ಬೆಂಗಳೂರು: ದಲಿತ ಸಮುದಾಯದ ನೌಕರರು ಹಾಗೂ ವಿದ್ಯಾವಂತರು ಪುರೋಹಿತಶಾಹಿಗಳ ಮಾನಸಿಕ ಗುಲಾಮರಾಗಿದ್ದಾರೆ ಎಂದು ಕವಿ ಡಾ. ಸಿದ್ಧಲಿಂಗಯ್ಯ ವಿಷಾದ ವ್ಯಕ್ತಪಡಿಸಿದರು.
ವಿಶಾಖ ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ನಿವೃತ್ತ ಸರ್ಕಾರಿ ನೌಕರ ವಿ.ಬಸವರಾಜ್ ಅವರಿಗೆ ಅಭಿನಂದನೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದಲಿತ ಸಮಾಜದ ನೌಕರರಲ್ಲಿ ಕೀಳರಿಮೆ ಇದೆ. ತಾವು ಕೆಳಜಾತಿಯವರು, ಮೂಢರು ಎಂದು ತಿಳಿದುಕೊಂಡಿದ್ದಾರೆ. ಪುರೋಹಿತರ ಬಳಿ ಜಾತಕ ಕೇಳುವುದು, ಸತ್ಯನಾರಾಯಣ ಪೂಜೆ ಮಾಡಿಸುವುದು, ನಾಮಕರಣ ಹಾಗೂ ಗೃಹಪ್ರವೇಶಕ್ಕೆ ಪುರೋಹಿತರನ್ನು ಕರೆಯುತ್ತಾರೆ. ಈ ಮಾನಸಿಕ ದಾರ್ಷ್ಟ್ಯ ಹಾಗೂ ಮೌಢ್ಯದಿಂದ ಹೊರಬರಬೇಕು ಎಂದು ಹೇಳಿದರು.
ವಿಶ್ರಾಂತ ಕುಲಪತಿ ಪ್ರೊ. ಎಂ.ಜಿ.ಕೃಷ್ಣನ್, ‘ಕ್ರಿಯಾಶೀಲ ಹಾಗೂ ಸೃಜನಶೀಲ ವ್ಯಕ್ತಿಗೆ ನಿವೃತ್ತಿ ಇರುವುದಿಲ್ಲ. ನಿವೃತ್ತಿಯ ನಂತರವೂ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ. ವಿ.ಬಸವರಾಜ್ ಅವರು ದಲಿತ ಚಳವಳಿಯಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಲಿ’ ಎಂದು ಹಾರೈಸಿದರು.
ವಿ.ಬಸವರಾಜ್, ‘ಸರ್ಕಾರಿ ಕೆಲಸಕ್ಕೆ ಆಕಸ್ಮಿಕವಾಗಿ ಸೇರಿದೆ. ನೌಕರಿ ಜತೆಗೆ ದಲಿತ ಚಳವಳಿಯಲ್ಲಿ ತೊಡಗಿಸಿಕೊಂಡೆ. ಈ ಸಂದರ್ಭದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಕ್ರಿಯವಾಗಿ ಪಾಲ್ಗೊಳ್ಳುತ್ತೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.