ADVERTISEMENT

ಜಮೀನು ಕಬಳಿಸಲು ಹುನ್ನಾರ; ಪ್ರತಿಭಟನೆ

ಐಎಎಸ್‌ ಅಧಿಕಾರಿ ಶಾಮೀಲು ಆರೋಪ

​ಪ್ರಜಾವಾಣಿ ವಾರ್ತೆ
Published 6 ಜನವರಿ 2018, 19:56 IST
Last Updated 6 ಜನವರಿ 2018, 19:56 IST
ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ವಿ.ಶಂಕರ್‌ ಅವರು ಪ್ರತಿಭಟನಾಕಾರರಿಂದ ಮಾಹಿತಿ ಪಡೆದರು
ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ವಿ.ಶಂಕರ್‌ ಅವರು ಪ್ರತಿಭಟನಾಕಾರರಿಂದ ಮಾಹಿತಿ ಪಡೆದರು   

ಬೆಂಗಳೂರು: ಕಗ್ಗಲೀಪುರದ ನಂಜಪ್ಪ ಬೋವಿ ಎಂಬುವರಿಗೆ ಸೇರಿದ್ದ 4 ಎಕರೆ ಜಮೀನು ಕಬಳಿಸಲು ಶ್ರೀರಾಮ ಸೇವಾ ಮಂಡಳಿಯು ಹುನ್ನಾರ ನಡೆಸಿದೆ ಎಂದು ಆರೋಪಿಸಿ ರಾಜ್ಯ ಆದಿಜಾಂಬವ ಸಂಘದ ಪದಾಧಿಕಾರಿಗಳು ಶನಿವಾರ ಪ್ರತಿಭಟನೆ ನಡೆಸಿದರು.

ಸರ್ವೆ ನಂ.244ರಲ್ಲಿರುವ ಜಮೀನಿನಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ‘ಬಲಪಂಥೀಯರ ದಬ್ಬಾಳಿಕೆ ಹಾಗೂ ಜನವಿರೋಧಿ ನೀತಿಗೆ ಧಿಕ್ಕಾರ’ ಎಂಬ ಘೋಷಣಾ ಫಲಕಗಳನ್ನು ಪ್ರದರ್ಶಿಸಿದರು. ರಾಜ್ಯ ದಲಿತ ಸಂಘರ್ಷ ಸಮಿತಿ ಹಾಗೂ ಕರ್ನಾಟಕ ಅಹಿಂದ ಹೋರಾಟ ಸಮಿತಿ ಸದಸ್ಯರು ಪ್ರತಿಭಟನೆಯಲ್ಲಿದ್ದರು.

‘1978ರಿಂದಲೂ ನಂಜಪ್ಪ ಈ ಜಮೀನಿನಲ್ಲಿ ವಾಸವಿದ್ದಾರೆ. ಕಾನೂನುಬದ್ಧವಾಗಿ ಜಮೀನು ಅವರ ಹೆಸರಿಗೇ ಮಂಜೂರಾಗಿದೆ. ಸಾಗುವಳಿಯನ್ನೂ ಅವರು ಮಾಡುತ್ತಿದ್ದಾರೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಜಮೀನಿನಲ್ಲಿ ಮೂಲ ಸೌಕರ್ಯಗಳನ್ನೂ ಕಲ್ಪಿಸಿಕೊಂಡಿದ್ದಾರೆ. ಅಂಥ ಬಡ ವ್ಯಕ್ತಿಯ ಜಮೀನು ಕಬಳಿಸಲು ಹುನ್ನಾರ ನಡೆದಿರುವುದು ಖಂಡನೀಯ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಕೆಲ ಪ್ರಭಾವಿ ವ್ಯಕ್ತಿಗಳು, ಶ್ರೀರಾಮ ಸೇವಾ ಮಂಡಳಿ ಹೆಸರಿನಲ್ಲಿ ಟ್ರಸ್ಟ್ ನಿರ್ಮಿಸಿಕೊಂಡಿದ್ದಾರೆ. ಆ ಟ್ರಸ್ಟ್‌ ಹೆಸರಿಗೆ ಜಮೀನು ಮಂಜೂರಾಗಿರುವಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಅವರ ಈ ಅಕ್ರಮದಲ್ಲಿ ಐಎಎಸ್‌ ಅಧಿಕಾರಿ ಸೇರಿದಂತೆ ಹಲವು ಸರ್ಕಾರಿ ಅಧಿಕಾರಿಗಳು ಶಾಮೀಲಾಗಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ನಂಜಪ್ಪ ಅವರಿಗೆ ನ್ಯಾಯ ಕೊಡಿಸಬೇಕು’ ಎಂದು ಆಗ್ರಹಿಸಿದರು.

‘ನಂಜಪ್ಪ ಅವರು ಅನಕ್ಷರಸ್ಥರು. ಅವರಿಗೆ ಮಂಜೂರಾಗಿರುವ ಜಮೀನು ಹಳೆ ಕಾಲದ್ದಾಗಿದ್ದರಿಂದ, ಅದರ ಮೂಲ ದಾಖಲೆಗಳಿಗೆ ನಂಜಪ್ಪ ಅವರ ಹೆಬ್ಬಟ್ಟಿನ ಗುರುತು ಮಾತ್ರ ಇದೆ. ಹೊಸ ತಂತ್ರಜ್ಞಾನ ಬಂದ ಬಳಿಕ ನಂಜಪ್ಪ, ಮರು ನೋಂದಣಿ ಮಾಡಿಸಿಲ್ಲ. ಅದನ್ನೇ ಬಂಡವಾಳ ಮಾಡಿಕೊಂಡ ಹಲವರು, ಅವರಿಗೆ ಅನ್ಯಾಯ ಮಾಡುತ್ತಿದ್ದಾರೆ. ಅಂಥವರನ್ನು ಪತ್ತೆ ಹಚ್ಚಿ ಶಿಕ್ಷಿಸದಿದ್ದರೆ, ಗಂಭೀರ ಸ್ವರೂಪದ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಭೇಟಿ: ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ವಿ.ಶಂಕರ್‌ ಭೇಟಿ ನೀಡಿ ಪ್ರತಿಭಟನಾಕಾರರ ಮನವಿ ಸ್ವೀಕರಿಸಿದರು.

‘ಜಮೀನು ಸಂಬಂಧ ಎರಡೂ ಕಡೆಯ ದಾಖಲೆಗಳನ್ನು ಪರಿಶೀಲನೆ ನಡೆಸುತ್ತೇನೆ. ಮರು ಸರ್ವೆ ಮಾಡಲು ಅಧಿಕಾರಿಗಳಿಗೆ ಸೂಚಿಸುತ್ತೇನೆ. ತಪ್ಪತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುತ್ತೇನೆ’ ಎಂದು ವಿ.ಶಂಕರ್‌ ಭರವಸೆ ನೀಡಿದರು.

ಈ ವೇಳೆ ಬೆಂಗಳೂರು ದಕ್ಷಿಣ ಜಿಲ್ಲಾ ತಹಸೀಲ್ದಾರ್ ಮಂಜಪ್ಪ, ಉಪ ವಿಭಾಗಾಧಿಕಾರಿ ಆರ್‌. ಹರೀಶ್ ನಾಯಕ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.