ADVERTISEMENT

ಸಂಸದರಿಗೆ ಮೂರೇ ಮೂರು ಬೇಡಿಕೆ

ಉಪನಗರ ರೈಲು: ಪ್ರಧಾನಿ ಕಚೇರಿಯ ಆಕ್ಷೇಪಣೆ ಕೈಬಿಡುವಂತೆ ಸಂಘಟನೆಗಳ ಒತ್ತಾಯ

​ಪ್ರಜಾವಾಣಿ ವಾರ್ತೆ
Published 20 ಜೂನ್ 2019, 20:00 IST
Last Updated 20 ಜೂನ್ 2019, 20:00 IST

ಬೆಂಗಳೂರು: ನಗರದಲ್ಲಿ ಸಬ್‌ ಅರ್ಬನ್‌ ರೈಲು ಸೇವೆ ಆರಂಭಿಸುವಂತೆ ಒತ್ತಾಯಿಸಿ ಹೋರಾಟ ನಡೆಸುತ್ತಿರುವ ವಿವಿಧ ಸಂಘಟನೆಗಳು ಈ ಸಂಬಂಧ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರಿಗೆ ಮೂರು ಪ್ರಮುಖ ಬೇಡಿಕೆಗಳನ್ನು ತುರ್ತಾಗಿ ಈಡೇರಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿವೆ.

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಜತೆ ಇತ್ತೀಚೆಗೆ ಸಭೆ ನಡೆಸಿದ್ದ ರೈಲ್ವೆ ಸಚಿವ ಪೀಯೂಷ್ ಗೋಯಲ್ ಅವರು, ಉಚಿತವಾಗಿ ಭೂಮಿ ಒದಗಿಸುವ ಭರವಸೆ ನೀಡಿದ್ದರು. ಆದರೆ ಪ್ರಧಾನಿ ಕಚೇರಿಯು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು. ಗುತ್ತಿಗೆ ಮೊತ್ತ ಕೂಡ ಯೋಜನಾ ವೆಚ್ಚದ ಭಾಗ ಎಂದು ಪ್ರಧಾನಿ ಕಚೇರಿಯು ರೈಲ್ವೆ ಮಂಡಳಿಗೆ ಇತ್ತೀಚೆಗೆ ಬರೆದಿದ್ದ ಪತ್ರದಲ್ಲಿ ತಿಳಿಸಿತ್ತು.

‘ಈ ಯೋಜನೆಗೆ ಉಚಿತವಾಗಿ ಭೂಮಿ ನೀಡಲು ಪ್ರಧಾನಿ ಕಚೇರಿಯು ಆಕ್ಷೇಪ ವ್ಯಕ್ತಪಡಿಸಿರುವುದು ಆಘಾತ ಉಂಟು ಮಾಡಿದೆ. ಇದರಿಂದ ಇಡೀ ಪ್ರಕ್ರಿಯೆ ಕುಂಠಿತ ಗೊಳ್ಳಲಿದೆ. ಹಾಗಾಗಿ ಪ್ರಧಾನಿ ಕಚೇರಿಯ ಈ ನಿರ್ದೇಶನವನ್ನು ಕೂಡಲೇ ಹಿಂದಕ್ಕೆ ಪಡೆಯುವಂತೆ ಒತ್ತಡ ಹೇರಬೇಕು’ ಎಂದು ಸಂಘಟನೆಗಳು ಒತ್ತಾಯಿಸಿವೆ.

ADVERTISEMENT

‘ಕೆಂಗೇರಿ - ವೈಟ್ ಫೀಲ್ಡ್, ಬೆಂಗಳೂರು ನಗರ - ತುಮಕೂರು, ಯಶವಂತಪುರ - ಹೊಸೂರು ಮಾರ್ಗದ ರೈಲುಗಳ ಸಮಯವನ್ನು ಮರುಹೊಂದಾಣಿಕೆ ಮಾಡಲು ರೈಲುಗಳ ವೇಳಾಪಟ್ಟಿಯನ್ನು ಪರಿಷ್ಕರಿಸಬೇಕು. ಸರ್ಜಾಪುರ ಹಾಗೂ ಹೊರ ವರ್ತುಲ ರಸ್ತೆಯ ಸಮೀಪ ಸುಮಾರು 6 ಲಕ್ಷ ಉದ್ಯೋಗಿಗಳು ಕಚೇರಿಗೆ ಹೋಗಿಬರಲು ಖಾಸಗಿ ವಾಹನಗಳನ್ನು ಉಪಯೋಗಿಸುತ್ತಿದ್ದಾರೆ. ವೇಳಾಪಟ್ಟಿ ಪರಿಷ್ಕರಣೆಯಿಂದ ಇವರಿಗೆ ಅನುಕೂಲವಾಗಲಿದೆ. ಇದಕ್ಕೆ ಯಾವುದೇ ಹೊಸ ಸೌಕರ್ಯಗಳ ನಿರ್ಮಾಣದ ಅಗತ್ಯವಿಲ್ಲ’ ಎಂದು ಸಂಘಟನೆಗಳು ಸಲಹೆ ನೀಡಿವೆ.

‘ಸ್ವಯಂಚಾಲಿತ ಸಿಗ್ನಲಿಂಗ್‌ ವ್ಯವಸ್ಥೆಯನ್ನು ಅಳವಡಿಸುವ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕು. ಇದರಿಂದ ಬೆಂಗಳೂರಿನ ಸುತ್ತಮುತ್ತಲಿನ ಚನ್ನಪಟ್ಟಣ - ಬಂಗಾರಪೇಟೆ - ತುಮಕೂರು - ದೊಡ್ಡಬಳ್ಳಾಪುರ - ಹೊಸೂರು ಮುಂತಾದ ಪ್ರದೇಶಗಳಿಗೆ ಪ್ರಯಾಣಿಸುವವರಿಗೆ ಅನುಕೂಲವಾಗಲಿದೆ. ಈ ಯೋಜನೆಗೆ ಪ್ರತಿ ಕಿಲೋಮೀಟರ್‌ಗೆ ಕೇವಲ ₹ 1 ಕೋಟಿ ವೆಚ್ಚವಾಗಲಿದೆ’ ಎಂದೂ ತಿಳಿಸಿವೆ.

‘ಸಬ್‌ ಅರ್ಬನ್‌ ರೈಲಿಗೆ ಸಂಬಂಧಿಸಿದ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಬೇಕು. ಬಜೆಟ್‌ನಲ್ಲಿ ಈ ಯೋಜನೆಗೆ ಅನುದಾನ ಒದಗಿಸಲು ಒತ್ತಡ ಹೇರಬೇಕು’ ಎಂದು ಚುಕುಬುಕು ಬೇಕು, ಮೊದಲು ರೈಲು ಬೇಕು, ಸಿಟಿಜನ್ಸ್‌ ಫಾರ್‌ ಬೆಂಗಳೂರು, ಪ್ರಜಾರಾಗ್‌, ಬೆಂಗಳೂರು ಸಬ್‌ಅರ್ಬಲ್‌ ರೈಲು ಬಳಕೆದಾರರು, ಕರ್ನಾಟಕ ರೈಲ್ವೆ ಪ್ರಯಾಣಿಕರ ವೇದಿಕೆ ಮೊದಲಾದ ಸಂಘಟನೆಗಳು ಒತ್ತಾಯಿಸಿವೆ.

ಉಪನಗರ ರೈಲು ಬಗ್ಗೆ ಸಂಸತ್ತಿನಲ್ಲಿ ಚರ್ಚೆಗೆ ಚಾಲನೆ ನೀಡಿದ್ದಕ್ಕಾಗಿ ತೇಜಸ್ವಿ ಸೂರ್ಯ ಅವರಿಗೆ ಸಂಘಟನೆಗಳು ಧನ್ಯವಾದ ಸಲ್ಲಿಸಿವೆ.

‘ಸಂಸದರ ತಂಡ ರಚಿಸಿ’
ಬೆಂಗಳೂರಿನ ಹಾಗೂ ಆಸುಪಾಸಿನ ಕ್ಷೇತ್ರಗಳ ಲೋಕಸಭಾ ಸದಸ್ಯರಾದ ಸದಾನಂದ ಗೌಡ, ಪಿ.ಸಿ.ಮೋಹನ್, ಡಿ.ಕೆ.ಸುರೇಶ್, ಮುನಿಸ್ವಾಮಿ, ಬಸವರಾಜು, ತೇಜಸ್ವಿಸೂರ್ಯ ರಾಜ್ಯಸಭಾ ಸದಸ್ಯರಾದ ರಾಜೀವ ಗೌಡ ಹಾಗೂ ರಾಜೀವ್ ಚಂದ್ರಶೇಖರ್ ಅವರನ್ನು ಒಳಗೊ೦ಡ ತಂಡ ರಚಿಸಿಕೊಳ್ಳುವ ಮೂಲಕ ಉಪನಗರ ರೈಲು ಯೋಜನೆಯ ತ್ವರಿತ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ರೈಲ್ವೆ ಹೋರಾಟಗಾರರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.