ADVERTISEMENT

50 ಲಕ್ಷ ಜನರಿಗೆ ಕೌಶಲ ಅಭಿವೃದ್ಧಿ ತರಬೇತಿ ಗುರಿ

​ಪ್ರಜಾವಾಣಿ ವಾರ್ತೆ
Published 3 ಜುಲೈ 2012, 19:30 IST
Last Updated 3 ಜುಲೈ 2012, 19:30 IST
50 ಲಕ್ಷ ಜನರಿಗೆ ಕೌಶಲ ಅಭಿವೃದ್ಧಿ ತರಬೇತಿ ಗುರಿ
50 ಲಕ್ಷ ಜನರಿಗೆ ಕೌಶಲ ಅಭಿವೃದ್ಧಿ ತರಬೇತಿ ಗುರಿ   

ಬೆಂಗಳೂರು: `ದೇಶದ ತಾಂತ್ರಿಕ ಪದವೀಧರರ ವೃತಿ ಕೌಶಲದ ಕೊರತೆ ತುಂಬಲು 2022ರ ವೇಳೆಗೆ ದೇಶದಲ್ಲಿ 50 ಲಕ್ಷ ಜನರ ಕೌಶಲ ಅಭಿವೃದ್ಧಿ ತರಬೇತಿಯ ಗುರಿ ಹೊಂದಲಾಗಿದೆ~ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ತಾಂತ್ರಿಕ ವಿಭಾಗದ ನಿರ್ದೇಶಕ ಎನ್.ಮೋಹನ್‌ದಾಸ್ ಹೇಳಿದರು.

ನಗರದಲ್ಲಿ ಮಂಗಳವಾರ ಟೀಮ್‌ಲೀಸ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್‌ನ ಸಹಯೋಗದೊಂದಿಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ವೃತ್ತಿ ಕೌಶಲ ತರಬೇತಿ ಮಂಡಳಿಯ ದಕ್ಷಿಣ ಪ್ರಾದೇಶಿಕ ಕೇಂದ್ರ ಆಯೋಜಿಸಿದ್ದ ವೃತ್ತಿ ಕೌಶಲ ತರಬೇತಿ ಕುರಿತ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

`ಅಗಾಧವಾದ ಮಾನವ ಸಂಪನ್ಮೂಲ ಲಭ್ಯವಿದ್ದರೂ ವೃತ್ತಿ ಕೌಶಲದ ಕೊರತೆಯಿಂದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತ ಹಿಂದುಳಿಯುವಂತಾಗಿದೆ. ದೇಶದಲ್ಲಿ ಪ್ರತಿವರ್ಷ ಏಳು ಲಕ್ಷ ಎಂಜಿನಿಯರಿಂಗ್ ಪದವೀಧರರು ಮತ್ತು ಎಂಟು ಲಕ್ಷ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಶಿಕ್ಷಣ ಮುಗಿಸಿ ಹೊರಬರುತ್ತಿದ್ದಾರೆ. ಆದರೆ ಇವರಲ್ಲಿನ ವೃತ್ತಿ ಕೌಶಲದ ಕೊರತೆಯಿಂದಾಗಿ ನಿರೀಕ್ಷಿತ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಚಿವಾಲಯದ ವೃತ್ತಿ ಕೌಶಲ ತರಬೇತಿ ಮಂಡಳಿಯ ವತಿಯಿಂದ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ~ ಎಂದು ಅವರು ತಿಳಿಸಿದರು.

`ತಾಂತ್ರಿಕ ಶಿಕ್ಷಣದ ಪದವಿ ಅಥವಾ ಡಿಪ್ಲೊಮಾ ನಂತರ ಶೇ 10 ರಿಂದ 15 ರಷ್ಟು ಜನರು ಮಾತ್ರ ಉನ್ನತ ವಿದ್ಯಾಭ್ಯಾಸಕ್ಕೆ ಹೋಗುತ್ತಾರೆ. ಉಳಿದವರು ಕೈಗಾರಿಕಾ ವಲಯದಲ್ಲಿ ವೃತ್ತಿ ಆರಂಭಿಸುತ್ತಾರೆ. ವರ್ಷಕ್ಕೆ ಸುಮಾರು 13 ಲಕ್ಷ ಜನರು ಹೊಸದಾಗಿ ಕೈಗಾರಿಕೆಗಳಿಗೆ ಸೇರಿದರೂ ನಿರೀಕ್ಷಿತ ಸಾಧನೆ ಸಾಧ್ಯವಾಗುತ್ತಿಲ್ಲ. ವೃತ್ತಿ ಕೌಶಲದ ಕೊರತೆಯ ಪರಿಣಾಮ ಉತ್ಪಾದನೆಯ ಮೇಲೆ ಆಗುತ್ತಿದೆ~ ಎಂದು ಅವರು ವಿಷಾದಿಸಿದರು.

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತಿನ ಸದಸ್ಯ ಕಾರ್ಯದರ್ಶಿ ಡಾ.ಕುಂಚೇರಿಯಾ ಪಿ. ಐಸಾಕ್ ಮಾತನಾಡಿ, `ತಾಂತ್ರಿಕ ಶಿಕ್ಷಣ ನೀಡುವ ಶಿಕ್ಷಣ ಸಂಸ್ಥೆಗಳು ವೃತ್ತಿ ಕೌಶಲ ತರಬೇತಿ ನೀಡುವಲ್ಲಿ ಹಿಂದುಳಿದಿವೆ. ಹಿಂದಿನ ಒಂದು ದಶಕದಲ್ಲಿ ಸರ್ಕಾರಿ ಮತ್ತು ಖಾಸಗಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಸಾಧಿಸಿರುವ ಪ್ರಗತಿ ಆಶಾದಾಯಕವಾಗಿಲ್ಲ.

ದೇಶದಲ್ಲಿ ಪ್ರತಿವರ್ಷ 24 ಲಕ್ಷ ವಿದ್ಯಾರ್ಥಿಗಳು ಎಲ್ಲಾ ವಿಭಾಗಗಳಲ್ಲಿ ತಾಂತ್ರಿಕ ಶಿಕ್ಷಣ ಪಡೆಯುತ್ತಿದ್ದಾರೆ. ಇವರಲ್ಲಿ ಬಹುಪಾಲು ಜನರಿಗೆ ವೃತ್ತಿ ಕೌಶಲದ ಕೊರತೆ ಇದೆ. ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲಾ ಮಟ್ಟದ ಪಠ್ಯಕ್ರಮದಲ್ಲಿ ತಾಂತ್ರಿಕ ಶಿಕ್ಷಣದ ವಿಷಯಗಳನ್ನು ಅಳವಡಿಸದೇ ಇರುವುದು ಇದಕ್ಕೆ ಮುಖ್ಯ ಕಾರಣ~ ಎಂದು ಅವರು ಹೇಳಿದರು.

`ಕೈಗಾರಿಕೆಗಳು ಮತ್ತು ತಾಂತ್ರಿಕ ಶಿಕ್ಷಣ ಸಂಸ್ಥೆಗಳ ನಡುವಿನ ಕಂದರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅಭಿವೃದ್ಧಿಯ ಕಾರಣಕ್ಕಾಗಿ ಕೈಗಾರಿಕೆಗಳು ಮತ್ತು ತಾಂತ್ರಿಕ ವಿದ್ಯಾಸಂಸ್ಥೆಗಳ ನಡುವೆ ಪರಸ್ಪರ ಸಹಕಾರ ಅನಿವಾರ್ಯ. ಎಲ್ಲಾ ಕೈಗಾರಿಕಾ ಸಂಸ್ಥೆಗಳೂ ಸಂಶೋಧನಾ ವಿಭಾಗಗಳನ್ನು ಹೊಂದುವ ಮೂಲಕ ಉತ್ಪಾದನೆಯ ಹೆಚ್ಚಳಕ್ಕೆ ಹೊಸ ಅಧ್ಯಯನಗಳ ಕಡೆಗೆ ಒತ್ತು ನೀಡಬೇಕು~ ಎಂದು ಅವರು ಕರೆ ನೀಡಿದರು.

ವೃತ್ತಿ ಕೌಶಲ ತರಬೇತಿ ಮಂಡಳಿಯ ಚೆನ್ನೈನ ದಕ್ಷಿಣ ಪ್ರಾದೇಶಿಕ ಕೇಂದ್ರದ ಮುಖ್ಯಸ್ಥ ಮನೀಶ್ ಸಭರ್‌ವಾಲ್ ಮಾತನಾಡಿ, `ವೃತ್ತಿ ಕೌಶಲದ ಕೊರತೆಯಿಂದ ಆರ್ಥಿಕ ವ್ಯವಸ್ಥೆಯ ಮೇಲೆ ನೇರ ಪರಿಣಾಮ ಉಂಟಾಗುತ್ತಿದೆ. ಬೇಡಿಕೆ ಮತ್ತು ಪೂರೈಕೆಗಳಲ್ಲಿನ ಅಗಾಧವಾದ ಅಂತರಕ್ಕೆ ವೃತ್ತಿ ಕೌಶಲದ ಕೊರತೆಯೂ ಕಾರಣ. ವೃತ್ತಿ ಶಿಕ್ಷಣದ ಜೊತೆಗೆ ವೃತ್ತಿ ಕೌಶಲ ನೀಡಲು ಮಂಡಳಿಯಿಂದ ಅಗತ್ಯವಾದ ನೆರವು ನೀಡಲಾಗುವುದು~ ಎಂದರು.

`ಕೈಗಾರಿಕೆಗಳು ಮತ್ತು ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಮುಂದೆ ಬಂದು ಕೇಂದ್ರದ ಸೇವೆಯನ್ನು ಪಡೆಯಬೇಕು. ತಾಂತ್ರಿಕ ವೃತ್ತಿ ನಿರತರು ಮತ್ತು ವಿದ್ಯಾರ್ಥಿಗಳಲ್ಲಿ ವೃತ್ತಿ ಕೌಶಲ ಹೆಚ್ಚಳಕ್ಕೆ ಕೇಂದ್ರ ಸದಾ ಸಿದ್ಧವಿದೆ. ಕೇಂದ್ರದ ತರಬೇತಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮಾಸಿಕ ಭತ್ಯೆಯ ಜೊತೆಗೆ ತರಬೇತಿ ನೀಡಲಾಗುವುದು~ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ವೃತ್ತಿ ಕೌಶಲ ತರಬೇತಿ ಮಂಡಳಿಯ ದಕ್ಷಿಣ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಎ.ಅಯ್ಯಕ್ಕಣ್ಣು, ಟೀಮ್‌ಲೀಸ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್‌ನ ಪ್ರಧಾನ ವ್ಯವಸ್ಥಾಪಕ ಸುದೀಪ್ ಕುಮಾರ್ ಸೇನ್ ಮತ್ತಿತರರು ಉಪಸ್ಥಿತರಿದ್ದರು.

ವೃತ್ತಿ ಕೌಶಲ ತರಬೇತಿಯ ಬಗ್ಗೆ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ ಚೆನ್ನೈನ ದಕ್ಷಿಣ ಪ್ರಾದೇಶಿಕ ಕೇಂದ್ರದ ವೆಬ್‌ಸೈಟ್  www.boat-srp.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.