ADVERTISEMENT

ರಾಜಧಾನಿಯಲ್ಲಿ ಕಳೆಗಟ್ಟಿದ ಕಲಾಲೋಕ

ಚಿತ್ರಸಂತೆಗೆ ಹರಿದು ಬಂದ ಕಲಾಸಕ್ತರ ದಂಡು * ಚಿತ್ತಾಕರ್ಷಕ ಕಲಾಕೃತಿಗಳ ಪ್ರದರ್ಶನ, ಮಾರಾಟ

ಕೆ.ಎಂ.ಸಂತೋಷಕುಮಾರ್
Published 7 ಜನವರಿ 2018, 19:30 IST
Last Updated 7 ಜನವರಿ 2018, 19:30 IST
ರಾಜಧಾನಿಯಲ್ಲಿ ಕಳೆಗಟ್ಟಿದ ಕಲಾಲೋಕ
ರಾಜಧಾನಿಯಲ್ಲಿ ಕಳೆಗಟ್ಟಿದ ಕಲಾಲೋಕ   

ಬೆಂಗಳೂರು: ಇಲ್ಲಿ ಕಣ್ಣು ಹಾಯಿಸಿದಷ್ಟೂ ಜನಜಾತ್ರೆ. ರಸ್ತೆಯ ಇಕ್ಕೆಲಗಳಲ್ಲಿ ಮನಸ್ಸಿಗೆ ಮುದಕೊಡುವ ಸಾಲು ಸಾಲು ಕಲಾಕೃತಿಗಳು!

ರಾಜಧಾನಿಯಲ್ಲಿ ಭಾನುವಾರ ಚಿತ್ತಾಕರ್ಷಕ ಕಲಾಲೋಕವೊಂದು ಸೃಷ್ಟಿಯಾಗಿತ್ತು.

ನಗರದ ಕರ್ನಾಟಕ ಚಿತ್ರಕಲಾ ಪರಿಷತ್‌ ಆವರಣ ಮತ್ತು ಕುಮಾರಕೃಪಾ ರಸ್ತೆಯಲ್ಲಿ ಮುಂಜಾನೆಯೇ ಕಲಾವಿದರ ದಂಡು ಚಿತ್ತೈಸಿತ್ತು. ಪ್ರತಿಭೆಯನ್ನೂ ಪ್ರದರ್ಶಿಸುವುದರ ಜೊತೆ ನಾಲ್ಕು ಕಾಸು ಸಂಪಾದಿಸುವ ಉದ್ದೇಶದಿಂದ ದೂರದ ಊರುಗಳಿಂದ ಕಲಾವಿದರು ಬಂದಿದ್ದರು.

ADVERTISEMENT

ಚೀಲ, ಪೆಟ್ಟಿಗೆಗಳಲ್ಲಿ ತುಂಬಿ ತಂದಿದ್ದ ಕಲಾಕೃತಿಗಳನ್ನು ಒಂದೊಂದಾಗಿ ಬಿಚ್ಚಿ, ದೂಳು ಕೊಡವುತ್ತಿದ್ದರು. ಸಂತೆಗೆ ಬರುವ ಗ್ರಾಹಕರ ಹಾಗೂ ಕಲಾರಸಿಕರ ಕಣ್ಣಿಗೆ ಎದ್ದು ಕಾಣುವಂತೆ ಒಪ್ಪ ಓರಣವಾಗಿ ಜೋಡಿಸುತ್ತಿದ್ದರು. ಧರೆಗಿಳಿಯುತ್ತಿದ್ದ ಸೂರ್ಯರಶ್ಮಿಗಳ ಸ್ಪರ್ಶದಿಂದ ಕಲಾಕೃತಿಗಳು ಪುಟವಿಟ್ಟ ಚಿನ್ನದಂತೆ ಫಳಫಳನೆ ಹೊಳೆಯುತ್ತಿದ್ದವು.

ದೇಶದ 16 ರಾಜ್ಯಗಳಿಂದ ಬಂದಿದ್ದ ಸುಮಾರು 2,000 ಕಲಾವಿದರು ಇಲ್ಲಿದ್ದರು. ಅವರ ಕುಂಚದಲ್ಲಿ ಅರಳಿದ ಲಕ್ಷಾಂತರ ಸಂಖ್ಯೆಯ ಕಲಾಕೃತಿಗಳನ್ನು ಒಂದೆಡೆ ನೋಡುವ ಅವಕಾಶ ಒದಗಿ ಬಂದಿತ್ತು. ಭೂತಾನ್‌ನ 10 ಕಲಾವಿದರೂ ಕಲಾಕೃತಿಗಳನ್ನು ಮಾರಾಟಕ್ಕಿಟ್ಟಿದ್ದರು.

ಕಲಾರಸಿಕರಿಗಂತೂ ಕಣ್ಣಿಗೆ ಹಬ್ಬ. ಯಾವುದನ್ನು ಖರೀದಿಸುವುದು, ಯಾವುದನ್ನು ಬಿಡುವುದು ಎನ್ನುವ ಗೊಂದಲ. ಸಂತೆಯಲ್ಲಿ ಚೌಕಾಸಿಯೂ ನಡೆದಿತ್ತು. ಮುಂಗಡ ಕಾಯ್ದಿರಿಸುವಿಕೆಗೂ ಅನುವು ಮಾಡಿಕೊಡಲಾಗಿತ್ತು.

ವ್ಯಾಪಾರಿಗಳಂತೆಯೇ ಕಲಾವಿದರು ಜಾಣ್ಮೆ ತೋರುತ್ತಿದ್ದರು. ಕೆಲವೊಮ್ಮೆ ಗ್ರಾಹಕರು ತೀರಾ ಅಗ್ಗದ ಬೆಲೆಗೆ ಕಲಾಕೃತಿಯನ್ನು ನೀಡುವಂತೆ ಕೇಳಿದಾಗ ನೋವನ್ನು ತೋರ್ಪಡಿಸಿಕೊಳ್ಳದೆ ನುಂಗಿಕೊಳ್ಳುತ್ತಿದ್ದರು. ಬೆಳಗ್ಗಿನ ಹೊತ್ತು ಬೆಲೆ ದುಬಾರಿ ಇರುತ್ತದೆ;  ಸಂಜೆ ಹೊತ್ತಿಗೆ ಬೆಲೆ ಇಳಿಸುತ್ತಾರೆ ಎಂಬ ನಿರೀಕ್ಷೆಯಿಂದ ಕಾಯುವ ಗ್ರಾಹಕರೂ ಇದ್ದರು.

ಆನ್‌ಲೈನ್‌ ಮಾರುಕಟ್ಟೆ ಒದಗಿಸಲು ಮತ್ತು ಕಲಾಕೃತಿಗಳನ್ನು ಖರೀದಿಸಲು ಸ್ಟಾರ್ಟ್‌ ಅಪ್‌ ಕಂಪನಿಗಳ ಪ್ರತಿನಿಧಿಗಳು ಕಲಾವಿದರನ್ನು ಸಂಪರ್ಕಿಸುತ್ತಿದ್ದುದು ಕಂಡುಬಂತು. ಹೋಟೆಲ್‌, ರೆಸಾರ್ಟ್‌, ರಿಯಲ್‌ ಎಸ್ಟೇಟ್‌ ಉದ್ಯಮಿ, ಕಾರ್ಪೊರೇಟ್‌ ಕಂಪನಿ ಪ್ರತಿನಿಧಿಗಳು, ದೇಶ–ವಿದೇಶಗಳ ಕಲಾ ಗ್ಯಾಲರಿಗಳ ಪ್ರತಿನಿಧಿಗಳೂ ಕಲಾಕೃತಿಗಳನ್ನು ಕೊಳ್ಳಲು ಸಿಲಿಕಾನ್‌ ಸಿಟಿಗೆ ಬಂದಿದ್ದರು.

ಜೋಡಿ ಹುಲಿಯ ಚಿತ್ರಕಲಾಕೃತಿಯನ್ನು ₹ 2 ಲಕ್ಷಕ್ಕೆ ಮತ್ತು ಜೋಡಿ ನವಿಲುಗಳ ಕಲಾಕೃತಿಯನ್ನು ₹1.50 ಲಕ್ಷಕ್ಕೆ ಬೆಳಿಗ್ಗೆ 11 ಗಂಟೆಯೊಳಗೆ ಮಾರಾಟ ಮಾಡಿದ್ದ ಮೈಸೂರಿನ ಯುವ ಕಲಾವಿದ ಗಂಗಾಧರಮೂರ್ತಿ ‘ಸೋಲ್ಡ್‌’ ಫಲಕ ಹಾಕಿ ನಿರಾಳ ಭಾವದಲ್ಲಿ ಕುಳಿತ್ತಿದ್ದರು.

ಇಂದಿರಾನಗರದ ರವಿವರ್ಮ ಮತ್ತು ಅರಳು ಮುರುಗನ್‌ ಅವರು ತಂಜಾವೂರು ಶೈಲಿಯಲ್ಲಿ 22 ಕ್ಯಾರೆಟ್‌ ಶುದ್ಧ ಚಿನ್ನದ ಪ್ಲೇಟ್‌ ಬಳಸಿ ರಚಿಸಿದ್ದ ತಿರುಪತಿ ವೆಂಕಟರಮಣನ ಕಲಾಕೃತಿಗೆ ₹5 ಲಕ್ಷ ಬೆಲೆ ನಿಗದಿಪಡಿಸಿದ್ದರು.

‘ನಾಲ್ಕು ವರ್ಷಗಳ ಹಿಂದೆ ರಚಿಸಿರುವ ಈ ಕಲಾಕೃತಿಯನ್ನು ಹತ್ತಾರು ಪ್ರದರ್ಶನಗಳಲ್ಲಿ ಇಟ್ಟಿದ್ದೇನೆ. ಎಲ್ಲರೂ ಕುತೂಹಲದಿಂದ ವೀಕ್ಷಿಸುತ್ತಾರೆ. ಆದರೆ, ಬೆಲೆ ಕೇಳಿ ಖರೀದಿಗೆ ಹಿಂಜರಿಯುತ್ತಾರೆ. ಈ ಕಲಾಕೃತಿಕೊಳ್ಳುವ ಕಲಾ ಅಭಿಮಾನಿ ಒಂದಲ್ಲ ಒಂದು ದಿನ ಸಿಕ್ಕೇ ಸಿಗುತ್ತಾನೆ. ಅಲ್ಲಿವರೆಗೂ ಕಾಯುತ್ತೇನೆ. ಆದರೆ, ಕಡಿಮೆ ಬೆಲೆಗೆ ಮಾತ್ರ ಕೊಡಲಾರೆ’ ಎಂದರು ರವಿವರ್ಮ.

ಪುಣೆಯ ಕಿರಣ್‌ ಪಡ್ತರೆ ಅವರು ರಚಿಸಿದ್ದ ಪುಂಗಿ ಊದುವ ಹಾವಾಡಿಗರು, ನಾಟ್ಯರಾಣಿ ಶಾಂತಲೆ, ಗೌತಮ ಬುದ್ಧ, ಶಿವಲಿಂಗದ ದರ್ಶನಕ್ಕೆ ನಿಂತ ಬಸವನ ತೈಲವರ್ಣ ಚಿತ್ರಗಳು ಕಣ್ಮನ ಸೆಳೆಯುತ್ತಿದ್ದವು.

ಸಂತೆಗೆ ಬಂದ ಶಿವಮೊಗ್ಗ ಜಿಲ್ಲೆಯ ಸೊರಬದ ವಾರಿಗಿತ್ತಿಯರಾದ ಶೀಲಾ ಡೋಂಗ್ರಿ ಮತ್ತು ಉಮಾಬಾಯಿ ಹರ್ಡೇಕರ್‌ ಇಬ್ಬರೂ ಅಕ್ಕಪಕ್ಕ ಕುಳಿತಿರುವುದನ್ನು ಚೆನ್ನೈನ ಸರ್ಕಾರಿ ಕಲಾ ಕಾಲೇಜಿನ ವಿದ್ಯಾರ್ಥಿ ತಿಮೋತಿ ದೇವಪ್ರಿಯ ಕುಂಚದಲ್ಲಿ ಮೂಡಿಸುವುದರಲ್ಲಿ ತಲ್ಲೀನನಾಗಿದ್ದ.

ಭಾವಚಿತ್ರ ಉಮಾಬಾಯಿ ಅವರ ಮುಖ ಚಹರೆಗೆ ಹೋಲಿಕೆಯಾಗುತ್ತಿಲ್ಲ ಎನ್ನುವುದು ವಾರಿಗಿತ್ತಿಯರ ಬೇಸರಕ್ಕೆ ಕಾರಣವಾಗಿತ್ತು. ಕಲಾವಿದನ ಮೇಲೆ ಮುನಿಸಿಕೊಂಡೇ ₹200 ಕೊಟ್ಟು, ಒಲ್ಲದ ಮನಸಿನಲ್ಲೇ ಕಲಾಕೃತಿ ಸ್ವೀಕರಿಸಿದರು.

ದೊಮ್ಮಲೂರಿನ ಮೂಕ ಕಲಾವಿದೆ ಜ್ಯೋತಿ ಕುಮಾರ್‌ ತಮ್ಮ ಕಲಾಕೃತಿಗಳ ಬಗ್ಗೆ ವೀಕ್ಷಕರಿಗೆ ಆಂಗಿಕ ಸಂಜ್ಞೆ ಮೂಲಕವೇ ವಿವರಣೆ ನೀಡುತ್ತಿದ್ದುದು ಗಮನ ಸೆಳೆಯಿತು.

ಪೆನ್‌ ಸ್ಕೆಚ್‌ ಕಲಾಕೃತಿಗಳನ್ನು ತಂದಿದ್ದ ಕೋಲ್ಕತ್ತದ ಅನಿತಾ ಮುಖರ್ಜಿ, ‘ನಾಲ್ಕು ವರ್ಷಗಳಿಂದ ಚಿತ್ರಸಂತೆಯಲ್ಲಿ ಭಾಗವಹಿಸುತ್ತಿದ್ದೇನೆ. ಈ ವರ್ಷವೂ ಯಾರೂ ಸುಳಿಯದ ಮೂಲೆಯಲ್ಲಿ ಜಾಗ ಸಿಕ್ಕಿಬಿಟ್ಟಿದೆ’ ಎಂದು ಬೇಸರ ತೋಡಿಕೊಂಡರು.

ಕೆ.ಸಿ.ಜನರಲ್‌ ಆಸ್ಪತ್ರೆಯ ವೈದ್ಯ ದಂಪತಿ ಡಾ.ಸುಮಾ ಮತ್ತು ಡಾ.ರಘುನಂದನ್‌ ಅವರ ಪುತ್ರಿ ನಾಲ್ಕೂವರೆ ವರ್ಷದ ಶ್ರೀಲಕ್ಷ್ಮಿ ರಚಿಸಿದ ಕಲಾಕೃತಿಗಳು ಚಿಣ್ಣರಾದಿಯಾಗಿ ಎಲ್ಲರನ್ನೂ ಸೆಳೆಯುತ್ತಿದ್ದವು. ಪುಟಾಣಿ ಕಲಾವಿದೆಯ ಆನೆ ಚಿತ್ರಕೃತಿ ₹500ಕ್ಕೆ, ಸಿಂಹದ ಕಲಾಕೃತಿ ₹100ಕ್ಕೆ ಹಾಗೂ ಮನುಷ್ಯನ ಚಿತ್ರಕೃತಿ ₹20ಕ್ಕೆ ಮಾರಾಟವಾಯಿತು.

ಸಂತೆಯಲ್ಲಿ ಸುತ್ತಾಡಿ ಮನೆಯತ್ತ ಹೊರಟಿದ್ದವರು ಒಂದಲ್ಲ ಒಂದು ಕಲಾಕೃತಿ ಖರೀದಿಸಿ ಕೈ ಚೀಲದಲ್ಲಿ, ಬಗಲಲ್ಲಿ ಇಟ್ಟುಕೊಂಡು ಹೋಗುತ್ತಿದ್ದುದನ್ನು ಕಂಡಾಗ ‘ಕಲೆ ಎಲ್ಲರಿಗಾಗಿ’ ಎನ್ನುವ ಘೋಷಣೆ ಎಷ್ಟೊಂದು ಅರ್ಥಪೂರ್ಣವಾಗಿದೆಯಲ್ಲವೇ ಎನಿಸದೆ ಇರಲಿಲ್ಲ.

ಸಾಕ್ಷ್ಯಚಿತ್ರ ಪ್ರದರ್ಶನ:

ಪರಿಸರ ಸಂರಕ್ಷಣೆಗಾಗಿ ಅರ್ಪಣೆ ಮಾಡಿದ್ದ 15ನೇ ವರ್ಷದ ಚಿತ್ರಸಂತೆಯಲ್ಲಿ ಸಮುದ್ರ ಮಾಲಿನ್ಯ ಮತ್ತು ಜಾಗತಿಕ ತಾಪಮಾನದ ಬಗ್ಗೆ ಅರಿವು ಮೂಡಿಸಲು ನಾಲ್ಕು ಸಾಕ್ಷ್ಯ ಚಿತ್ರಗಳನ್ನು ಪ್ರದರ್ಶಿಸಲಾಯಿತು. ಪರಿಸರ ಸಂಸ್ಥೆಯ ಕಾರ್ಯದರ್ಶಿ ಈಶ್ವರ್‌ ಪ್ರಸಾದ್‌ ಅವರ ತಂಡ ಪ್ಲಾನೆಟ್‌ ಓಷನ್‌, ಓಷನ್‌ ಅಸಿಡಿಫಿಕೇಷನ್‌, ಡಿಸ್‌ಒಬಿಡಿಯನ್ಸ್‌, ಒಂದು ನಿಷ್ಠುರ ಸತ್ಯ ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸಿತು.

ಕಲಾವಿದರಿಗೆ ಸಿಎನ್‌ಆರ್‌ ರಾವ್‌ ಪ್ರಶಸ್ತಿ:

ಚಿತ್ರಕಲಾ ಪರಿಷತ್‌ ಆಯ್ಕೆ ಮಾಡುವ ಉದಯೋನ್ಮುಖ ಕಲಾವಿದರಿಗೆ ಅಥವಾ ಚಿತ್ರಕಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಈ ವರ್ಷದಿಂದಲೇ ತಮ್ಮ ಹೆಸರಿನಲ್ಲಿ ಪ್ರಶಸ್ತಿ ನೀಡುವುದಾಗಿ ಹಿರಿಯ ವಿಜ್ಞಾನಿ ಪ್ರೊ.ಸಿ.ಎನ್‌.ಆರ್‌.ರಾವ್‌ ತಿಳಿಸಿದರು.

ಚಿತ್ರಸಂತೆ ಉದ್ಘಾಟಿಸಿ ಮಾತನಾಡಿದ ಅವರು, ಅರ್ಹ ಕಲಾವಿದರನ್ನು ಗುರುತಿಸುವ ಜವಾಬ್ದಾರಿಯನ್ನು ಚಿತ್ರಕಲಾ ಪರಿಷತ್‌ಗೆ ವಹಿಸಿದರು.

ಮನೆ ಅಥವಾ ಕಟ್ಟಡದ ಗೋಡೆಗಳನ್ನು ಕಲಾಕೃತಿಗಳಿಂದ ಅಲಂಕರಿಸಲು ಕಟ್ಟಡದ ಒಟ್ಟು ವೆಚ್ಚದಲ್ಲಿ ಶೇ 10ರಷ್ಟು ಮೀಸಲಿಡಬೇಕು. ಮನೆಯ ಅಂದವೂ ಹೆಚ್ಚುತ್ತದೆ. ಕಲೆ–ಕಲಾವಿದರನ್ನೂ ಪ್ರೋತ್ಸಾಹಿಸಿದಂತಾಗುತ್ತದೆ ಎಂದರು.

ಪರಿಷತ್‌ ವ್ಯವಸ್ಥೆ ಮಾಡಿದ್ದ ವಿಶೇಷ ವಾಹನದಲ್ಲಿ ತೆರಳಿ ಸಂತೆಯಲ್ಲಿ ಕಲಾಕೃತಿಗಳನ್ನು ವೀಕ್ಷಿಸಿದರು.

ಸಂಜೆ ಕಾಲೇಜು ಶೀಘ್ರ ಆರಂಭ:

ದೇಶದಲ್ಲೇ ಮೊದಲ ಬಾರಿಗೆ ‘ಬೆಂಗಳೂರು ಸ್ಕೂಲ್‌ ಆಫ್‌ ವಿಜ್ಯುವಲ್‌ ಆರ್ಟ್ಸ್‌’ ದೃಶ್ಯ ಕಲೆಯ ಸಂಜೆ ಕಾಲೇಜನ್ನು ಚಿತ್ರಕಲಾ ಪರಿಷತ್‌ 2018–2019ನೇ ಶೈಕ್ಷಣಿಕ ಸಾಲಿನಿಂದಲೇ ಆರಂಭಿಸುತ್ತಿದೆ ಎಂದು ಪರಿಷತ್‌ ಅಧ್ಯಕ್ಷ ಬಿ.ಎಲ್‌.ಶಂಕರ್‌ ತಿಳಿಸಿದರು.

ಪ್ರಥಮ ವರ್ಷದ ಪದವಿಗೆ 30 ಮತ್ತು ಸ್ನಾತಕೋತ್ತರ ಪದವಿಗೆ 30 ಸೀಟುಗಳ ಪ್ರವೇಶ ನೀಡಲು ಅನುಮತಿ ಸಿಕ್ಕಿದೆ. ಈಗಿರುವ ಪರಿಷತ್‌ ಕ್ಯಾಂಪಸ್‌ನಲ್ಲಿಯೇ ಕಾಲೇಜು ಆರಂಭಿಸಲಾಗುವುದು. ಮುಂದೆ ಬೇಡಿಕೆಗೆ ಅನುಗುಣವಾಗಿ ಪ್ರವೇಶ ಸಂಖ್ಯೆ ಹೆಚ್ಚಿಸಲಾಗುವುದು ಎಂದರು.

ರಾಜರಾಜೇಶ್ವರಿ ನಗರದಲ್ಲಿ ಜೆಎಸ್‌ಎಸ್‌ ಎಂಜಿನಿಯರಿಂಗ್‌ ಕಾಲೇಜು ಪಕ್ಕದಲ್ಲಿ 14 ಎಕರೆಯಲ್ಲಿ ₹20 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಪರಿಷತ್‌ ಕ್ಯಾಂಪಸ್‌ನ ಮೊದಲ ಹಂತದ ಕಾಮಗಾರಿ ಮೇ ಅಥವಾ ಜೂನ್‌ನಲ್ಲಿ ಪೂರ್ಣವಾಗಲಿದೆ ಎಂದರು.

ಮೇಯರ್‌ ₹1 ಕೋಟಿ ಅನುದಾನ:

ಚಿತ್ರಸಂತೆಗೆ ಭೇಟಿ ನೀಡಿದ್ದ ಮೇಯರ್‌ ಆರ್‌.ಸಂಪತ್‌ರಾಜ್‌, ಪರಿಷತ್‌ ಆವರಣದಲ್ಲಿ ಕಲಾವಿದರ ಕಲಾಕೃತಿಗಳ ಪ್ರದರ್ಶನಕ್ಕಾಗಿ ಶಾಶ್ವತ ಶೆಡ್‌ ನಿರ್ಮಿಸಲು ₹1 ಕೋಟಿ ಅನುದಾನ ನೀಡುವುದಾಗಿ ತಿಳಿಸಿದರು.

ಬಿಬಿಎಂಪಿ ಕೇಂದ್ರ ಕಚೇರಿ ಕಟ್ಟಡ ಮತ್ತು ಲಾಲ್‌ಬಾಗ್‌ನ ಕೆಂಪೇಗೌಡ ಗೋಪುರದ ಪ್ರತಿಕೃತಿಗಳನ್ನು ತಲಾ ₹1500 ನೀಡಿ ಕಲಾವಿದ ಹಾಗೂ ಪಾಲಿಕೆ ನೌಕರ ರಾಜ್‌ಕುಮಾರ್‌ ಬಿ.ಭಿರಸಿಂಗಿ ಅವರಿಂದ ಖರೀದಿಸಿದರು.

ಜಾಕ್ಸನ್‌ ಜೊತೆ ಸೆಲ್ಫಿ!

ಅಮೆರಿಕದ ಕಲಾವಿದ ಗ್ರೆಗೋರಿ ಜಾಕ್ಸನ್‌ ಅವರನ್ನು ಕುಳ್ಳಿರಿಸಿಕೊಂಡು ಚಿತ್ರಕಲಾ ಪರಿಷತ್‌ನ ವಿದ್ಯಾರ್ಥಿಗಳು ಬಾಡಿ ಪೇಯಿಂಟಿಂಗ್‌ ಮಾಡುತ್ತಿದ್ದರು. ಜಾಕ್ಸನ್‌ ಹಣೆ ಮೇಲೆ ‘ಕನ್ನಡ’, ಎದೆ ಮೇಲೆ ‘ಹೆಮ್ಮೆಯ ಕನ್ನಡಿಗ’, ಹೊಟ್ಟೆ ಮೇಲೆ ‘ಬಾರಿಸು ಕನ್ನಡ ಡಿಂಡಿಮ’ ಪದಗಳು ವರ್ಣಮಯವಾಗಿ ಕುಂಚದಲ್ಲಿ ಮೂಡಿದ್ದವು. ಬೆನ್ನ ಮೇಲೆ ಕರ್ನಾಟಕದ ನಕ್ಷೆ ಬಿಡಿಸಲಾಗಿತ್ತು. ಯುವಕ, ಯುವತಿಯರು ಜಾಕ್ಸನ್‌ ಜತೆಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.

ಪಾರ್ಕಿಂಗ್‌ಗೆ ಪಡಿಪಾಟಲು

ಕುಮಾರಕೃಪಾ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಮೌರ್ಯ ವೃತ್ತ, ಆನಂದರಾವ್‌ ವೃತ್ತ ಹಾಗೂ ರೇಸ್‌ ವ್ಯೂ ಜಂಕ್ಷನ್‌ ಮೂಲಕ ಕುಮಾರಕೃಪಾ ರಸ್ತೆಗೆ ವಾಹನಗಳಲ್ಲಿ ಬರಲು ಅವಕಾಶ ಇರಲಿಲ್ಲ.

ಟಿ.ಚೌಡಯ್ಯ ರಸ್ತೆಯಿಂದ ಬರುವ ವಾಹನಗಳಿಗೂ ವಿಂಡ್ಸರ್‌ ಮ್ಯಾನರ್‌ ವೃತ್ತದ ಮೂಲಕ ಕುಮಾರಕೃಪಾ ರಸ್ತೆಗೆ ಪ್ರವೇಶ ಇರಲಿಲ್ಲ. ಜನರು ದೂರದಲ್ಲಿ ವಾಹನ ನಿಲ್ಲಿಸಿ ನಡೆದುಕೊಂಡೇ ಬರಬೇಕಿತ್ತು. ವಯಸ್ಸಾದವರು ಮತ್ತು ಅಂಗವಿಕಲರಿಗೆ ಮಾತ್ರ ಪರಿಷತ್‌ನಿಂದಲೇ ವಿಶೇಷ ವಾಹನಗಳ ವ್ಯವಸ್ಥೆ ಮಾಡಲಾಗಿತ್ತು.

ರೈಲ್ವೆ ಸಮಾನಾಂತರ ರಸ್ತೆ, ರೇಸ್‌ಕೋರ್ಸ್‌ ರಸ್ತೆ (ಟ್ರಿಲೈಟ್‌ ಜಂಕ್ಷನ್‌ನಿಂದ ಮೌರ್ಯ ಜಂಕ್ಷನ್‌ವರೆಗೆ ರಸ್ತೆಯ ಪೂರ್ವ ಭಾಗ), ಕ್ರೆಸೆಂಟ್‌ ರಸ್ತೆ (ಗುರುರಾಜ ಕಲ್ಯಾಣ ಮಂಟಪದಿಂದ ಜನಾರ್ದನ್‌ ಹೋಟೆಲ್‌ವರೆಗೆ) ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೂ ವಾಹನ ನಿಲುಗಡೆಗೆ ಜಾಗ ಸಿಗದೆ ಜನರು ಪಡಿಪಾಟಲು ಅನುಭವಿಸಬೇಕಾಯಿತು.

4 ಲಕ್ಷ ಕಲಾಸಕ್ತರ ಭೇಟಿ

‘ಚಿತ್ರಸಂತೆಯಲ್ಲಿ ಈ ಸಲ ದಾಖಲೆ ಸಂಖ್ಯೆಯ ಕಲಾವಿದರು ಪಾಲ್ಗೊಂಡರು. ಅಂದಾಜು 4 ಲಕ್ಷಕ್ಕೂ ಹೆಚ್ಚು ಜನರು ಚಿತ್ರ ಸಂತೆಗೆ ಬಂದಿದ್ದಾರೆ. ಸುಮಾರು ₹3.50 ಕೋಟಿ ಮೌಲ್ಯದ ಕಲಾಕೃತಿಗಳು ಮಾರಾಟವಾಗಿವೆ’ ಎಂದು ಚಿತ್ರಕಲಾ ಪರಿಷತ್‌ ಅಧ್ಯಕ್ಷ ಬಿ.ಎಲ್‌.ಶಂಕರ್‌ ಮಾಹಿತಿ ನೀಡಿದರು.

ಕೆನರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಎಟಿಎಂ ಹಾಗೂ ಪಿಒಎಸ್‌ ಉಪಕರಣಗಳ ವ್ಯವಸ್ಥೆ ಮಾಡಲಾಗಿತ್ತು. ಮೊಬೈಲ್‌ ವಾಲೆಟ್‌, ಪೇಟಿಎಂ ಆ್ಯಪ್‌ಗಳಿಂದಲೂ ಖರೀದಿ ವಹಿವಾಟು ನಡೆಯುತ್ತಿದ್ದುದು ಕಂಡುಬಂತು. ಸಂತೆಗೆ ಬಂದವರ ಹಸಿವು ನೀಗಿಸಲು ರುಚಿರುಚಿ ಆಹಾರದ ಮಳಿಗೆಗಳೂ ಇದ್ದವು.

***

ನಿತ್ಯದ ಜಂಜಾಟದಲ್ಲಿ ಬೇಸತ್ತವರಿಗೆ ಚಿತ್ರಸಂತೆ ಚೇತೋಹಾರಿ ಅನುಭವ ನೀಡುತ್ತದೆ. ಎಲ್ಲರಲ್ಲೂ ಕಲಾಸಕ್ತಿಯನ್ನು ಉದ್ದೀಪನಗೊಳಿಸುತ್ತದೆ.
–ಅನಿಲ್‌ಕುಮಾರ್‌, ಮೈಸೂರು

***

ದೇಶದ ಕಲಾ ಪರಂಪರೆ ಎಷ್ಟೊಂದು ಶ್ರೀಮಂತ ಮತ್ತು ವೈವಿಧ್ಯಮಯವಾಗಿದೆ ಎನ್ನುವುದು ಚಿತ್ರಸಂತೆಯಲ್ಲಿ ಅನಾವರಣಗೊಂಡಿದೆ.
–ದಿವ್ಯಾ ಆಲೂರು, ಬೆಂಗಳೂರು

***

ನನ್ನ ಮಗಳಿಗೆ ಚಿತ್ರಕಲೆಯಲ್ಲಿ ಆಸಕ್ತಿ ಇದೆ. ಅವಳಿಗಾಗಿ ಕಲಾಕೃತಿಗಳನ್ನು ಖರೀದಿಸಲು ಬಂದಿದ್ದೇನೆ. ದೇಶದಲ್ಲೇ ಅತ್ಯುತ್ತಮ ಚಿತ್ರಸಂತೆ. ಬಹಳ ಚೆನ್ನಾಗಿ ಆಯೋಜಿಸಿದ್ದಾರೆ.
–ಕಮಲ್‌, ಚೆನ್ನೈ

***

ರಾಜ ದರ್ಬಾರ್‌, ಶಾಕುಂತಲೆ, ಇನಿಯನ ಬರುವಿಕೆಗೆ ಕಾಯುವ ಲಲನೆಯ ಕಲಾಕೃತಿಗಳನ್ನು ಕಲಾಸಕ್ತರು ಮನಸಾರೆ ಪ್ರಶಂಸಿಸಿದರು. ಕಲಾವಿದನಿಗೆ ಇದಕ್ಕಿಂತ ದೊಡ್ಡ ಬಹುಮಾನ, ಗೌರವ ಮತ್ತೇನಿದೆ.
–ಮೋಹಿತ್‌ ವರ್ಮ, ಕಲಾವಿದ, ಝಾನ್ಸಿ, ಉತ್ತರ ಪ್ರದೇಶ

***

‘ಸಂತೆಗಾಗಿ ಮೂರು ಮೊಳ ನೇಯ್ದಂತೆ’ ಕಲಾವಿದರು ಕಲಾಕೃತಿ ರಚಿಸಿರುವುದಿಲ್ಲ. ಕಲೆಗಾಗಿ ಬದುಕನ್ನೇ ಮೀಸಲಿಟ್ಟಿರುತ್ತಾರೆ. ಆದರೆ, ಕಲಾ ಪೋಷಕರು ವರ್ಷದಿಂದ ವರ್ಷಕ್ಕೆ ಕಲಾಕೃತಿಗಳಿಗೆ ಬೆಲೆ ತಗ್ಗಿಸುತ್ತಲೇ ಇದ್ದಾರೆ.
–ರವಿಕುಮಾರ್‌, ಕಲಾವಿದ, ಅಗ್ರಹಾರ, ಸಖರಾಯಪಟ್ಟಣದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.