ADVERTISEMENT

ಸಂಕ್ರಾಂತಿಗೆ ಮನೆಗೂ ಹೋಗದೆ ಧರಣಿ

​ಪ್ರಜಾವಾಣಿ ವಾರ್ತೆ
Published 15 ಜನವರಿ 2018, 20:03 IST
Last Updated 15 ಜನವರಿ 2018, 20:03 IST

ಬೆಂಗಳೂರು: ಭೂಮಿ ಹಾಗೂ ವಸತಿ ಹಕ್ಕಿಗಾಗಿ ಆಗ್ರಹಿಸಿ ಭೂಮಿ ಹಾಗೂ ವಸತಿ ವಂಚಿತರು ಸಂಕ್ರಾಂತಿ ಹಬ್ಬಕ್ಕೆ ಮನೆಗೂ ಹೋಗದೆ ಧರಣಿ ಮುಂದುವರೆಸಿದ್ದಾರೆ.

ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ), ಜನಸಂಗ್ರಾಮ ಪರಿಷತ್ ಸದಸ್ಯರು ಹಾಗೂ ಲೇಖಕಿ ವಿಜಯಮ್ಮ ಕೇಸರಿಬಾತ್‌, ಪಲಾವ್, ಎಳ್ಳು–ಬೆಲ್ಲ, ಹೋಳಿಗೆ ತಂದು ಪ್ರತಿಭಟನಾಕಾರರಿಗೆ ಹಂಚಿದರು. ಗೌರಿಬಿದನೂರಿನಿಂದ ಬಂದ 20 ಹಕ್ಕಿಪಿಕ್ಕಿಗಳು ಹಾಡು ಹಾಡಿದರು.

ಹೋರಾಟಗಾರ ಸಿರಿಮನೆ ನಾಗರಾಜ್ ಮಾತನಾಡಿ, ‘ಡಿ.2 ರಂದು ಉನ್ನತ ಮಟ್ಟದ ಸಭೆ ಕರೆಯುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದರು. ಆದರೆ, ಸಭೆ ನಡೆಸಿಲ್ಲ’ ಎಂದು ದೂರಿದರು.

ADVERTISEMENT

ಮುಖ್ಯಮಂತ್ರಿಗೆ ಚುನಾವಣೆಯೇ ಮುಖ್ಯ:‘ಬೇಸಾಯ ಭೂಮಿಗಾಗಿ ಹಾಗೂ ಸೂರಿಗಾಗಿ ಜನರು ದಶಕಗಳಿಂದ ಪರಿತಪಿಸುತ್ತಿದ್ದು, ಈ ಸಂಬಂಧ ತುರ್ತಾಗಿ ಸ್ಪಂದಿಸಬೇಕಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಡವರಿಗಿಂತ ಚುನಾವಣೆಯೇ ಮುಖ್ಯವಾಗಿದೆ’ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಕಿಡಿಕಾರಿದರು.

‘ಬಡವರ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸುವುದೂ ಚುನಾವಣೆಗಿಂತ ಮುಖ್ಯ ಎಂಬ ವಿಚಾರ ಮುಖ್ಯಮಂತ್ರಿಗೆ ಅರ್ಥವಾಗುತ್ತಿಲ್ಲ. ಹೋರಾಟದ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ಜನದ್ರೋಹ ಎನಿಸುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.