ADVERTISEMENT

50 ಕಟ್ಟಡ ನೆಲಸಮ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2016, 20:29 IST
Last Updated 11 ಆಗಸ್ಟ್ 2016, 20:29 IST
ದೊಡ್ಡಬೊಮ್ಮಸಂದ್ರದಲ್ಲಿ ತೆರವು ಕಾರ್ಯಾಚರಣೆಯ ನಡುವೆಯೇ ಸ್ಥಳೀಯರು ಮನೆಯ ಸಾಮಾನುಗಳ ಸ್ಥಳಾಂತರದಲ್ಲಿ ತೊಡಗಿದ್ದರು
ದೊಡ್ಡಬೊಮ್ಮಸಂದ್ರದಲ್ಲಿ ತೆರವು ಕಾರ್ಯಾಚರಣೆಯ ನಡುವೆಯೇ ಸ್ಥಳೀಯರು ಮನೆಯ ಸಾಮಾನುಗಳ ಸ್ಥಳಾಂತರದಲ್ಲಿ ತೊಡಗಿದ್ದರು   

ಬೆಂಗಳೂರು: ನಗರದ ವಿವಿಧೆಡೆ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಗುರುವಾರವೂ ಮುಂದುವರಿದಿತ್ತು. ಯಲಹಂಕ ವಲಯದ  ದೊಡ್ಡಬೊಮ್ಮಸಂದ್ರದಲ್ಲಿ ಜೆಸಿಬಿ ಹಾಗೂ ಬೃಹತ್ ಕಟರ್ ಯಂತ್ರಗಳ  ಸದ್ದು ಜೋರಾಗಿತ್ತು.

ದಕ್ಷಿಣ ವಲಯದ ಚಿಕ್ಕಪೇಟೆ ಹಾಗೂ ಶ್ರೀನಗರದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಿತು. ಶ್ರೀನಗರದಲ್ಲಿ ಕಾರ್ಪೊರೇಟರ್‌ ಕಚೇರಿ ಸೇರಿದಂತೆ ಹಲವು ಕಟ್ಟಡಗಳು ನೆಲಸಮಗೊಂಡವು.  ಮಹದೇವಪುರದ ಕಸವನಹಳ್ಳಿಯ ಶುಭ್‌ಎನ್‌ಕ್ಲೇವ್‌ನಲ್ಲಿ ಕಟ್ಟಡಗಳ ಮಾಲೀಕರು ಸ್ವಯಂ ತೆರವು ಮಾಡಿದರು. ಒಂದೇ ದಿನ 50ಕ್ಕೂ ಹೆಚ್ಚು ಕಟ್ಟಡಗಳನ್ನು ನೆಲಸಮ ಮಾಡಲಾಯಿತು.

ದೊಡ್ಡ ಬೊಮ್ಮಸಂದ್ರದಲ್ಲಿ ಬಿಸಿಲು   ಏರುವ ಹೊತ್ತಿಗೆ ಆರ್ಭಟ ಆರಂಭಿಸಿದ ಯಂತ್ರಗಳು  ಸಂಜೆಯ ಹೊತ್ತಿಗೆ 20ಕ್ಕೂ ಅಧಿಕ ಮನೆಗಳು ಸೇರಿದಂತೆ ಸುಮಾರು 45 ಕಟ್ಟಡಗಳನ್ನು ಅಕ್ಷರಶಃ ನೆಲಸಮಗೊಳಿಸಿದವು.

ಸರ್ಕಾರಿ ಶಾಲೆ ಪಕ್ಕದ ಪೇಟ ಸಿದ್ದಪ್ಪ ತಿರುವಿನಲ್ಲಿ ರಾಜಕಾಲುವೆ ಒತ್ತುವರಿ ಮಾಡಿದ್ದ ಕಟ್ಟಡಗಳ ಜೊತೆಗೆ ಸರ್ಕಾರಿ ಜಮೀನಿನಲ್ಲಿ  ದಶಕಗಳ ಹಿಂದೆ ತಲೆಎತ್ತಿದ್ದ  ಮನೆಗಳು, ವಾಣಿಜ್ಯ ಮಳಿಗೆಗಳನ್ನು ತೆರವು ಮಾಡಿದ್ದು ವಿಶೇಷ.

ತೆರವು ಕಾರ್ಯಾಚರಣೆಯ ವೇಳೆ ಚಹ ಪೂರೈಸಿದ್ದ ಪ್ರಿಯ ದರ್ಶಿನಿ ಹೋಟೆಲ್‌ ಸೇರಿದಂತೆ ಬುಧವಾರ ವಹಿವಾಟು ನಡೆಸಿದ್ದ  ಅಂಗಡಿಗಳು        ಗುರುವಾರ ಅವಶೇಷಗಳಾಗಿ ನೆಲಕ್ಕೊರಗಿದವು.

‘ರಾಜಕಾಲುವೆ ಒತ್ತುವರಿ ತೆರವಿನ ಜೊತೆಗೆ ಕೋಟ್ಯಂತರ ಮೌಲ್ಯದ 55 ಸಾವಿರ ಚದರ ಅಡಿಗಳಿಗೂ ಹೆಚ್ಚು  ಸರ್ಕಾರಿ ಜಾಗ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಪೇಟ ಸಿದ್ದಪ್ಪ ತಿರುವಿನಲ್ಲಿ ರಸ್ತೆ ವಿಸ್ತರಣೆ  ಮಾಡಬೇಕು ಎಂಬುದು ಸ್ಥಳೀಯರ ಆಶಯವಾಗಿತ್ತು. ಈಗಿನ ಒತ್ತುವರಿ ತೆರವಿನಿಂದ ಅದು ಸಾಕಾರಗೊಳ್ಳಲಿದೆ’ ಎಂದು ಯಲಹಂಕ ವಲಯದ ಬಿಬಿಎಂಪಿ ಜಂಟಿ ಆಯುಕ್ತ ಸರ್ಫರಾಜ್‌ ಖಾನ್ ಹೇಳಿದರು.

ಐದು ಕಟ್ಟಡ ತೆರವು: ‘ಗುರುವಾರ ನಡೆದ ಕಾರ್ಯಾಚರಣೆಯಲ್ಲಿ ಶ್ರೀನಗರದಲ್ಲಿ ಕಾರ್ಪೊರೇಟರ್‌ ಕಚೇರಿ, ಪೊಲೀಸ್ ಚೌಕಿ ಸೇರಿದಂತೆ ಗುರುವಾರ ಒಟ್ಟು 5 ಕಟ್ಟಡಗಳನ್ನು ತೆರವುಗೊಳಿಸಲಾಗಿದೆ’ ಎಂದು ಬೆಂಗಳೂರು ದಕ್ಷಿಣ ವಲಯದ ಜಂಟಿ ಆಯುಕ್ತ ಎ.ಬಿ. ಹೇಮಚಂದ್ರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಚಿಕ್ಕಪೇಟೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಒತ್ತುವರಿ ತೆರವು ಕಾರ್ಯ ನಡೆಯುತ್ತಿದೆ.   ಸಿದ್ದಯ್ಯ ರಸ್ತೆಯಲ್ಲಿ ಯಂತ್ರಗಳ ಬಳಕೆ ಅಸಾಧ್ಯ.

ಆದ್ದರಿಂದ ಕಾರ್ಮಿಕರನ್ನು ಬಳಸಿಕೊಂಡು ತೆರವು ಮಾಡಿಸುತ್ತಿದ್ದೇವೆ. ಒಟ್ಟು 9 ಕಟ್ಟಡಗಳನ್ನು ತೆರವಿಗೆ ಗುರುತಿಸಲಾಗಿದ್ದು, ಈ ತನಕ 4 ಕಟ್ಟಡಗಳನ್ನು ತೆರವು ಮಾಡಲಾಗಿದೆ’ ಎಂದರು.

ತೆರವು 4 ದಿನ ಸ್ಥಗಿತ
ಸರಣಿ ರಜೆಗಳು ಬಂದಿರುವ ಕಾರಣ ಶುಕ್ರವಾರದಿಂದ ನಾಲ್ಕು ದಿನಗಳ ಕಾಲ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ಬಿಬಿಎಂಪಿ ಅಧಿಕಾರಿಗಳು ನಿರ್ಧಾರ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.