ADVERTISEMENT

ತ್ರಿವಳಿ ತಲಾಖ್‌ ನಿಷೇಧ: ಮುಸ್ಲಿಂ ಮಹಿಳಾ ಸಂಘಟನೆ ವಿರೋಧ

ಮಸೂದೆ ರದ್ದುಪಡಿಸಲು ರಾಷ್ಟ್ರಪತಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 10 ಜನವರಿ 2018, 19:37 IST
Last Updated 10 ಜನವರಿ 2018, 19:37 IST

ಬೆಂಗಳೂರು: ಲೋಕಸಭೆಯಲ್ಲಿ ಅಂಗೀಕಾರಗೊಂಡಿರುವ ತ್ರಿವಳಿ ತಲಾಖ್‌ ನಿಷೇಧ ಮಸೂದೆಯನ್ನು ಮಹಫಿಲ್‌ ಇ–ನಿಸಾ ಮಹಿಳಾ ಸಂಘಟನೆ ವಿರೋಧಿಸಿದೆ.

’ಈ ಮಸೂದೆ ರಾಜ್ಯಸಭೆಯಲ್ಲೂ ಅಂಗೀಕಾರಗೊಂಡು ಜಾರಿಗೆ ಬಂದರೆ ಮುಸ್ಲಿಂ ಮಹಿಳೆಯರು ಬೀದಿಗಿಳಿದು ಕೇಂದ್ರದ ವಿರುದ್ಧ ಹೋರಾಟ ನಡೆಸುತ್ತೇವೆ. ಸಮುದಾಯದ ಹಿತಕ್ಕೆ ವಿರುದ್ಧವಾಗಿರುವ ಈ ಮಸೂದೆ ರದ್ದುಪಡಿಸುವಂತೆ ಒತ್ತಾಯಿಸಿ ದೇಶದಾದ್ಯಂತ 5 ಕೋಟಿ ಮುಸ್ಲಿಂ ಮಹಿಳೆಯರ ಸಹಿ ಸಂಗ್ರಹಿಸಿ, ರಾಷ್ಟ್ರಪತಿಗೆ ಸಲ್ಲಿಸುತ್ತೇವೆ’ ಎಂದು ಸಂಘಟನೆಯ ಪ್ರತಿನಿಧಿ ಸೀಮಾ ಕೌಸರ್‌ ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮೌಂಟ್‌ ಕಾರ್ಮೆಲ್‌ ಕಾಲೇಜಿನ ಪ್ರಾಧ್ಯಾಪಕಿ ಡಾ.ಚಮನ್‌ ಫರ್ಜಾನಾ, ‘ತಲಾಖ್‌ ಬಗ್ಗೆ ಶಾಬಾನು ಪ್ರಕರಣದಿಂದ ಶಹಬಾನೋ ಪ್ರಕರಣದವರೆಗೆ ಸುಪ್ರೀಂ ಕೋರ್ಟ್‌ನಲ್ಲಿ ಸುದೀರ್ಘ ಹೋರಾಟ ನಡೆದಿದೆ. ತ್ರಿವಳಿ ತಲಾಖ್ ಅನ್ನು ಈಗ ತಪ್ಪಾಗಿ ಅರ್ಥೈಸಲಾಗುತ್ತಿದೆ. ಅಸಾಂವಿಧಾನಿಕ ಮತ್ತು ಕುರ್‌ಆನ್‌ ಆಶಯಕ್ಕೆ ವಿರುದ್ಧವಾಗಿರುವ ಮಸೂದೆ ನಾಗರಿಕ ಸಂಬಂಧ ಮದುವೆಯನ್ನು ಅಪರಾಧೀಕರಣಗೊಳಿಸಲಿದೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಭಯೋತ್ಪಾದನೆ ಹೆಸರಿನಲ್ಲಿ ಈಗಾಗಲೇ ಮುಸ್ಲಿಂ ಸಮುದಾಯದ ಯುವಕರನ್ನು ಜೈಲಿಗೆ ಹಾಕಲಾಗುತ್ತಿದೆ. ಇನ್ನು ತ್ರಿವಳಿ ತಲಾಖ್‌ ನಿಷೇಧ ಮಸೂದೆ ಮೂಲಕ ಮತ್ತಷ್ಟು ಮಂದಿಯನ್ನು ಜೈಲಿಗೆ ಕಳುಹಿಸಿ, ಇಡೀ ಸಮಾಜವನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.

ಮುಸ್ಲಿಂ ಸಮುದಾಯದ ಮುಖಂಡರು, ಪ್ರಗತಿಪರ ಚಿಂತಕರು ಹಾಗೂ ಕಾನೂನು ತಜ್ಞರ ಅಭಿಪ್ರಾಯ ಆಲಿಸದೇ ಸರ್ಕಾರ ತನ್ನ ಮೂಗಿನ ನೇರಕ್ಕೆ ತರಾತುರಿಯಲ್ಲಿ ಮಸೂದೆ ಜಾರಿಗೊಳಿಸುವುದನ್ನು ಒಪ್ಪಲಾಗದು. ಮಸೂದೆಯನ್ನು ಸಂಸತ್‌ನ ಆಯ್ಕೆ ಸಮಿತಿಗೆ ಕಳುಹಿಸಬೇಕಿತ್ತು. ಸರಿಯಾದ ಮಸೂದೆ ಜಾರಿಗೊಳಿಸಿದರೆ ಮಾತ್ರ ಮುಸ್ಲಿಂ ಸಮಾಜ ಸ್ವೀಕರಿಸುತ್ತದೆ ಎಂದರು.

ಮಹಫಿಲ್‌ ಇ– ನಿಸಾ ಮಹಿಳಾ ಸಂಘಟನೆಯ ಅಧ್ಯಕ್ಷೆ ಶಾಹಿಸ್ತಾ ಯೂಸುಫ್‌, ‘ತಲಾಖ್‌ ನೀಡಿದ ಪತಿ ಜೈಲಿಗೆ ಹೋದ ಮೇಲೆ ಹೆಂಡತಿಯ ಸ್ಥಾನಮಾನ ಏನು? ಮಕ್ಕಳ ಲಾಲನೆ, ಪಾಲನೆ ಮಾಡುವವರು ಯಾರು ಎನ್ನುವುದು ಈ ಮಸೂದೆಯಲ್ಲಿ ಸ್ಪಷ್ಟವಾಗಿಲ್ಲ. ಕುಟುಂಬ ವ್ಯವಸ್ಥೆ ಛಿದ್ರಗೊಳಿಸುವ ಇಂತಹ ಮಸೂದೆಯ ಅಗತ್ಯವಿಲ್ಲ’ ಎಂದರು.

ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಅನ್ವರ್‌ ಷರೀಫ್‌, ‘2019ರ ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಇಂತಹ ಮಸೂದೆ ತರುತ್ತಿದೆ. ವೋಟುಗಳ ದ್ರುವೀಕರಣಕ್ಕೆ ಹೆಣೆದಿರುವ ರಹಸ್ಯ ಕಾರ್ಯಸೂಚಿ ಇದು. ಷರಿಯತ್‌, ವೈಯಕ್ತಿಕ ಕಾನೂನು ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕಿದ್ದರೆ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮತ್ತು ಮುಸ್ಲಿಂ ಸಂಘಟನೆಗಳು ಚರ್ಚಿಸಿ ತೀರ್ಮಾನಿಸುತ್ತವೆ. ಇದರಲ್ಲಿ ಸರ್ಕಾರ ಮಧ್ಯ ಪ್ರವೇಶಿಸಬಾರದು’ ಎಂದರು.

ಹೈಕೋರ್ಟ್‌ ವಕೀಲೆ ಗವಾರ್‌ ಉನ್ನೀಸಾ, ದೇಶದ ಜನಸಂಖ್ಯೆಯಲ್ಲಿ ಶೇ 20ರಷ್ಟು ಮುಸ್ಲಿಮರಿದ್ದಾರೆ. ಇದರಲ್ಲಿ 2,900 ಮಂದಿ ಮಾತ್ರ ತ್ರಿವಳಿ ತಲಾಖ್‌ ನೀಡಿದ್ದಾರೆ. 2.80 ಲಕ್ಷ ಮಹಿಳೆಯರಿಗೆ ತಲಾಖ್‌ ನೀಡದೆ ಅವರ ಗಂಡಂದಿರು ತ್ಯಜಿಸಿದ್ದಾರೆ. ಆದರೆ, ಸುಮಾರು 30 ಲಕ್ಷ ಹಿಂದೂ ಮಹಿಳೆಯರು ಜೀವನಾಂಶವೂ ಸಿಗದೆ ಗಂಡಂದಿರಿಂದ ಪರಿತ್ಯಕ್ತರಾಗಿದ್ದಾರೆ. ಮುಸ್ಲಿಂ ಸಮಾಜದಲ್ಲಿ ಶೇ 0.01ರಷ್ಟಿರುವ ಸಮಸ್ಯೆಯನ್ನು ಕೇಂದ್ರ ಸರ್ಕಾರ ಇಷ್ಟೊಂದು ಗಂಭೀರವಾಗಿ ತೆಗೆದುಕೊಂಡಿರುವುದರ ಹಿಂದೆ ಮುಸ್ಲಿಂ ಮಹಿಳೆಯರ ಹಿತಾಸಕ್ತಿ ಇಲ್ಲ, ಬಿಜೆಪಿ ಮತ್ತು ಸಂಘ ಪರಿವಾರ ಪ್ರೇರಿತ ರಾಜಕಾರಣವಿದೆ ಎಂದು ಆಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.