ADVERTISEMENT

ಬಿದ್ದ ಮರಗಳು ಕಲಾಕೃತಿಗಳಾಗಿ ನಿಲ್ಲಲಿವೆ!

ಲಾಲ್‌ಬಾಗ್‌ನಲ್ಲಿ ಮರಕೆತ್ತನೆ ಶಿಬಿರಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2018, 19:35 IST
Last Updated 12 ಜನವರಿ 2018, 19:35 IST
ಬಿದ್ದ ಮರಗಳು ಕಲಾಕೃತಿಗಳಾಗಿ ನಿಲ್ಲಲಿವೆ!
ಬಿದ್ದ ಮರಗಳು ಕಲಾಕೃತಿಗಳಾಗಿ ನಿಲ್ಲಲಿವೆ!   

ಬೆಂಗಳೂರು: ಲಾಲ್‌ಬಾಗ್‌ ಉದ್ಯಾನದಲ್ಲಿ 2017ರ ಡಿಸೆಂಬರ್‌ನಲ್ಲಿ ಪ್ರಕೃತಿಯ ಮುನಿಸಿಗೆ ಧರೆಗುರುಳಿದ್ದ ಶತಮಾನಗಳ ಹಿಂದಿನ ವೃಕ್ಷಗಳು ಶಿಲ್ಪಕಲಾವಿದರ ಕೆತ್ತನೆಯಿಂದ ಕಲಾಕೃತಿಗಳ ರೂಪ ಪಡೆದು ಮತ್ತೆ ಉದ್ಯಾನದಲ್ಲಿ ಎದ್ದು ನಿಲ್ಲಲಿವೆ!

ಮಾವು, ನೀಲಗಿರಿ, ಮಹಾಘನಿ ಹಾಗೂ ನೇರಳೆ ಮರಗಳ 40 ದಿಮ್ಮಿಗಳಲ್ಲಿ 45 ಕಲಾಕೃತಿ ರೂಪಿಸುವ ಉದ್ದೇಶದ ಜನಪರ ಮರ ಕೆತ್ತನೆ ಶಿಬಿರ ರಾಜ್ಯ ಶಿಲ್ಪಕಲಾ ಅಕಾಡೆಮಿ ಮತ್ತು ತೋಟಗಾರಿಕಾ ಇಲಾಖೆ ಆಶ್ರಯದಲ್ಲಿ ಶುಕ್ರವಾರ ಆರಂಭವಾಯಿತು.

ಲಕ್ಷಾಂತರ ಜನರಿಗೆ, ಪಕ್ಷಿಗಳಿಗೆ ನೆರಳು, ಗಾಳಿ, ಆಮ್ಲಜನಕ ಪೂರೈಸಿದ್ದ ಈ ಮರಗಳು ಬಿದ್ದಾಗ ಸುತ್ತಮುತ್ತಲ ನಿವಾಸಿಗಳು ರೆಂಬೆಕೊಂಬೆಗಳನ್ನು ಕಡಿದು ಸೌದೆಗಾಗಿ ಸಾಗಿಸಿದ್ದರು. ಉಳಿದಿದ್ದ ದಿಮ್ಮಿಗಳೂ ಯಾರದೋ ಮನೆಯ ಕಿಟಕಿ ಬಾಗಿಲಿಗೋ, ಪೀಠೋಪಕರಣಕ್ಕೋ ಅಥವಾ ಉರುವಲಿಗಾಗಿ ಸೌದೆ ಮಂಡಿಗೆ ಹರಾಜು ಮೂಲಕ ವಿಲೇವಾರಿ ಆಗಲಿದ್ದವು. ಅಷ್ಟರಲ್ಲಿ ಈ ದಿಮ್ಮಿಗಳನ್ನೇ ಕಲಾಕೃತಿಗಳಾಗಿ ಕೆತ್ತಿಸಿ, ಉದ್ಯಾನದಲ್ಲೊಂದು ಮುಕ್ತ ಸಂಗ್ರಹಾಲಯ ತೆರೆಯುವ ಆಲೋಚನೆ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಮೂಡಿತು.

ADVERTISEMENT

ಬರೋಡಾ, ಮುಂಬೈ, ಕೋಲ್ಕತ್ತ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ 40 ಶಿಲ್ಪ ಕಲಾವಿದರು ಮತ್ತು 25 ಸಹಾಯಕ ಶಿಲ್ಪ ಕಲಾವಿದರು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಜ.27ರವರೆಗೆ ಶಿಬಿರ ನಡೆಯಲಿದೆ. ಲಾಲ್‌ಬಾಗ್‌ನ ಜಾವಾಫಿಗ್‌ ಮರದ ಆವರಣದಲ್ಲಿ ಸಂರಕ್ಷಿಸಿಟ್ಟಿರುವ ದಿಮ್ಮಿಗಳಲ್ಲಿ ಕಲೆ ಅರಳಿಸಲು ಕಲಾವಿದರು ಹಗಲು ರಾತ್ರಿ ಕೆತ್ತನೆ ಮಾಡಲಿದ್ದಾರೆ. ಲಾಲ್‌ಬಾಗ್‌ಗೆ ಭೇಟಿ ನೀಡುವವರೂ ಕೆತ್ತನೆಯನ್ನು ಕಣ್ತುಂಬಿಕೊಳ್ಳಲೂ ಅವಕಾಶವಿದೆ.

ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್, ‘ಶಿಲ್ಪಕಲಾಕೃತಿಗೆ ಸಂರಕ್ಷಿಸಿಟ್ಟಿರುವ ಈ ವೃಕ್ಷಗಳಲ್ಲಿ ಕೆಲವು 200 ವರ್ಷಗಳಷ್ಟು ಹಿಂದಿನ ಕಾಲದ್ದಾಗಿವೆ. ಬ್ರಿಟಿಷರ ಕಾಲದಲ್ಲಿ ನಮ್ಮ ದೇಶಕ್ಕೆ ಪರಿಚಯವಾದ ನೀಲಗಿರಿ ಮರವೂ ಇದೆ. ಇನ್ನೊಂದು ಬೃಹತ್‌ ಮಾವಿನ ಮರ ಹೈದರಾಲಿ ಕಾಲದ್ದಾಗಿದೆ. ಶಿಬಿರಕ್ಕೆ ಇಲಾಖೆಯಿಂದ ₹12 ಲಕ್ಷ ವಿನಿಯೋಗಿಸಲಾಗುತ್ತಿದೆ’ ಎಂದರು.

***

‘ಆಲೋಚನಾ ಲಹರಿ ಬೇಕು’

‘ನಾವು ಇಂದು ಶಿಲ್ಪಕಲೆಯಲ್ಲಿ ಬಹಳ ಹಿಂದೆ ಬಿದ್ದಿದ್ದೇವೆ. ಶ್ರವಣಬೆಳಗೊಳದ ಬಾಹುಬಲಿಯಂತಹ ಅದ್ಭುತ ಶಿಲ್ಪಕಲೆಯ ಪ್ರತಿಕೃತಿಯನ್ನೂ ಮಾಡಲಾಗದಷ್ಟು ಹಿನ್ನಡೆಯಲ್ಲಿದ್ದೇವೆ’ ಎಂದು ಕಲಾವಿದ ಡಾ.ಎಂ.ಎಸ್‌.ಮೂರ್ತಿ ವಿಷಾದಿಸಿದರು.

ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ‘ಒಳ್ಳೆಯ ಆಲೋಚನೆಗಳಿಲ್ಲದೆ ಕಲೆ ಹುಟ್ಟಲು ಸಾಧ್ಯವೇ ಇಲ್ಲ. ಕಲಾವಿದರು ಉತ್ತಮವಾದ ಆಲೋಚನಾ ಲಹರಿ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

***

ಲಾಲ್‌ಬಾಗ್‌ನಲ್ಲಿ ನೈಸರ್ಗಿಕ ವೈಪರೀತ್ಯಗಳಿಂದ ಉರುಳುವ ಮರಗಳನ್ನು ಮರಗೆತ್ತನೆ ಮಾಡಿಸಿ ವುಡ್‌ ಮ್ಯೂಸಿಯಂ ಮಾದರಿಯಲ್ಲಿ ಸಂರಕ್ಷಿಸಲಾಗುವುದು.
ಡಾ.ಎಂ.ಜಗದೀಶ್‌, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ

***

ನಶಿಸಿ ಹೋಗಲಿದ್ದ ಬಿದ್ದ ಮರಗಳಿಗೆ ಕಲಾಕೃತಿಯ ರೂಪ ಸಿಗುವುದರಿಂದ ಅವು ಇನ್ನೂ ಹೆಚ್ಚು ಕಾಲ ಅಸ್ತಿತ್ವದಲ್ಲಿರಲಿವೆ.
ರು.ಕಾಳಾಚಾರ್‌, ರಾಜ್ಯ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.