ADVERTISEMENT

ಪಾಲಿಕೆ ಬಜೆಟ್‌: ಸಾರ್ವಜನಿಕರ ಸಲಹೆಗಳಿಗೆ ಆಹ್ವಾನ

ಜನಾಗ್ರಹ ಸಂಸ್ಥೆ ವತಿಯಿಂದ ‘ಮೈ ಸಿಟಿ ಮೈ ಬಜೆಟ್‌’ ಅಭಿಯಾನ

​ಪ್ರಜಾವಾಣಿ ವಾರ್ತೆ
Published 11 ಜನವರಿ 2018, 19:30 IST
Last Updated 11 ಜನವರಿ 2018, 19:30 IST
ಪಾಲಿಕೆ ಬಜೆಟ್‌: ಸಾರ್ವಜನಿಕರ ಸಲಹೆಗಳಿಗೆ ಆಹ್ವಾನ
ಪಾಲಿಕೆ ಬಜೆಟ್‌: ಸಾರ್ವಜನಿಕರ ಸಲಹೆಗಳಿಗೆ ಆಹ್ವಾನ   

ಬೆಂಗಳೂರು: ಜನಾಗ್ರಹ ಸಂಸ್ಥೆಯು ಬಿಬಿಎಂಪಿಯ ಸಹಯೋಗದಲ್ಲಿ ‘ಮೈ ಸಿಟಿ ಮೈ ಬಜೆಟ್‌’ ಅಭಿಯಾನ ಹಮ್ಮಿಕೊಂಡಿದ್ದು, 2018–19ನೇ ಸಾಲಿನ ಬಜೆಟ್‌ ರೂಪಿಸಲು ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಿದೆ.

ಅರ್ಜಿ ನಮೂನೆಗಳು ವಾರ್ಡ್‌ ಕಚೇರಿ ಹಾಗೂ ಇಂದಿರಾ ಕ್ಯಾಂಟೀನ್‌ಗಳಲ್ಲಿ ಸಿಗಲಿವೆ. ಅವುಗಳನ್ನು ಭರ್ತಿ ಮಾಡಿ, ಅಲ್ಲೇ ಇರುವ ಪೆಟ್ಟಿಗೆಯಲ್ಲಿ ಹಾಕಬಹುದು. ಜನಾಗ್ರಹ ಸಂಸ್ಥೆಯ ವೈ ಸಿಟಿ ಮೈ ಬಜೆಟ್‌ ವಾಹನವು ಈ ಅರ್ಜಿಗಳನ್ನು ಕೊಂಡೊಯ್ಯಲಿದೆ. ವೆಬ್‌ಸೈಟ್‌ www.ichangemycity.com ಮೂಲಕವೂ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಬಹುದು.

ಅರ್ಜಿ ನಮೂನೆಯು ರಸ್ತೆ, ಬೀದಿದೀಪ, ಶೌಚಾಲಯ, ಉದ್ಯಾನ, ಆಟದ ಮೈದಾನ, ಪಾದಚಾರಿ ಮಾರ್ಗ ನಿರ್ಮಾಣ, ಸಿ.ಟಿ.ಟಿ.ವಿ ಕ್ಯಾಮೆರಾ ಅಳವಡಿಕೆ, ಕಸ ಸಂಗ್ರಹಣೆ ಹಾಗೂ ನಿರ್ವಹಣೆ, ನೀರು ಸರಬರಾಜು, ಒಳಚರಂಡಿ ವ್ಯವಸ್ಥೆ, ರಾಜಕಾಲುವೆ ನಿರ್ಮಾಣ, ಕೆರೆಗಳ ಪುನರುಜ್ಜೀವನ ಸೇರಿದಂತೆ 19 ಅಂಶಗಳನ್ನು ಒಳಗೊಂಡಿದೆ. ಈ ಅಂಶಗಳನ್ನು ಬಳಸಿಕೊಂಡು ಆಯಾ ವಾರ್ಡ್‌ಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಅರ್ಜಿಯಲ್ಲಿ ನಮೂದಿಸಬಹುದು. ಬಜೆಟ್‌ನ ಕರಡು ಪ್ರತಿ ಸಿದ್ಧಪಡಿಸುವ ಸಂದರ್ಭದಲ್ಲಿ ಈ ಅಂಶಗಳಿಗೂ ಒತ್ತು ನೀಡಲಾಗುತ್ತದೆ.

ADVERTISEMENT

ಅಭಿಯಾನದ ಕುರಿತು ಮಾಹಿತಿ ನೀಡಿದ ಜನಾಗ್ರಹ ಸಂಸ್ಥೆಯ ನಾಗರಿಕ ಸಹಭಾಗಿತ್ವ ವಿಭಾಗದ ಮುಖ್ಯಸ್ಥೆ ಸಪ್ನಾ ಕರೀಂ, ‘2017–18ನೇ ಸಾಲಿನ ಮೈ ಸಿಟಿ ಮೈ ಬಜೆಟ್‌ ಅಭಿಯಾನದಲ್ಲಿ 40 ಸಾವಿರ ನಾಗರಿಕರು ಪಾಲ್ಗೊಂಡಿದ್ದು, 67,114 ಸಲಹೆಗಳನ್ನು ನೀಡಿದ್ದರು. ಈ ಪೈಕಿ 57,197 ಸಲಹೆಗಳು ಪಾಲಿಕೆಗೆ ಸಂಬಂಧಿಸಿದ್ದು, ಇದರಲ್ಲಿ 12,468 ಸಲಹೆಗಳನ್ನು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಪರಿಗಣಿಸಲಾಗಿತ್ತು. ಅವುಗಳ ಅನುಷ್ಠಾನ ಪ್ರಗತಿಯಲ್ಲಿದೆ’ ಎಂದು ತಿಳಿಸಿದರು.

ನಾಗರಿಕರ ಸಲಹೆಗಳ ಪೈಕಿ ಶೇ 34ರಷ್ಟು ಬೀದಿದೀಪಗಳಿಗೆ, ಶೇ 27ರಷ್ಟು ರಸ್ತೆ, ಶೇ 21ರಷ್ಟು ರಸ್ತೆ ಬದಿಯ ಚರಂಡಿಗಳಿಗೆ ಹಾಗೂ ಶೇ 18ರಷ್ಟು ಉದ್ಯಾನಗಳು ಮತ್ತು ಸಾರ್ವಜನಿಕ ಶೌಚಾಲಯಗಳಿಗೆ ಸಂಬಂಧಿಸಿವೆ. ಈ ಅಭಿಯಾನಕ್ಕೆ ಸಂಬಂಧಿಸಿದಂತೆ ನಡೆದ ವಾರ್ಡ್‌ ಸಭೆಗಳಲ್ಲಿ 140 ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಸದಸ್ಯರು ಹಾಗೂ 973 ನಾಗರಿಕರು ಪಾಲ್ಗೊಂಡಿದ್ದರು ಎಂದು ಹೇಳಿದರು.

***

ಆದಾಯ ಎಷ್ಟಿದೆಯೋ ಅಷ್ಟೇ ಬಜೆಟ್‌ ಮಂಡಿಸಬೇಕು. 1,500 ಕಿ.ಮೀ.ಯ ಪ್ರಮುಖ ರಸ್ತೆಗಳಿದ್ದು, ಟೆಂಡರ್‌ ಶ್ಯೂರ್‌ ಅಡಿ ತ್ವರಿತಗತಿಯಲ್ಲಿ ಅಭಿವೃದ್ಧಿಪಡಿಸಬೇಕು.     ------         - ಪದ್ಮನಾಭರೆಡ್ಡಿ, ಬಿಬಿಎಂಪಿ ವಿರೋಧ ಪಕ್ಷದ ನಾಯಕ

***

ಬಜೆಟ್‌ ರೂಪಿಸಲು ನಾಗರಿಕರ ಪಾಲ್ಗೊಳ್ಳುವಿಕೆ ಅಗತ್ಯವಿದ್ದು, ಸಲಹೆ–ಸೂಚನೆ ನೀಡಬಹುದು. ಅವುಗಳನ್ನು ಆದ್ಯತೆ ಮೇರೆಗೆ ಪರಿಗಣಿಸಲಾಗುತ್ತದೆ
- ಮನೋಜ್‌ ರಾಜನ್‌, ‍ಬಿಬಿಎಂಪಿ ವಿಶೇಷ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.