ADVERTISEMENT

ಬಿಲ್ಡರ್‌ಗೆ ಎನ್‌ಜಿಟಿ ನೋಟಿಸ್‌ ಜಾರಿ

​ಪ್ರಜಾವಾಣಿ ವಾರ್ತೆ
Published 4 ಜನವರಿ 2018, 20:11 IST
Last Updated 4 ಜನವರಿ 2018, 20:11 IST
ಬಿಲ್ಡರ್‌ಗೆ ಎನ್‌ಜಿಟಿ ನೋಟಿಸ್‌ ಜಾರಿ
ಬಿಲ್ಡರ್‌ಗೆ ಎನ್‌ಜಿಟಿ ನೋಟಿಸ್‌ ಜಾರಿ   

ನವದೆಹಲಿ: ಬೆಂಗಳೂರಿನ ಸರ್ಜಾಪುರ ಮುಖ್ಯ ರಸ್ತೆಯಲ್ಲಿರುವ ಕೈಕೊಂಡರಹಳ್ಳಿ ಕೆರೆ ವ್ಯಾಪ್ತಿಯಲ್ಲಿ ‘ಬಫರ್‌ ವಲಯ’ದ ನಿಯಮ ಉಲ್ಲಂಘಿಸಿ ವಸತಿ ಸಮುಚ್ಚಯ ನಿರ್ಮಿಸಿರುವ ಕುರಿತು ಸ್ಪಷ್ಟನೆ ನೀಡುವಂತೆ ಸೂಚಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಗುರುವಾರ ಎಸ್‌ಜೆಆರ್‌ ಪ್ರೈಂ ಕಾರ್ಪೊರೇಷನ್‌ಗೆ ನೋಟಿಸ್‌ ಜಾರಿ ಮಾಡಿದೆ.

ನಿಯಮ ಉಲ್ಲಂಘಿಸಲಾಗಿದೆ ಎಂದು ದೂರಿ ವಕೀಲ ಕೆ.ಎಸ್‌. ರವಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಯು.ಡಿ. ಸಾಳ್ವಿ ನೇತೃತ್ವದ ಪೀಠ, ಕಟ್ಟಡ ನಿರ್ಮಾಣಕ್ಕೆ ಪಡೆದಿದ್ದ ಅನುಮತಿಗಳೆಲ್ಲ ಅಕ್ರಮ ಎಂದು ಅಭಿಪ್ರಾಯಪಟ್ಟಿದೆ.

ಕಟ್ಟಡ ನಿರ್ಮಾಣಕ್ಕೆ ವಿವಿಧ ಪ್ರಾಧಿಕಾರಗಳ ಅನುಮತಿ ಅಗತ್ಯ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯು ಈಗಾಗಲೇ ತಾನು ನೀಡಿರುವ ವಾಸದ ಪ್ರಮಾಣಪತ್ರವನ್ನೂ ಹಿಂದಕ್ಕೆ ಪಡೆದಿರುವಾಗಿ ತಿಳಿಸಿ ಆದೇಶ ಹೊರಡಿಸಿದೆ. ಕೆರೆ ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘಿಸಿರುವುದು ಸ್ಪಷ್ಟವಾಗಿರುವುದರಿಂದ ಆರು ದಿನಗಳೊಳಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿ ನೋಟಿಸ್‌ ಹೊರಡಿಸಿರುವ ಹಸಿರು ಪೀಠ, ಪ್ರಕರಣದ ವಿಚಾರಣೆಯನ್ನು ಜನವರಿ 10ಕ್ಕೆ ಮುಂದೂಡಿತು.

ADVERTISEMENT

ಕೆರೆಯ ಆಸುಪಾಸಿನ 75 ಮೀಟರ್‌ ವ್ಯಾಪ್ತಿಯನ್ನು ‘ಬಫರ್‌ ವಲಯ’ ಎಂದು ಆದೇಶ ನೀಡಿದ್ದರೂ ಅದನ್ನು ಉಲ್ಲಂಘಿಸಲಾಗಿದೆ ಎಂದು ಅರ್ಜಿದಾರರ ಪರ ವಕೀಲ ಪಿ.ರಾಮಪ್ರಸಾದ್‌ ಪೀಠಕ್ಕೆ ವಿವರಿಸಿದರು.

ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿರುವುದಕ್ಕೆ, ಕುಡಿಯುವ ನೀರು ಮತ್ತು ವಿದ್ಯುತ್‌ ಸಂಪರ್ಕ ಕಲ್ಪಿಸಿರುವುದಕ್ಕೆ ಕಾರಣ ನೀಡಬೇಕು ಎಂದು ಪೀಠವು ಕಳೆದ ಡಿಸೆಂಬರ್‌ 15ರಂದು ರಾಜ್ಯ ಸರ್ಕಾರ, ಬಿಬಿಎಂಪಿ, ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಬಿಡಿಎ), ಬೆಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ (ಬೆಸ್ಕಾಂ), ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕುಡಿಯುವ ನೀರು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ) ಮತ್ತು ಕೆರೆ ಅಭಿವೃದ್ಧಿ ಪ್ರಾಧಿಕಾರಗಳಿಗೆ ನೋಟಿಸ್‌ ಜಾರಿ ಮಾಡಿತ್ತು.

ಬೆಂಗಳೂರಿನ ಎಲ್ಲ ಕೆರೆಗಳು ಹಾಗೂ ರಾಜ ಕಾಲುವೆಗಳಿಗೆ ಬಫರ್ ವಲಯದ ಆದೇಶ ಅನ್ವಯವಾಗಲಿದೆ ಎಂದೂ ವಿಚಾರಣೆ ವೇಳೆ ತಿಳಿಸಲಾಗಿತ್ತು.

‘ಕೈಕೊಂಡರಹಳ್ಳಿ ಕೆರೆ ವ್ಯಾಪ್ತಿಯ ರಾಜಕಾಲುವೆಯನ್ನು ಒತ್ತುವರಿ ಮಾಡಿ 10 ಗುಂಟೆ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ಕಟ್ಟಲಾಗುತ್ತಿದ್ದು, ಅದಕ್ಕೆ ನಿಯಮ ಉಲ್ಲಂಘಿಸಿ ಅನುಮತಿ ನೀಡಿರುವುದು ಏಕೆ’ ಎಂದು ಕೇಳಿ ಈ ಹಿಂದೆ ನೀಡಲಾಗಿದ್ದ ನೋಟಿಸ್‌ಗೆ ಉತ್ತರ ನೀಡಿರುವ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್‌, ‘ರಾಜಕಾಲುವೆ ಒತ್ತುವರಿ ಮಾಡಿರುವುದು ಸ್ಪಷ್ಟವಾಗಿದ್ದರಿಂದ ನಿರ್ಮಾಣ ಕಾಮಗಾರಿಗೆ ನೀಡಲಾದ ಅನುಮತಿಯನ್ನು ರದ್ದುಗೊಳಿಸಲಾಗಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.