ADVERTISEMENT

ಹೈಕೋರ್ಟ್‌ನಲ್ಲಿ ಫೋಟೊ ಶೂಟ್‌ ಪ್ರಕರಣ: ರಿಟ್‌ ಅರ್ಜಿ ದಾಖಲು

​ಪ್ರಜಾವಾಣಿ ವಾರ್ತೆ
Published 2 ಜನವರಿ 2018, 20:40 IST
Last Updated 2 ಜನವರಿ 2018, 20:40 IST
ಹೈಕೋರ್ಟ್‌ನಲ್ಲಿ ಫೋಟೊ ಶೂಟ್‌ ಪ್ರಕರಣ: ರಿಟ್‌ ಅರ್ಜಿ ದಾಖಲು
ಹೈಕೋರ್ಟ್‌ನಲ್ಲಿ ಫೋಟೊ ಶೂಟ್‌ ಪ್ರಕರಣ: ರಿಟ್‌ ಅರ್ಜಿ ದಾಖಲು   

ಬೆಂಗಳೂರು: ‘ನಟ ವಿನಯ್ ರಾಜ್‌ಕುಮಾರ್ ಅವರು ನಿಯಮ ಉಲ್ಲಂಘಿಸಿ ಹೈಕೋರ್ಟ್ ಆವರಣದೊಳಗೆ ಫೋಟೊ ಶೂಟ್ ನಡೆಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ವಿಧಾನಸೌಧ ಠಾಣಾ ಸಬ್ ಇನ್ಸ್‌ಪೆಕ್ಟರ್‌ಗೆ ನಿರ್ದೇಶಿಸಬೇಕು’ ಎಂದು ಕೋರಿ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ದಾಖಲಿಸಲಾಗಿದೆ.

ವಕೀಲ ಎನ್.ಪಿ.ಅಮೃತೇಶ್ ಸಲ್ಲಿಸಿರುವ ಈ ಅರ್ಜಿ ಇನ್ನೂ ವಿಚಾರಣೆಗೆ ಬರಬೇಕಿದೆ. ರಾಜ್ಯ ಸರ್ಕಾರದ ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಹೈಕೋರ್ಟ್ ಸಹಾಯಕ ಪೊಲೀಸ್ ಆಯುಕ್ತರು ಮತ್ತು ವಿಧಾನಸೌಧ ಸಬ್ ಇನ್ಸ್‌ಪೆಕ್ಟರ್ ಅವರನ್ನು ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ಹೈಕೋರ್ಟ್ ಆವರಣ ಮತ್ತು ಬೆಂಗಳೂರು ವಕೀಲರ ಸಂಘದ ಗ್ರಂಥಾಲಯದಲ್ಲಿ 2017ರ ಆ.15ರಂದು ‘ಅನಂತು ವರ್ಸಸ್ ನಸ್ರತ್’ ಚಿತ್ರಕ್ಕಾಗಿ ನಾಯಕ ನಟ ವಿನಯ್ ರಾಜ್ ಕುಮಾರ್ ಫೋಟೊ ಶೂಟ್ ನಡೆಸಿದ್ದರು. ‘ಇದು ಹೈಕೋರ್ಟ್‌ ಭದ್ರತಾ ನಿಯಮ ಉಲ್ಲಂಘನೆ’ ಎಂಬುದು ಅರ್ಜಿದಾರರ ಆರೋಪ.

ADVERTISEMENT

ಅನುಮತಿ ನೀಡಲಾಗಿದೆ: ‘ಮೆಸರ್ಸ್‌ ಮಾಣಿಕ್ಯ ಪ್ರೊಡಕ್ಷನ್ಸ್‌ ಕಂಪನಿಯು ಹೈಕೋರ್ಟ್‌ ವಿಭಾಗದಲ್ಲಿರುವ ಗ್ರಂಥಾಲಯದ ಒಳಗೆ ಸ್ಥಿರಚಿತ್ರಗಳನ್ನು ತೆಗೆಯಲು ಅನುಮತಿ ನೀಡಲಾಗಿದೆ’ ಎಂದು ಬೆಂಗಳೂರು ವಕೀಲರ ಸಂಘ 2017ರ ಆಗಸ್ಟ್‌ 14ರಂದು ತಿಳಿಸಿತ್ತು.

‘ಡಾ.ರಾಜ್‌ಕುಮಾರ್ ಅವರ ಕನ್ನಡ ಸೇವೆಯನ್ನು ಸ್ಮರಿಸಿಕೊಳ್ಳುವ ಮೂಲಕ ವಿನಯ್ ರಾಜ್‌ಕುಮಾರ್ ಮುಖ್ಯಭೂಮಿಕೆಯಲ್ಲಿರುವ ಈ ಕನ್ನಡ ಚಲನಚಿತ್ರಕ್ಕೆ ಈ ಫೋಟೋಶೂಟ್‌ ನಡೆಸಲು ಅವಕಾಶ ನೀಡಲಾಗಿದೆ’ ಎಂದು ಸಂಘದ ಅಧ್ಯಕ್ಷ ಎಚ್‌.ಸಿ.ಶಿವರಾಮು, ಪ್ರಧಾನ ಕಾರ್ಯದರ್ಶಿ ಪುಟ್ಟೇಗೌಡ ಹಾಗೂ ಖಜಾಂಚಿ ಎಚ್.ವಿ.ಪ್ರವೀಣಗೌಡ ಸಹಿ ಮಾಡಿದ ಪತ್ರದಲ್ಲಿ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.