ADVERTISEMENT

24 ಕಾರುಗಳು ಬೆಂಕಿಗೆ ಆಹುತಿ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2014, 20:21 IST
Last Updated 24 ಮಾರ್ಚ್ 2014, 20:21 IST
ಘಟನೆಯಲ್ಲಿ ಸಂಪೂರ್ಣ ಕರಕಲಾದ ಕಾರುಗಳು	–ಪ್ರಜಾವಾಣಿ ಚಿತ್ರಗಳು
ಘಟನೆಯಲ್ಲಿ ಸಂಪೂರ್ಣ ಕರಕಲಾದ ಕಾರುಗಳು –ಪ್ರಜಾವಾಣಿ ಚಿತ್ರಗಳು   

ಬೆಂಗಳೂರು: ಎಚ್‌ಎಎಲ್‌ ಸಮೀಪದ ಕಾಡು­ಬೀಸನಹಳ್ಳಿಯಲ್ಲಿ ಸೋಮವಾರ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ ಮೆರು­ಕ್ಯಾಬ್ಸ್‌ ಕಂಪೆನಿಗೆ ಸೇರಿದ 24 ಹಳೆಯ ಕಾರುಗಳು ಬೆಂಕಿಗೆ ಆಹುತಿ­ಯಾಗಿವೆ.

ಕಂಪೆನಿಯು ಯಾರ್ಡ್‌ ರಸ್ತೆ­ಯಲ್ಲಿ­ರುವ ತೆಂಗಿನತೋಟದ ಜಾಗವನ್ನು ಬಾಡಿಗೆಗೆ ಪಡೆದಿದೆ. ಈ ಜಾಗದಲ್ಲಿ ಸುಮಾರು 400 ಕಾರುಗಳನ್ನು ನಿಲು­ಗಡೆ ಮಾಡಲಾಗಿತ್ತು. ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಆಕಸ್ಮಿಕ­ವಾಗಿ ಬೆಂಕಿ ಹೊತ್ತಿಕೊಂಡು ಕಾರುಗಳಿಗೆ ವ್ಯಾಪಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳೀಯರು ನೀಡಿದ ಮಾಹಿತಿಯ ಮೇರೆಗೆ ಆರು ವಾಹನಗಳಲ್ಲಿ ಸ್ಥಳಕ್ಕೆ ಬಂದ 35 ಮಂದಿ ಅಗ್ನಿಶಾಮಕ ಸಿಬ್ಬಂದಿ ಒಂದೂ­ವರೆ ಗಂಟೆ ಕಾಲ ಕಾರ್ಯಾ­ಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ರೂ.40 ಲಕ್ಷ ನಷ್ಟವಾಗಿದೆ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳದಲ್ಲಿ ಸುಮಾರು 400 ಕಾರು­ಗಳು ಹಾಗೂ ಇತರೆ ವಾಹನಗಳನ್ನು ನಿಲು­ಗಡೆ ಮಾಡಲಾಗಿತ್ತು. ಅಗ್ನಿ­ಶಾಮಕ ಸಿಬ್ಬಂದಿ ಸ್ಥಳಕ್ಕೆ ಬರುವುದು ತಡವಾಗಿದ್ದರೆ ಎಲ್ಲ ವಾಹನಗಳೂ ಬೆಂಕಿಗೆ ಆಹುತಿಯಾಗುತ್ತಿದ್ದವು ಎಂದು ಪೊಲೀಸರು ಹೇಳಿದ್ದಾರೆ.

ಯಾರೊ ಸೇದಿ ಬಿಸಾಡಿರುವ ಬೀಡಿ ಅಥವಾ ಸಿಗರೇಟ್‌ ತುಂಡಿನಿಂದ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ­­ಲಾಗುತ್ತಿದೆ ಎಂದು ಎಚ್‌ಎಎಲ್‌ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.