ADVERTISEMENT

ಒಂದೇ ವರ್ಷದಲ್ಲಿ 2.50 ಕೋಟಿ ಮಂದಿ ಬಳಕೆ

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನನಿಲ್ದಾಣ

​ಪ್ರಜಾವಾಣಿ ವಾರ್ತೆ
Published 10 ಜನವರಿ 2018, 20:00 IST
Last Updated 10 ಜನವರಿ 2018, 20:00 IST
ಒಂದೇ ವರ್ಷದಲ್ಲಿ 2.50 ಕೋಟಿ ಮಂದಿ ಬಳಕೆ
ಒಂದೇ ವರ್ಷದಲ್ಲಿ 2.50 ಕೋಟಿ ಮಂದಿ ಬಳಕೆ   

ಬೆಂಗಳೂರು: ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನನಿಲ್ದಾಣದ ಮೂಲಕ 2017ರಲ್ಲಿ 2.50 ಕೋಟಿ ಮಂದಿ ಪ್ರಯಾಣಿಸಿದ್ದಾರೆ. ಈ ಸಾಧನೆ ಮಾಡಿದ ದೇಶದ ಮೂರನೇ ವಿಮಾನನಿಲ್ದಾಣ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.

2008ರಲ್ಲಿ ಈ ವಿಮಾನನಿಲ್ದಾಣ ಆರಂಭವಾದ ಬಳಿಕ 2017ರಲ್ಲಿ ಮೊದಲ ಬಾರಿ ಪ್ರಯಾಣಿಕರ ಸಂಖ್ಯೆ 2.50 ಕೋಟಿ ದಾಟಿದೆ. ದೆಹಲಿ, ಮುಂಬೈನ ವಿಮಾನ ನಿಲ್ದಾಣಗಳ ಬಳಿಕ ಈ ಸಾಧನೆ ಮಾಡಿದ ಶ್ರೇಯ ಈ ನಿಲ್ದಾಣದ್ದು. ಏರ್‌ಪೋರ್ಟ್‌ ಕೌನ್ಸಿಲ್‌ ಇಂಟರ್‌ನ್ಯಾಷನಲ್‌ (ಎಸಿಐ) ಪಟ್ಟಿಯಲ್ಲಿ 2.5 ಕೋಟಿಯಿಂದ 4 ಕೋಟಿಯಷ್ಟು ಪ್ರಯಾಣಿಕರನ್ನು ನಿರ್ವಹಿಸುವ ವಿಮಾನನಿಲ್ದಾಣಗಳ ಸಾಲಿಗೂ ಇದು ಸೇರ್ಪಡೆಯಾಗಿದೆ.

ಈ ವಿಮಾನ ನಿಲ್ದಾಣ ಶೇ 22.5ರ ದರದಲ್ಲಿ ಅಭಿವೃದ್ಧಿ ಕಾಣುತ್ತಿದೆ. ವಿಶ್ವದ ಅಗ್ರ 100 ನಿಲ್ದಾಣಗಳ ಪೈಕಿ ಅತಿ ಹೆಚ್ಚು ಬೆಳವಣಿಗೆ ದರವನ್ನು ಹೊಂದಿರುವ ನಿಲ್ದಾಣವಿದು. ಜನವರಿಯಿಂದ ಡಿಸೆಂಬರ್‌ ಅಂತ್ಯದವರೆಗೆ, ದೇಶದೊಳಗೆ ಹಾಗೂ ದೇಶದ ಹೊರಗೆ ಪ್ರಯಾಣಿಸಿದವರು ಸೇರಿ ಒಟ್ಟು 2,50,48,302 ಮಂದಿ ಇದನ್ನು ಬಳಸಿದ್ದಾರೆ. 2016ರಲ್ಲಿ ಒಟ್ಟು 2.22 ಕೋಟಿ ಮಂದಿ ಬಳಸಿದ್ದರು.

ADVERTISEMENT

ಈ ತಿಂಗಳಲ್ಲಿ ಇದು ದಿನವೊಂದಕ್ಕೆ ಸರಾಸರಿ 600 ವಿಮಾನಗಳ ಹಾರಾಟ ನಿರ್ವಹಿಸಿದೆ.  ಇಂಡಿಗೊ ಕಂಪನಿಯ 116 ವಿಮಾನಗಳು ಈ ನಿಲ್ದಾಣದಿಂದ ನಿತ್ಯ ಹಾರಾಟ ನಡೆಸುತ್ತಿವೆ. ದಿನವೊಂದರಲ್ಲಿ ವಿಮಾನನಿಲ್ದಾಣವನ್ನು ಬಳಸುವ ಪ್ರಯಾಣಿಕರ ಸರಾಸರಿ ಸಂಖ್ಯೆ 2017ರಲ್ಲಿ 85 ಸಾವಿರಕ್ಕೆ ಏರಿಕೆ ಆಗಿದೆ.  2016ರಲ್ಲಿ ನಿತ್ಯ ಸರಾಸರಿ 60ಸಾವಿರ ಮಂದಿ ಬಳಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.