ADVERTISEMENT

₹ 4,000 ಕೋಟಿ ಖರ್ಚು; 16,000 ಗುಂಡಿಗಳು ಬಾಕಿ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2017, 19:48 IST
Last Updated 12 ಅಕ್ಟೋಬರ್ 2017, 19:48 IST
ರಾಜಾಜಿನಗರದ ಮುಖ್ಯರಸ್ತೆಯಲ್ಲಿ ಬಿದ್ದಿದ್ದ ಗುಂಡಿಗಳಿಗೆ ಗುರುವಾರ ಕಾರ್ಮಿಕರು ಡಾಂಬರು ಹಾಕಿದರು
ರಾಜಾಜಿನಗರದ ಮುಖ್ಯರಸ್ತೆಯಲ್ಲಿ ಬಿದ್ದಿದ್ದ ಗುಂಡಿಗಳಿಗೆ ಗುರುವಾರ ಕಾರ್ಮಿಕರು ಡಾಂಬರು ಹಾಕಿದರು   

ಬೆಂಗಳೂರು: ‘ನಗರದ ರಸ್ತೆಗಳ ಅಭಿವೃದ್ಧಿಗಾಗಿ ನಾಲ್ಕು ವರ್ಷಗಳಿಂದ ₹ 4,000 ಕೋಟಿ ಖರ್ಚು ಮಾಡಿದ್ದರೂ ಸುಮಾರು 16 ಸಾವಿರ ಗುಂಡಿಗಳು ಹಾಗೆಯೇ ಉಳಿದಿವೆ. ರಸ್ತೆಗಳನ್ನು ಗುಂಡಿಮುಕ್ತಗೊಳಿಸುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದರು.

ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ಕಂಟೋನ್ಮೆಂಟ್ ರೈಲ್ವೆ ಕೆಳಸೇತುವೆ ಬಳಿಯ ರಸ್ತೆ ಗುಂಡಿಯಲ್ಲಿ ಸಾಂಕೇತಿಕವಾಗಿ ಗಿಡ ನೆಟ್ಟು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಪರಿಷತ್‌ನ ವಿರೋಧಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ, ಶಾಸಕ ಆರ್.ಅಶೋಕ, ಬಿಜೆಪಿ ಮುಖಂಡರಾದ ಕಟ್ಟಾಸುಬ್ರಹ್ಮಣ್ಯ ನಾಯ್ಡು, ನೆ.ಲ.ನರೇಂದ್ರಬಾಬು ಹಾಗೂ ನೂರಾರು ಕಾರ್ಯಕರ್ತರು ಯಡಿಯೂರಪ್ಪ ಅವರ ಜತೆ ನಗರ ಪ್ರದಕ್ಷಿಣೆ ಹಾಕಿದರು.

ADVERTISEMENT

ಶಾಸಕ ಆರ್.ಅಶೋಕ ಮಾತನಾಡಿ, ಗುಂಡಿ ಮುಚ್ಚದಿದ್ದರೆ ಚುನಾವಣೆಯಲ್ಲಿ ಬೆಂಗಳೂರಿಗರು ಬೇರೆ ಪಕ್ಷಗಳಿಗೆ ಎಲೆಕ್ಟ್ರಾನಿಕ್ ಮತಯಂತ್ರದ ಗುಂಡಿ ಒತ್ತುವ ಮೂಲಕ ಕಾಂಗ್ರೆಸ್‌ಗೆ ‘ಗುಂಡಿ’ ತೋಡುವುದು ನಿಶ್ಚಿತ. ಗುಂಡಿ ಮುಚ್ಚಲು ಖರ್ಚು ಮಾಡಿದ ₹ 4,000 ಕೋಟಿ ಯಾರ ಜೇಬಿಗೆ ಹೋಗಿದೆ. ಈ ಸಂಬಂಧ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂದು  ಪ್ರಶ್ನಿಸಿದರು.

ಗುಂಡಿ ಸುತ್ತ ಬಣ್ಣ ಬಳಿದ ಆರ್.ಅಶೋಕ್
ಕಂಟೋನ್ಮೆಂಟ್ ರೈಲ್ವೆ ಕೆಳಸೇತುವೆ ಬಳಿ ಪರಿಶೀಲನೆ ಬಳಿಕ ಶಿವಾಜಿನಗರ ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಬಂದ ಯಡಿಯೂರಪ್ಪ ನೇತೃತ್ವದ ಬಿಜೆಪಿ ತಂಡಕ್ಕೆ ಬೃಹತ್ ಗುಂಡಿಗಳು ಸ್ವಾಗತ ಕೋರಿದವು. ಆರ್.ಅಶೋಕ ಹಾಗೂ ನೆ.ಲ.ನರೇಂದ್ರಬಾಬು ಗುಂಡಿಗಳ ಸುತ್ತ ಬಿಳಿ ಬಣ್ಣದಿಂದ ಪಟ್ಟಿ ಬಳೆದು ಆಕ್ರೋಶ ವ್ಯಕ್ತಪಡಿಸಿದರು.

ಬೊಮ್ಮನಹಳ್ಳಿಯ ರಸ್ತೆಯೊಂದರ ಗುಂಡಿಯಲ್ಲಿ ಕುರ್ಚಿ ಇಟ್ಟು, ಅದರ ಮೇಲೆ ಸಿ.ಎಂ (ಮುಖ್ಯಮಂತ್ರಿ) ಎಂದು ಬರೆದು ಕಿಡಿಕಾರಿದರು. ಬಳಿಕ ಮುಖಂಡರ ತಂಡವು ಹಲಸೂರು ಮೆಟ್ರೊ ನಿಲ್ದಾಣದ ರಸ್ತೆ, ಶಾಂತಿನಗರದ ಪ್ರಮುಖ ರಸ್ತೆ ಗುಂಡಿಗಳ ವೀಕ್ಷಣೆ ಮಾಡಿ ಸಿದ್ದರಾಮಯ್ಯ, ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಗೃಹ ಸಚಿವ ರಾಮಲಿಂಗಾರೆಡ್ಡಿ ಅವರ ಅಣುಕು ಶವಯಾತ್ರೆ ನಡೆಸಿತು. ಸಿಲ್ಕ್‌ಬೋರ್ಡ್‌ ಹಾಗೂ ಬೊಮ್ಮನಹಳ್ಳಿಗೆ ಭೇಟಿ ನೀಡಿ ಮಳೆಯಿಂದ ತೊಂದರೆಗೀಡಾದ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿತು.

ಯಡಿಯೂರಪ್ಪ ಮುಂದೆ ನಿವಾಸಿಗಳ ಅಳಲು
ಶಿವಾಜಿನಗರದ ಪೊಲೀಸ್ ವಸತಿ ಸಮುಚ್ಚಯದಲ್ಲಿ ಪರಿಶೀಲನೆ ನಡೆಸಿದ ಬಿಜೆಪಿ ಮುಖಂಡರ ಮುಂದೆ ಇಲ್ಲಿನ ನಿವಾಸಿಗಳು ಅಳಲು ತೋಡಿಕೊಂಡರು.

‘ಹೊಸ ಕಟ್ಟಡ ನಿರ್ಮಿಸಲು ಲೋಕೋಪಯೋಗಿ ಇಲಾಖೆಯವರು 48 ಮನೆಗಳಿದ್ದ ಎರಡು ಬ್ಲಾಕ್‌ಗಳನ್ನು (ಸಮುಚ್ಚಯ) ಏಳು ತಿಂಗಳ ಹಿಂದೆ ಕೆಡವಿದ್ದಾರೆ. ಶಿಥಿಲಗೊಂಡ ಮನೆಗಳ ಬದಲಿಗೆ ಚೆನ್ನಾಗಿದ್ದ ಆ ಎರಡು ಬ್ಲಾಕ್‌ಗಳನ್ನು ನೆಲಸಮಗೊಳಿಸಿದ್ದು, ಇದುವರೆಗೂ ಕಾಮಗಾರಿ ಆರಂಭಿಸಿಲ್ಲ. ಆ ಮನೆಗಳಲ್ಲಿದ್ದ ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿಲ್ಲ’ ಎಂದು ಮಂಜುಳಾ ಸುರೇಶ್‌ಬಾಬು ಹೇಳಿದರು.

ಬಿಬಿಎಂಪಿಗೆ ಶಾಸಕರ ಸಂಬಳ
‘ನಗರದಲ್ಲಿ ಬಿಜೆಪಿಯ 12 ಶಾಸಕರು ಹಾಗೂ 100 ಪಾಲಿಕೆ ಸದಸ್ಯರಿದ್ದಾರೆ. ಗುಂಡಿ ಮುಚ್ಚಲು ಬಳಸಿಕೊಳ್ಳಲು ಶಾಸಕರ ಮೂರು ತಿಂಗಳ ಸಂಬಳ ಹಾಗೂ ಪಾಲಿಕೆ ಸದಸ್ಯರ ಗೌರವಧನವನ್ನು  ಬಿಬಿಎಂಪಿಗೆ ನೀಡುತ್ತೇವೆ’ ಎಂದು ಶಾಸಕ ಆರ್.ಅಶೋಕ್ ತಿಳಿಸಿದರು.

ಪ್ರತಿ ತಿಂಗಳು ಶಾಸಕರಿಗೆ ₹ 25,000 ಸಂಬಳ ಹಾಗೂ ಪಾಲಿಕೆ ಸದಸ್ಯರಿಗೆ ₹7,500 ಗೌರವಧನ ಸಿಗುತ್ತದೆ. ಇದೆಲ್ಲ ಸೇರಿ ಒಟ್ಟು ₹16.50 ಲಕ್ಷ ಬಿಬಿಎಂಪಿ ಖಾತೆಗೆ ಜಮೆಯಾಗಲಿದೆ ಎಂದು ಜನಪ್ರತಿನಿಧಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.