ADVERTISEMENT

ವಿದ್ಯಾರ್ಥಿಗಳ 18 ಟೆಲಿಸ್ಕೋಪ್‌!

ವಿದ್ಯಾರ್ಥಿಗಳ 18 ಟೆಲಿಸ್ಕೋಪ್‌!

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2020, 20:00 IST
Last Updated 4 ಫೆಬ್ರುವರಿ 2020, 20:00 IST
ತಾವೇ ತಯಾರಿಸಿದ ಟೆಲಿಸ್ಕೋಪ್‌ ಜತೆ ವಿದ್ಯಾರ್ಥಿಗಳು
ತಾವೇ ತಯಾರಿಸಿದ ಟೆಲಿಸ್ಕೋಪ್‌ ಜತೆ ವಿದ್ಯಾರ್ಥಿಗಳು   

ಮಕ್ಕಳಿಗೆಬಾಲ್ಯದಿಂದಲೇ ಬಾನಲ್ಲಿ ಬೆಳದಿಂಗಳ ಚೆಲ್ಲುವ ಚಂದಿರನೆಂದರೆ ಅದೇನೋ ಆಕರ್ಷಣೆ ಮತ್ತು ಕುತೂಹಲ.ರಾತ್ರಿ ಸ್ವಚ್ಛಂದ ಆಗಸದಲ್ಲಿ ಮಿನುಗುವ ನಕ್ಷತ್ರ, ಚಂದಿರ ಮತ್ತು ಸೂರ್ಯ ಸದಾ ಅವರ ಕುತೂಹಲದ ಕೇಂದ್ರ. ಆಕಾಶಕಾಯಗಳ ಬಗ್ಗೆ ಅವರ ಕುತೂಹಲ ಬೆಳೆಯುತ್ತಲೇ ಹೋಗುತ್ತದೆ.

ಆಕಾಶಕಾಯಗಳ ಇಂತಹ ಕುತೂಹಲವೇ ನಗರದ ಹೆಸರಘಟ್ಟ ರಸ್ತೆಯಲ್ಲಿರುವತ್ರಿವೇಣಿ ಪಬ್ಲಿಕ್‌ ಶಾಲೆಯ ಮಕ್ಕಳಿಗೆ ದೂರದರ್ಶಕ (ಟೆಲಿಸ್ಕೋಪ್‌) ತಯಾರು ಮಾಡಲು ಪ್ರೇರಣೆಯಾಗಿದೆ. ಹೌದು! ಈ ಶಾಲೆಯ ವಿದ್ಯಾರ್ಥಿಗಳು ಒಟ್ಟು 18ದೂರದರ್ಶಕಗಳನ್ನು ತಯಾರಿಸಿದ್ದಾರೆ.

ಆಕಾಶಕಾಯಗಳ ವೀಕ್ಷಣೆ ಮತ್ತು ಖಭೌತ ವಿಜ್ಞಾನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಲು ನಗರದ ತ್ರಿವೇಣಿ ಪಬ್ಲಿಕ್‌ ಸ್ಕೂಲ್‌ ಕಳೆದ ಅಕ್ಟೋಬರ್‌ನಲ್ಲಿ ದೂರದರ್ಶಕ ಅಭಿವೃದ್ಧಿಪಡಿಸುವ ಯೋಜನೆ ಕೈಗೆತ್ತಿಕೊಂಡಿತ್ತು.

ADVERTISEMENT

ಶಾಲೆಯ ಐಸಿಎಸ್‌ಇ ಮತ್ತು ಸ್ಟೇಟ್‌ ಸಿಲಬಸ್‌ನ 6ರಿಂದ 9ನೇ ತರಗತಿಯ 42 ಆಸಕ್ತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅಕ್ಟೋಬರ್‌ ದಸರಾ ರಜೆಯಲ್ಲಿ ದೂರದರ್ಶಕಗಳನ್ನು ವಿನ್ಯಾಸಗೊಳಿಸುವ ಪ್ರಾಜೆಕ್ಟ್‌ ನೀಡಲಾಗಿತ್ತು. ಅವರಿಗೆ ಮಾರ್ಗದರ್ಶನ ಮಾಡಲು ಆರ್ಯಭಟ ಸಂಚಾರಿ ತಾರಾಲಯದತರಬೇತಿ ಮತ್ತು ಕಾರ್ಯಾಚರಣೆಯ ಮುಖ್ಯಸ್ಥ ಸತೀಶ್‌ ಅವರ ನೆರವು ಪಡೆಯಲಾಯಿತು.ಶಾಲೆಯ ವಿಜ್ಞಾನ ಶಿಕ್ಷಕರಾದ ನಾಗಲಕ್ಷ್ಮಿ, ಸುಷ್ಮಾ ಬಿ.ಮತ್ತು ಕಿರಣ್‌ ಕುಮಾರ್‌ ನೇತೃತ್ವದ ಶಿಕ್ಷಕರ ತಂಡ ವಿದ್ಯಾರ್ಥಿಗಳ ನೆರವಿಗೆ ನಿಂತಿತು.

ದೂರದರ್ಶಕ ತಯಾರಿಸಲು ಅಗತ್ಯವಾದ ಕೊಳವೆ, ಮಸೂರ ಹಾಗೂ ಇತರ ಕಚ್ಚಾವಸ್ತುಗಳನ್ನು ಶಾಲೆಯಿಂದಲೇ ನೀಡಲಾಗಿತ್ತು. ವಿವಿಧ ಆಕಾರ ಮತ್ತು ಗಾತ್ರದ ಪಿವಿಸಿ ಕೊಳವೆಗಳನ್ನು ಬಳಸಿ ವಿದ್ಯಾರ್ಥಿಗಳು ಟೆಲಿಸ್ಕೋಪ್‌ ಸಿದ್ಧಪಡಿಸಿದರು.ಎರಡು ವಾರಗಳಲ್ಲಿಯೇ ವಿದ್ಯಾರ್ಥಿಗಳು ತಮಗೆ ಒಪ್ಪಿಸಿದ ಕೆಲಸ ಮಾಡಿ ಮುಗಿಸಿದರು. ತಾವೇ ಸಿದ್ಧಪಡಿಸಿದ 18 ದೂರದರ್ಶಕಗಳಲ್ಲಿ ಆಕಾಶಕಾಯಗಳನ್ನು ವೀಕ್ಷಿಸಿ, ಸಂಭ್ರಮಿಸಿದರು.

ಡಿಸೆಂಬರ್‌ ಮತ್ತು ಜನವರಿಯಲ್ಲಿ ಆಕಾಶ ವೀಕ್ಷಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶಾಲೆಯ ಆಡಳಿತ ಮಂಡಳಿ ಸದಸ್ಯರು ಮತ್ತು ಪಾಲಕರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಟೆಲಿಸ್ಕೋಪ್‌ ಮೂಲಕ ಚಂದ್ರನ ಕುಳಿಗಳನ್ನು ವೀಕ್ಷಿಸಿದ ಪಾಲಕರು ತಮ್ಮ ಮಕ್ಕಳ ಕೆಲಸದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು ಎಂದು ಶಾಲೆಯ ಪ್ರಾಚಾರ್ಯೆ ಅನಿತಾ ಆರ್‌. ಪಾಟೀಲ ‘ಮೆಟ್ರೊ’ಗೆ ತಿಳಿಸಿದರು.

ಇನ್ಫೊಸಿಸ್‌ ಸಂಸ್ಥೆ ಏರ್ಪಡಿಸಿದ್ದ ‘ಎಪಿಸ್ಟೆಮ್‌’ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ತ್ರಿವೇಣಿ ಪಬ್ಲಿಕ್‌ ಶಾಲೆಯ ವಿದ್ಯಾರ್ಥಿಗಳು ಪ್ರದರ್ಶಿಸಿದ ದೂರದರ್ಶಕ ಮಾದರಿಗಳಿಗೆ ಮೊದಲ ಬಹುಮಾನ ಬಂದಿದೆ. ಈ ಪ್ರದರ್ಶನದಲ್ಲಿ ಬೆಂಗಳೂರಿನ 50ಕ್ಕೂ ಹೆಚ್ಚು ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅತ್ಯಂತ ಕಡಿಮೆ ಖರ್ಚಿನಲ್ಲಿ ಹೆಚ್ಚು ಸಾಮರ್ಥ್ಯದ ಟೆಲಿಸ್ಕೋಪ್‌ ತಯಾರಿಸಿದ ವಿದ್ಯಾರ್ಥಿಗಳ ಸಾಧನೆಗೆ ತೀರ್ಪುಗಾರರು ಮೆಚ್ಚುಗೆ ವ್ಯಕ್ತಪಡಿಸಿದರು ಎಂದರು.

ತ್ರಿವೇಣಿ ಮೆಮೋರಿಯಲ್‌ ಎಜುಕೇಶಷನ್‌ ಟ್ರಸ್ಟ್‌ ಕಾರ್ಯದರ್ಶಿ ಮಂಜುನಾಥ ಕೆ., ಶೈಕ್ಷಣಿಕ ಸಲಹೆಗಾರ ನಾಗರಾಜ ಕೆ.ವಿ., ಟಿಎಂಪಿಎಚ್ಎಸ್‌ ಪ್ರಾಚಾರ್ಯೆ ಉಷಾರಾಣಿ ಹಾಗೂ ಪಾಲಕರ ಸಹಕಾರ ಯೋಜನೆ ಯಶಸ್ಸಿಗೆ ಕಾರಣ ಎಂದು ಪ್ರಾಚಾರ್ಯೆ ಅನಿತಾ ಪಾಟೀಲ ಸ್ಮರಿಸುತ್ತಾರೆ.

ಟೆಲಿಸ್ಕೋಪ್‌ ತಯಾರಿಸಲು ಶಾಲೆ ತಮಗೆ ನೀಡಿದ ಪ್ರಾಜೆಕ್ಟ್‌ ಬಗ್ಗೆ ವಿದ್ಯಾರ್ಥಿಗಳು ಹೆಮ್ಮೆಪಡುತ್ತಾರೆ. ಶಾಲೆಯ ಆಡಳಿತ ಮಂಡಳಿ, ಪ್ರಾಚಾರ್ಯರು ಮತ್ತು ಶಿಕ್ಷಕರು ನೀಡಿದ ಮಾರ್ಗದರ್ಶನ ಮತ್ತು ಪ್ರೋತ್ಸಾಹವನ್ನು ಅವರು ಮನದುಂಬಿ ನೆನೆಯುತ್ತಾರೆ.ದಸರಾ ರಜೆಯನ್ನು ಮೋಜು, ಮಸ್ತಿಯಲ್ಲಿ ಕಳೆಯದೆ, ಸಂಪೂರ್ಣ ಸದುಪಯೋಗ ಪಡಿಸಿಕೊಂಡೆವು. ಮುಂದೆಯೂ ಇಂತ ಪ್ರಾಜೆಕ್ಟ್‌ ಮಾಡುವ ಉತ್ಸಾಹ ಇಮ್ಮಡಿಗೊಂಡಿದೆ ಎನ್ನುತ್ತಾರೆ ವಿದ್ಯಾರ್ಥಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.