ADVERTISEMENT

ಸ್ವಾಮಿ ವಿವೇಕಾನಂದ ಜಯಂತಿ: ‘ವಿವೇಕ್ ಬ್ಯಾಂಡ್’ ಅಭಿಯಾನ

​ಪ್ರಜಾವಾಣಿ ವಾರ್ತೆ
Published 5 ಜನವರಿ 2018, 19:30 IST
Last Updated 5 ಜನವರಿ 2018, 19:30 IST

ಬೆಂಗಳೂರು: ಸ್ವಾಮಿ ವಿವೇಕಾನಂದ 155ನೇ ಜಯಂತಿ ಹಾಗೂ ರಾಷ್ಟ್ರೀಯ ಯುವದಿನ ಅಂಗವಾಗಿ ಸಮರ್ಥ ಭಾರತ ಟ್ರಸ್ಟ್‌ನಿಂದ ‘ವಿವೇಕ್ ಬ್ಯಾಂಡ್’ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟಿ ರಾಜೇಶ್ ಪದ್ಮಾರ್ ಹೇಳಿದರು.

ಜ.12ರಿಂದ 26ರವರೆಗೆ ಅಭಿಯಾನ ನಡೆಯಲಿದೆ. ಕಾಲೇಜು ವಿದ್ಯಾರ್ಥಿಗಳು, ಬೇರೆ ಬೇರೆ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಯುವಕರು ಈ ಬ್ಯಾಂಡ್‌ಗಳನ್ನು ಧರಿಸಬೇಕು. ಕಳೆದ ಮೂರು ವರ್ಷಗಳಿಂದ ಈ ಅಭಿಯಾನ ಮಾಡುತ್ತಿದ್ದು, ಈ ಬಾರಿ 12 ಲಕ್ಷ ಯುವಕರ ಕೈಗೆ ಬ್ಯಾಂಡ್ ತೊಡಿಸುವ ಗುರಿ ಇದೆ ಎಂದು ಅವರು ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಕಳೆದ ವರ್ಷದ ಅಭಿಯಾನದಲ್ಲಿ 6 ಲಕ್ಷ ಯುವಕರು ಕೈಗೆ ಬ್ಯಾಂಡ್ ಧರಿಸಿದ್ದರು. ಇದರಲ್ಲಿ 1.93 ಲಕ್ಷ ಯುವಕರು ಜೀವನದಲ್ಲಿ ಉತ್ತಮ ಆಚರಣೆಗಳನ್ನು ಅನುಸರಿಸುತ್ತಿರುವುದಾಗಿ ದಾಖಲಿಸಿದ್ದಾರೆ. ಅಲ್ಲದೆ, ಟ್ರಸ್ಟ್‌ನಿಂದ ಕಳೆದ ವರ್ಷ ಒಂದು ಕೋಟಿ ಸಸಿ ನೆಡುವ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಮೂರು ತಿಂಗಳಲ್ಲಿ 14 ಲಕ್ಷ ಗಿಡಗಳನ್ನು ನಡೆಸಲಾಗಿದೆ ಎಂದು ವಿವರಿಸಿದರು.

ADVERTISEMENT

ಯುವಜನರು ಸಾಮಾಜಿಕ ಸೇವಾ ಚಟುವಟಿಕೆಗಳಲ್ಲೂ ಪಾಲ್ಗೊಳ್ಳುವಂತೆ ಪ್ರೇರೇಪಿಸುವುದು ಈ ಅಭಿಯಾನದ ಉದ್ದೇಶ. ಖಾದಿ ಬಳಕೆ ಉತ್ತೇಜನಕ್ಕಾಗಿ ನಟಿ ರೇಖಾ, ಗಿಡಗಳ ಪೋಷಣೆಗಾಗಿ ವಿಜಯ್ ನಿಶಾಂತ್ ಮತ್ತು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ಕುರಿತು ಜಾಗೃತಿ ಮೂಡಿಸಲು ಡಾ. ಶಾಂತಿ ಅಭಿಯಾನದೊಂದಿಗೆ ಕೈಜೋಡಿಸಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.