ADVERTISEMENT

ಜೆ.ಸಿ.ರಸ್ತೆ: ಉಕ್ಕಿನ ಸೇತುವೆ ಕಾಮಗಾರಿ ತಿಂಗಳಲ್ಲಿ ಆರಂಭ

ಮಿನರ್ವ ವೃತ್ತದಿಂದ ಹಡ್ಸನ್‌ ವೃತ್ತದವರೆಗೆ ಸೇತುವೆ ನಿರ್ಮಾಣ * ಕಾಮಗಾರಿ ಪೂರ್ಣಗೊಳಿಸಲು 18 ತಿಂಗಳು ಕಾಲಾವಕಾಶ

ಎನ್.ನವೀನ್ ಕುಮಾರ್
Published 18 ಜನವರಿ 2018, 19:30 IST
Last Updated 18 ಜನವರಿ 2018, 19:30 IST
ಕಲಾವಿದನ ಕಲ್ಪನೆಯಲ್ಲಿ ಉಕ್ಕಿನ ಸೇತುವೆ
ಕಲಾವಿದನ ಕಲ್ಪನೆಯಲ್ಲಿ ಉಕ್ಕಿನ ಸೇತುವೆ   

ಬೆಂಗಳೂರು: ಜೆ.ಸಿ.ರಸ್ತೆಯಲ್ಲಿ ವಾಹನ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಮಿನರ್ವ ವೃತ್ತದಿಂದ ಹಡ್ಸನ್‌ ವೃತ್ತದವರೆಗೆ ನಿರ್ಮಾಣಗೊಳ್ಳಲಿರುವ ಉಕ್ಕಿನ ಸೇತುವೆ ಕಾಮಗಾರಿ ಇನ್ನು ಒಂದು ತಿಂಗಳಲ್ಲಿ ಆರಂಭವಾಗಲಿದೆ.

ಬಿಬಿಎಂಪಿಯು ಮುಖ್ಯಮಂತ್ರಿ ನಗರೋತ್ಥಾನ ಯೋಜನೆಯಡಿ ₹138.80 ಕೋಟಿ ವೆಚ್ಚದಲ್ಲಿ ಈ ಸೇತುವೆಯನ್ನು ನಿರ್ಮಿಸುತ್ತಿದೆ. ಯೋಜನೆಯ ಗುತ್ತಿಗೆಯನ್ನು ಎಂ.ವಿ.ಆರ್‌ ಕಂಪನಿಗೆ ವಹಿಸಲಾಗಿದೆ. ಕಾಮಗಾರಿಯನ್ನು ಪೂರ್ಣಗೊಳಿಸಲು 18 ತಿಂಗಳು ಕಾಲಾವಕಾಶ ನೀಡಲಾಗಿದೆ.

ಸೇತುವೆಯಲ್ಲಿ ದ್ವಿಮುಖ ಸಂಚಾರ ವ್ಯವಸ್ಥೆಯನ್ನು ಹೊಂದಿರುವ 4 ಪಥಗಳ ರಸ್ತೆ ನಿರ್ಮಾಣವಾಗಲಿದೆ. ವಿ.ವಿ.ಪುರ ರಸ್ತೆ ಹಾಗೂ ಆರ್ಮಿ ರಸ್ತೆ ಕಡೆಯಿಂದ ಬರುವ ವಾಹನಗಳು ಮಿನರ್ವ ವೃತ್ತದ ಬಳಿ ಮೇಲ್ಸೇತುವೆಗೆ ಹತ್ತಿದರೆ, ಕೆ.ಜಿ.ರಸ್ತೆ ಹಾಗೂ ಕಸ್ತೂರಬಾ ರಸ್ತೆಯಲ್ಲಿ ಇಳಿಯಬಹುದು. ಕೆ.ಆರ್‌.ವೃತ್ತದಿಂದ ನೃಪತುಂಗ ರಸ್ತೆ ಮಾರ್ಗವಾಗಿ ಬರುವ ವಾಹನಗಳು ಹಡ್ಸನ್‌ ವೃತ್ತದ ಬಳಿ ಮೇಲ್ಸೇತುವೆ ಏರಿ ಆರ್‌.ವಿ. ರಸ್ತೆಯಲ್ಲಿ ಇಳಿಯಬಹುದು.

ADVERTISEMENT

ಈ ಸೇತುವೆ ನಿರ್ಮಾಣದಿಂದ ಮಿನರ್ವ ವೃತ್ತ, ಊರ್ವಶಿ ಟಾಕೀಸ್‌, ಚರ್ಚ್‌ ಜಂಕ್ಷನ್, ಪುರಭವನ, ಎಲ್‌ಐಸಿಸಿ ಕೇಂದ್ರ ಕಚೇರಿ, ಹಲಸೂರು ಗೇಟ್ ಪೋಲಿಸ್ ಠಾಣೆ ಹಾಗೂ ಹಡ್ಸನ್ ವೃತ್ತದ ಜಂಕ್ಷನ್‌ಗಳಲ್ಲಿ ವಾಹನ ದಟ್ಟಣೆಯನ್ನು ತಪ್ಪಿಸಿದಂತಾಗುತ್ತದೆ. ಸಂಚಾರದಲ್ಲಿ ಸುಮಾರು 30 ನಿಮಿಷಗಳು ಉಳಿತಾಯವಾಗುತ್ತವೆ ಎಂದು ಬಿಬಿಎಂಪಿ ಹೇಳಿದೆ.

ಈ ಮೇಲ್ಸೇತುವೆಗೆ 2009ರಲ್ಲಿಯೇ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲಾಗಿತ್ತು. ಬಿಬಿಎಂಪಿ ತಾಂತ್ರಿಕ ಸಲಹಾ ಸಮಿತಿ (ಟಿಎಸಿ) ಅದೇ ವರ್ಷ ಡಿಪಿಆರ್‌ಗೆ ಅನುಮೋದನೆ ನೀಡಿತ್ತು. ಸೇತುವೆ ವಿನ್ಯಾಸದಿಂದ ಪಾರಂಪರಿಕ ಕಟ್ಟಡಗಳ ಅಂದಕ್ಕೆ ಧಕ್ಕೆ ಉಂಟಾಗಲಿದೆ ಎಂದು ಕೆಲವು ಸಂಘಟನೆಗಳು ದೂರಿದ್ದವು. ರಾಜ್ಯಮಟ್ಟದ ಉನ್ನತಾಧಿಕಾರ ಸಮಿತಿಯೂ ಇದಕ್ಕೆ ಧ್ವನಿಗೂಡಿಸಿತ್ತು. ಹಾಗಾಗಿ ಯೋಜನೆ ನನೆಗುದಿಗೆ ಬಿದ್ದಿತ್ತು.

ಈಗಿನ ಸರ್ಕಾರದ ಅವಧಿಯಲ್ಲಿ ಯೋಜನೆ ಮರುಜೀವ ಪಡೆದಿತ್ತು. ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ 2013ರ ಜುಲೈ 18ರಂದು ನಡೆದ 3ನೇ ರಾಜ್ಯಮಟ್ಟದ ಉಸ್ತುವಾರಿ ಸಮಿತಿ ಸಭೆಯಲ್ಲಿ ಹಾಗೂ 2014ರ ಫೆಬ್ರುವರಿ 14ರಂದು ನಡೆದ ಕೇಂದ್ರ ಮಂಜೂರು ಮತ್ತು ನಿರ್ವಹಣಾ ಸಮಿತಿ (ಸಿಎಸ್‌ಎಂಸಿ) ಸಭೆಯಲ್ಲಿ ಯೋಜನೆಗೆ ಅನುಮೋದನೆ ನೀಡಲಾಗಿತ್ತು.

ಯೋಜನೆಯ ಸಾಧ್ಯತೆ ಬಗ್ಗೆ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಅಭಿಪ್ರಾಯ ಕೋರಲಾಗಿತ್ತು. ಯೋಜನೆಯ ಉಪಯೋಗ, ಅನುಷ್ಠಾನದ ಸಾಧ್ಯತೆ ಕುರಿತು ಐಐಎಸ್‌ಸಿಯ ತಜ್ಞರು ಕೂಲಂಕಷವಾಗಿ ಪರಿಶೀಲಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ವಿವರವಾದ ವರದಿಯನ್ನು ಬಿಬಿಎಂಪಿಗೆ ಸಲ್ಲಿಸಿದ್ದರು.

ಆ ಬಳಿಕ ನಗರೋತ್ಥಾನ ಯೋಜನೆಯಡಿ ₹135 ಕೋಟಿ ವೆಚ್ಚದ ಕ್ರಿಯಾಯೋಜನೆಗೆ 2016ರ ಜನವರಿ 8ರಂದು ಅನುಮೋದನೆ ನೀಡಲಾಗಿತ್ತು. ಈ ಯೋಜನೆಯ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲು ನಾಗೇಶ್‌ ಕನ್‌ಸ್ಟಲ್ಟೆಂಟ್‌ ಸಂಸ್ಥೆಗೆ ವಹಿಸಲಾಗಿತ್ತು. ಆ ಸಂಸ್ಥೆಯು ₹138.80 ಕೋಟಿ ಮೊತ್ತದ ಡಿಪಿಆರ್‌ ಸಲ್ಲಿಸಿತ್ತು.

ಈಗ ವಿರೋಧದ ನಡುವೆಯೇ ಈ ಕಾಮಗಾರಿ ಆರಂಭಿಸಲು ಸಿದ್ಧತೆ ನಡೆದಿದೆ.

ಗಂಟೆಗೆ 12,271 ವಾಹನಗಳ ಸಂಚಾರ

2008ರಲ್ಲಿ ನಡೆಸಿದ್ದ ವಾಹನಗಳ ಸರ್ವೇಕ್ಷಣಾ ವರದಿ ಪ್ರಕಾರ, ಮಿನರ್ವ ವೃತ್ತದಿಂದ ಹಡ್ಸನ್ ವೃತ್ತದವರೆಗೆ ಬೆಳಗಿನ ದಟ್ಟಣೆ ಅವಧಿಯಲ್ಲಿ (9ರಿಂದ 11 ಗಂಟೆ) ಗಂಟೆಗೆ ಸರಾಸರಿ 10,327 ವಾಹನಗಳು ಹಾಗೂ ಸಂಜೆಯ ದಟ್ಟಣೆ ಅವಧಿಯಲ್ಲಿ (4ರಿಂದ 7 ಗಂಟೆ) ಗಂಟೆಗೆ ಸರಾಸರಿ 12,271 ವಾಹನಗಳು ಸಂಚರಿಸುತ್ತವೆ.

ಭಾರತೀಯ ರಸ್ತೆ ಕಾಂಗ್ರೆಸ್‌ ಪ್ರಕಾರ, ಗಂಟೆಗೆ 10 ಸಾವಿರಕ್ಕಿಂತ ಹೆಚ್ಚಿನ ವಾಹನಗಳು ಸಂಚರಿಸುತ್ತಿದ್ದರೆ ಅಂತಹ ರಸ್ತೆಗಳಲ್ಲಿ ಮೇಲ್ಸೇತುವೆ ನಿರ್ಮಿಸಬೇಕು. ಹೀಗಾಗಿ, ಸೇತುವೆ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಕಾಮಗಾರಿಯ ಶೀಘ್ರ ಅನುಷ್ಠಾನದಿಂದ ಜೆ.ಸಿ.ರಸ್ತೆಯಲ್ಲಿ ವಾಹನ ದಟ್ಟಣೆ ಕಡಿಮೆ ಆಗಲಿದೆ. ಪುರಭವನ ವೃತ್ತದಲ್ಲಿ ಸಿಗ್ನಲ್‌ಮುಕ್ತ ಸಂಚಾರ ಸಾಧ್ಯವಾಗಲಿದೆ. ವಾಹನ ದಟ್ಟಣೆ ಕಡಿಮೆ ಆಗಿ, ಇಂಧನ ಹಾಗೂ ಸಮಯ ಉಳಿತಾಯವಾಗುತ್ತದೆ ಎಂದರು.

ಅಂಕಿ ಅಂಶ

2.91 ಕಿ.ಮೀ.

ಉಕ್ಕಿನ ಸೇತುವೆ ಉದ್ದ

15 ಮೀ.

ಸೇತುವೆ ಅಗಲ

5.50 ಮೀ.

ಸರ್ವಿಸ್‌ ರಸ್ತೆಯ ಅಗಲ

5.50 ಮೀ.

ಸೇತುವೆ ಎತ್ತರ

1.50 ಮೀ.

ಗ್ರೇಡ್ ಮಟ್ಟದಲ್ಲಿ ಎರಡು ಬದಿಯಲ್ಲಿ ಪಾದಚಾರಿ ಮಾರ್ಗದ ಅಗಲ

1,404 ಚ.ಮೀ.

ಭೂಸ್ವಾಧೀನ ಪಡಿಸಿಕೊಳ್ಳಬೇಕಾದ ಜಾಗ

119

ಸೇತುವೆಯ ಕಂಬಗಳ ಸಂಖ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.