ADVERTISEMENT

ದುರಂತ: ಅಪಾರ್ಟ್‌ಮೆಂಟ್‌ ನಿವಾಸಿಗಳ ವಿಚಾರಣೆ

ಪಿಟಿಐ
Published 8 ಜನವರಿ 2018, 19:30 IST
Last Updated 8 ಜನವರಿ 2018, 19:30 IST

ಬೆಂಗಳೂರು: ಸೋಮಸುಂದರಪಾಳ್ಯದ ಎನ್‌.ಡಿ.ಸೆಪಲ್‌ ಅಪಾರ್ಟ್‌ಮೆಂಟ್‌ ಕೊಳಚೆ ನೀರು ಶುದ್ಧೀಕರಣ ಘಟಕ (ಎಸ್‌ಟಿಪಿ) ದುರಸ್ತಿ ವೇಳೆ ಮೂವರು ಮೃತಪಟ್ಟ ಪ್ರಕರಣ ಸಂಬಂಧ ಪೊಲೀಸರು, ಅಪಾರ್ಟ್‌ಮೆಂಟ್‌ ನಿವಾಸಿಗಳನ್ನು ಸೋಮವಾರ ವಿಚಾರಣೆಗೆ ಒಳಪಡಿಸಿದರು.

ಅವಘಡದಲ್ಲಿ ನಾರಾಯಣಸ್ವಾಮಿ (35), ಎಚ್‌. ಶ್ರೀನಿವಾಸ್‌ (58) ಹಾಗೂ ಮಾದೇಗೌಡ (42)‌ ಮೃತಪಟ್ಟಿದ್ದರು. ಘಟನೆ ಬಗ್ಗೆ ನಿವಾಸಿಗಳು ಹೇಳಿಕೆ ನೀಡಿದರು.

‘ಅಪಾರ್ಟ್‌ಮೆಂಟ್‌ ಎಸ್‌ಟಿಪಿ ಟ್ಯಾಂಕ್‌ನ ಮೋಟರ್‌ ದುರಸ್ತಿ ಎರಡು ದಿನಗಳಿಂದ ನಡೆಯುತ್ತಿತ್ತು. ಭಾನುವಾರ ಬೆಳಿಗ್ಗೆ ಸ್ವಚ್ಛತಾ ಮೇಲ್ವಿಚಾರಕ ನಾರಾಯಣಸ್ವಾಮಿ ಅವರೇ ಮೊದಲು ಎಸ್‌ಟಿಪಿ ಟ್ಯಾಂಕ್‌ಗೆ ಇಳಿದಿದ್ದರು. ಅವರು ಉಸಿರುಗಟ್ಟಿ ಕುಸಿದು ಬಿದ್ದಿದ್ದರಿಂದ, ಇನ್ನಿಬ್ಬರು ರಕ್ಷಣೆಗೆ ಹೋಗಿದ್ದರು. ಮೂವರು ಮೃತಪಟ್ಟರು ಎಂದು ಅಪಾರ್ಟ್‌ಮೆಂಟ್‌ನ ಸೆಕ್ಯುರಿಟಿ ಸಿಬ್ಬಂದಿ ಹೇಳಿಕೆ ನೀಡಿದ್ದಾರೆ’ ಎಂದು ಬಂಡೆಪಾಳ್ಯದ ಪೊಲೀಸರು ತಿಳಿಸಿದರು.

ADVERTISEMENT

ಸರ್ಕಾರದ ವಿರುದ್ಧ ಮೊಕದ್ದಮೆ

‘ಎಸ್‌ಟಿಪಿ ದುರಂತಕ್ಕೆ ಸರ್ಕಾರವೇ ಕಾರಣ. ಅದರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುತ್ತೇನೆ’ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಬೆಜವಾಡ ವಿಲ್ಸನ್‌ ತಿಳಿಸಿದರು.

‘ಸಫಾಯಿ ಕರ್ಮಚಾರಿಗಳ ಸಾವಿನ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಈ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕೊಳವೆಗಳನ್ನು ಸ್ವಚ್ಛಗೊಳಿಸಲು ಮನುಷ್ಯರನ್ನು ಬಳಸಿಕೊಳ್ಳದಂತೆ ನ್ಯಾಯಾಲಯವು ಆದೇಶ ನೀಡಿದರೂ ಪಾಲನೆ ಆಗುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಎಸ್‌ಟಿಪಿಗಳಿಗೆ ಮನುಷ್ಯರನ್ನು ಇಳಿಸುತ್ತಾರೆ ಎಂದರೆ, ಶುದ್ಧೀಕರಣ ಯಂತ್ರಗಳ ಕೊರತೆ ಇದೆ. ಈ ಕುರಿತು ಏನು ಮಾಡಬೇಕು ಎಂದು ಸಚಿವರು ನಮ್ಮನ್ನು (ಆಂದೋಲನ) ಕೇಳುತ್ತಾರೆ. ಸರ್ಕಾರ ಇರುವುದಾದರೂ ಏತಕ್ಕೆ.’

‘2008ರಿಂದ ಇದುವರೆಗೂ 60 ಸಫಾಯಿ ಕರ್ಮಚಾರಿಗಳು ಮೃತಪಟ್ಟಿದ್ದಾರೆ. ಇನ್ನು ಎಷ್ಟು ಮಂದಿ ಬಲಿಯಾಗಬೇಕು’ ಎಂದು ಪ್ರಶ್ನಿಸಿದರು.

ನಿವಾಸಿಗಳ ಸಂಘ ಪರಿಹಾರ ನೀಡಲಿ: ‘ಮೃತಪಟ್ಟ ಮೂವರು ಕಾರ್ಮಿಕರ ಕುಟುಂಬಗಳಿಗೆ ಅಪಾರ್ಟ್‍ಮೆಂಟ್‍ ಸಮುಚ್ಚಯದ ನಿವಾಸಿಗಳ ಸಂಘವೂ ಪರಿಹಾರ ನೀಡಬೇಕು’ ಎಂದು ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್‌) ಪಕ್ಷದ ಜಿಲ್ಲಾ ಘಟಕದ ಕಾರ್ಯದರ್ಶಿ ವಿ. ಜ್ಞಾನಮೂರ್ತಿ ಒತ್ತಾಯಿಸಿದರು.

‘ಸುರಕ್ಷತಾ ಪರಿಕರಗಳನ್ನು ಒದಗಿಸದೆ ಕಾರ್ಮಿಕರನ್ನು ಕೆಲಸಕ್ಕೆ ಬಳಸಿಕೊಂಡಿರುದು ಅಪರಾಧ. ಪಾಲಿಕೆ ಹಾಗೂ ಜಲಮಂಡಳಿ, ಒಳಚರಂಡಿ ಸುರಕ್ಷತಾ ಕೈಪಿಡಿಗಳನ್ನು  ಅಪಾರ್ಟ್‍ಮೆಂಟ್‍ಗಳಿಗೆ ತಲುಪಿಸಬೇಕು. ಅದರಲ್ಲಿರುವ ಸೂಚನೆಗಳನ್ನು ಪಾಲಿಸದಿದ್ದರೆ, ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.