇಶಿಕ ಸ್ವರೂಪ, ಭೂಬಳಕೆ ವಿಧಾನ, ಸಾಮಾಜಿಕ– ಆರ್ಥಿಕ ಸ್ವರೂಪ, ಇಂಧನ ಮತ್ತು ಪರಿಸರಕ್ಕೆ ಸಂಬಂಧಿಸಿದ ಅಂಶಗಳನ್ನು ಪರಿಗಣಿಸಿ, ಅವುಗಳಿಗೆ ಅನುಗುಣವಾಗಿ ಎಷ್ಟು ಮೂಲಸೌಕರ್ಯಗಳಿವೆ, ಸಾರ್ವಜನಿಕ ಸಾರಿಗೆ ಎಷ್ಟು ಪ್ರಮಾಣದಲ್ಲಿದೆ, ಅಂತರ್ಜಾಲ ಸಂಪರ್ಕ, ಸಮೂಹ ಸಾರಿಗೆಯ ಮೂಲಸೌಕರ್ಯ ಗಳೆಷ್ಟಿವೆ ಎಂಬುದನ್ನು ಲೆಕ್ಕ ಹಾಕಲಾಗಿದೆ. ಅದನ್ನು ಆಧರಿಸಿ ಭವಿಷ್ಯದಲ್ಲಿ ಆಗಬೇಕಾದ ಕಾರ್ಯಗಳನ್ನು ಪಟ್ಟಿ ಮಾಡಲಾಗಿದೆ.

ADVERTISEMENT

ಈಗಿರುವ ಸಾರಿಗೆ ವಿನ್ಯಾಸ ಹಾಗೂ ನಗರ ಮಹಾ ಯೋಜನೆಯ ದತ್ತಾಂಶಗಳನ್ನು ಆಧರಿಸಿ ಭವಿಷ್ಯದ ಬೆಳವಣಿಗೆಗಳ ರೂಪರೇಷೆ ಸಿದ್ಧಪಡಿಸಲಾಗಿದೆ. ರಸ್ತೆ ಜಾಲದ ವಿವರ, ನಿರ್ದಿಷ್ಟ ರಸ್ತೆಯಲ್ಲಿ ನಿರ್ದಿಷ್ಟ ಅವಧಿಯಲ್ಲಿ ಸಾಗುವ ವಾಹನಗಳ ಸಂಖ್ಯೆ ಎಷ್ಟು, ಅವು ಎಷ್ಟು ವೇಗದಲ್ಲಿ ಸಾಗುತ್ತವೆ, ಸಂಚಾರ ವಿಳಂಬ ಏಕಾಗುತ್ತಿದೆ, ಪಾದಚಾರಿ ಸೌಕರ್ಯ ಹಾಗೂ ಅವುಗಳನ್ನು ಬಳಸುವವರ ಪ್ರಮಾಣವೆಷ್ಟು, ಬಸ್‌ ಪ್ರಯಾಣದ ವಿನ್ಯಾಸ ಹೇಗಿದೆ, ನಮ್ಮ ಮೆಟ್ರೊ ಮತ್ತು ರೈಲು ಬಳಸುವವರೆಷ್ಟು ಎಂಬ ಅಂಶಗಳನ್ನು ಚರ್ಚಿಸಲಾಗಿದೆ.

ಭವಿಷ್ಯದ ಬೆಳವಣಿಗೆಗಳ ವಿವಿಧ ಮಾದರಿಗಳಲ್ಲಿ ಅತ್ಯುತ್ತಮ ವಾದುದನ್ನು ಆರಿಸಿಕೊಂಡು ಅದರನ್ವಯ ಸಮಗ್ರ ಸಂಚಾರ ಯೋಜನೆ ಅನುಷ್ಠಾನಗೊಳಿಸುವ ಸಲುವಾಗಿ ನಿರ್ದಿಷ್ಟ ಮಾನದಂಡಗಳನ್ನು ಗೊತ್ತುಪಡಿಸಲಾಗಿದೆ. ‘ಈಗಿನಂತೆಯೇ ನಗರ ಬೆಳೆಯುವ ಮಾದರಿ’ (ಬಿಎಯು) ಹಾಗೂ ನಗರದಲ್ಲಿ ಸುಸ್ಥಿರ ಸಾರಿಗೆ ವಾತಾವರಣವನ್ನು ಅಭಿವೃದ್ಧಿಪಡಿಸುವ ಮಾದರಿಗಳನ್ನು ಆಧರಿಸಿ ಸಿಎಂಪಿಯ ಗುರಿಗಳನ್ನು ನಿಗದಿಪಡಿಸಲಾಗಿದೆ. ಈ ಯೋಜನೆಗೆ ಬಂಡವಾಳ ಹೊಂದಿಸುವ ಬಗ್ಗೆಯೂ ಸಲಹೆ ನೀಡಲಾಗಿದೆ.

ಪ್ರತಿಕ್ರಿಯೆ ಸಲ್ಲಿಸಲು 30 ದಿನ ಅವಕಾಶ

ಬಿಎಂಆರ್‌ಸಿಎಲ್‌ ವೆಬ್‌ಸೈಟ್‌ನಲ್ಲಿ (kannada.bmrc.co.in) ಕರಡು ಪ್ರತಿಯನ್ನು ಪ್ರಕಟಿಸಲಾಗಿದೆ. ಇದಕ್ಕೆ ಸಲಹೆ ಸೂಚನೆ ನೀಡಲು 30 ದಿನಗಳ ಕಾಲಾವಕಾಶ ನೀಡಲಾಗಿದೆ. ಆಸಕ್ತರು ಇ–ಮೇಲ್‌ ( cmpcomments@bmrc.co.in ) ಮೂಲಕ ಪ್ರತಿಕ್ರಿಯೆ ಸಲ್ಲಿಸಬಹುದು.

ಸಿಎಂಪಿ–ಪ್ರಮುಖ ಗುರಿಗಳೇನು?

l ಸಾರಿಗೆ ಬೇಡಿಕೆಯನ್ನು ತಲುಪುವ ನಿಟ್ಟಿನಲ್ಲಿ ಸಾರ್ವಜನಿಕ ಸಾರಿಗೆಯನ್ನು ಹೆಚ್ಚಿಸುವುದು

l ರಸ್ತೆ ಮೂಲಸೌಕರ್ಯಗಳನ್ನು ಸಾರ್ವಜನಿಕ ಒಳಿತಿಗೆ ಅನುಗುಣವಾಗಿ ಪುನಃಸ್ಥಾಪಿಸುವುದು

l ಹಸಿರು ಮನೆ ಅನಿಲ (ಸಿಎಚ್‌ಜಿ) ಹಾಗೂ ವಾಯುಮಾಲಿನ್ಯಕ್ಕೆ ಸಾರಿಗೆ ವಲಯದ ಕೊಡುಗೆಯನ್ನು ಕಡಿಮೆ ಮಾಡುವುದು

ವ್ಯಾಪ್ತಿ ಎಷ್ಟು?

ಈ ಯೋಜನೆ ಕರಡು ಸಿದ್ಧಪಡಿಸುವುದಕ್ಕೆ 1,294 ಚ.ಕಿ.ಮೀ ವಿಸ್ತೀರ್ಣದ ಬೆಂಗಳೂರು ಮಹಾನಗರ ಪ್ರದೇಶ (ಬಿಎಂಎ), 227 ಚ.ಕಿ.ಮೀ ವಿಸ್ತೀರ್ಣದ ಬೆಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರದ (ಬಿಐಎಎಪಿಎ) ಪ್ರದೇಶ ಹಾಗೂ 79.14 ಚದರ ಕಿ.ಮೀ. ವಿಸ್ತೀರ್ಣದ ಬೆಂಗಳೂರು– ಮೈಸೂರು ಮೂಲಸೌಕರ್ಯ ಕಾರಿಡಾರ್‌ ಪ್ರದೇಶಗಳ (ಬಿಎಂಐಸಿಎಪಿಎ) ವ್ಯಾಪ್ತಿಯನ್ನು ಪರಿಗಣಿಸಲಾಗಿದೆ.

ಪಟ್ಟಿ ಮಾಡಲಾದ ಪ್ರಮುಖ ಕಾಮಗಾರಿಗಳು

‘ನಮ್ಮ ಮೆಟ್ರೊ ಕಾಮಗಾರಿ’, ಸಬ್ ಅರ್ಬನ್‌ ರೈಲು, ಬಸ್‌ ಆದ್ಯತಾ ಪಥಗಳು, ಬಸ್‌ ಸಂಚಾರ ಹೆಚ್ಚಳ, ಕಾರಿಡಾರ್‌ಗಳ ಅಭಿವೃದ್ಧಿ, ಜಂಕ್ಷನ್‌ಗಳ ಅಭಿವೃದ್ಧಿ, ಪಾದಚಾರಿ ಮೇಲ್ಸೇತುವೆ ಅಭಿವೃದ್ಧಿ, ರಸ್ತೆ ವಿಸ್ತರಣೆ, ಪೆರಿಫೆರಲ್‌ ರಸ್ತೆ ನಿರ್ಮಾಣ, ವಾಹನ ನಿಲುಗಡೆಗೆ ಮೂಲಸೌಕರ್ಯ, ಪಾದಚಾರಿ ಮಾರ್ಗ ನಿರ್ಮಾಣ, ಬೈಸಿಕಲ್‌ ಹಂಚಿಕೊಳ್ಳುವ ವ್ಯವಸ್ಥೆ ಜಾರಿ, ಎತ್ತರಿಸಿದ ಪಾದಚಾರಿ ಮಾರ್ಗಗಳು, ಟರ್ಮಿನಲ್‌ಗಳ ಅಭಿವೃದ್ಧಿ


ಸಿಎಂಪಿಯ ಪ್ರಮುಖ ಅಂಶಗಳು

-ಭೂಬಳಕೆ ವಿಧಾನ ಮತ್ತು ಸಿಎಂಪಿ ಸಂಯೋಜನೆ

-ಸಾರ್ವಜನಿಕ ಸಾರಿಗೆ ಸುಧಾರಣೆ

-ರಸ್ತೆ ಮೂಲಸೌಕರ್ಯ ಅಭಿವೃದ್ಧಿ

-ಮೋಟಾರುರಹಿತ ಸಾರಿಗೆ (ಎನ್‌ಎಂಟಿ) ಸೌಕರ್ಯ ಸುಧಾರಣೆ

-ಬಹುಮಾದರಿಗಳ ಸಂಯೋಜಿಸಿ ಸಮಗ್ರ ಸಾರಿಗೆ ಅಭಿವೃದ್ಧಿ

-ಅಂತರಮಾದರಿ ಸಾರ್ವಜನಿಕ ಸಾರಿಗೆ

***

ಎಲ್ಲ ಬಗೆಯ ಸಂಚಾರ ವ್ಯವಸ್ಥೆಗಳಿಗೆ ಅನ್ವಯವಾಗುವಂತೆ ನೀತಿ ರೂಪಿಸಿದ್ದೇವೆ. ನಗರದ ಬೆಳವಣಿಗೆ, ಭೂಬಳಕೆಯಂತಹ ಅಂಶಗಳನ್ನು ಅಳವಡಿಸಿಕೊಂಡಿದ್ದೇವೆ

-ಅಜಯ್‌ ಸೇಠ್‌, ವ್ಯವಸ್ಥಾಪಕ ನಿರ್ದೇಶಕ, ಬಿಎಂಆರ್‌ಸಿಎಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.