ADVERTISEMENT

ರೈತರ ನಿರ್ಲಕ್ಷ್ಯ, ಹಿಂದೂಗಳ ಹತ್ಯೆ ವಿರುದ್ಧ ಆಂದೋಲನ

ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2018, 20:50 IST
Last Updated 18 ಜನವರಿ 2018, 20:50 IST

ಬೆಂಗಳೂರು: ಕೃಷಿ ಕ್ಷೇತ್ರದ ನಿರ್ಲಕ್ಷ್ಯ ಮತ್ತು ಹಿಂದೂ ಕಾರ್ಯಕರ್ತರ ಹತ್ಯೆ ವಿರುದ್ಧದ ಆಂದೋಲನ ತೀವ್ರಗೊಳಿಸುವುದಾಗಿ ಬಿಜೆಪಿ ರಾಜ್ಯ ಉಸ್ತುವಾರಿ ಮುರುಳೀಧರರಾವ್ ತಿಳಿಸಿದರು.

‘ರೈತರ ಸಮಸ್ಯೆಗಳಿಗೆ ರಾಜ್ಯ ಸರ್ಕಾರದಿಂದ ಸ್ಪಂದನೆ ಸಿಗುತ್ತಿಲ್ಲ. ಹೀಗಾಗಿ 3,200 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಜೆಟ್‌ನಲ್ಲಿ ನಿಗದಿಪಡಿಸಿದ ಹಣದಲ್ಲಿ ಶೇ 37ರಿಂದ 42ರಷ್ಟು ಮಾತ್ರ ಈವರೆಗೆ ಖರ್ಚಾಗಿದ್ದು, ಸರ್ಕಾರ ನಿದ್ದೆಯಲ್ಲಿರುವುದಕ್ಕೆ ಇದು ಸಾಕ್ಷಿ’ ಎಂದು ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಆರೋಪಿಸಿದರು.

‘ಇದುವರೆಗೆ 24 ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ. ಇದನ್ನು ಪ್ರಶ್ನಿಸಿದ ಬಿಜೆಪಿ ನಾಯಕರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉಗ್ರವಾದಿಗಳಿಗೆ ಹೋಲಿಸುತ್ತಿದ್ದಾರೆ. ಹ್ಯೂಬ್ಲೋಟ್‌ ವಾಚ್‌ ಉಡುಗೊರೆಯಾಗಿ ಪಡೆದ ಮುಖ್ಯಮಂತ್ರಿ ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಿದ್ದಾರೆ. ಸರ್ಕಾರದ ಭ್ರಷ್ಟಾಚಾರ ಪ್ರಕರಣಗಳ ದೋಷಾರೋಪ ಪಟ್ಟಿಯನ್ನು ಜನರ ಮುಂದಿಡುತ್ತೇವೆ’ ಎಂದು ಹೇಳಿದರು.

ADVERTISEMENT

ನಾಲ್ಕೂವರೆ ವರ್ಷ ಸುಮ್ಮನಿದ್ದ ಸಿದ್ದರಾಮಯ್ಯ, ಈಗ ನವಕರ್ನಾಟಕ ನಿರ್ಮಾಣ ಮಾಡುವುದಾಗಿ ಜಾಹೀರಾತುಗಳನ್ನು ನೀಡುತ್ತಿರುವುದು ನಾಚಿಕೆಗೇಡು. ಪಕ್ಷದ ಪ್ರಚಾರಕ್ಕೆ ಸರ್ಕಾರದ ಹಣ ದುರ್ಬಳಕೆಯಾಗುತ್ತಿದೆ ಎಂದೂ ಆರೋಪಿಸಿದರು.

ಬಿಜೆಪಿ ಪರಿವರ್ತನಾ ಯಾತ್ರೆ ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳ ಜನರನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ಫೆ.4ರಂದು ಸಮಾರೋಪ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರಮೋದಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸ್ವಯಂ ಪ್ರೇರಿತವಾಗಿ ಲಕ್ಷಾಂತರ ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆಯಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಅಭ್ಯರ್ಥಿ ಬದಲಾವಣೆ ಇಲ್ಲ

‘ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮುಖ್ಯಮಂತ್ರಿ ಅಭ್ಯರ್ಥಿ ಎಂಬ ವಿಚಾರ ಬಿಟ್ಟು ಬಿಡಿ. ಅದು ಕೇವಲ ಊಹಾಪೋಹ. ರಾಜ್ಯದಲ್ಲಿ 10,000 ಕಿ.ಮೀ ಸುತ್ತಾಡಿರುವ ಯಡಿಯೂರಪ್ಪನವರೇ ಮುಖ್ಯಮಂತ್ರಿ ಅಭ್ಯರ್ಥಿ’ ಎಂದು ಸ್ಪಷ್ಟಪಡಿಸಿದರು.

ಅನಂತಕುಮಾರ ಹೆಗಡೆ ಹೇಳಿಕೆಯಿಂದ ಪಕ್ಷ ವರ್ಚಸ್ಸಿಗೆ ಧಕ್ಕೆಯಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಮುರುಳೀಧರರಾವ್, ‘ಆ ಬಗ್ಗೆ ಚರ್ಚೆ ಮಾಡುವುದು ಬೇಡ. ಎಲ್ಲಾ ಸಾಹಿತಿಗಳು, ರಾಜಕಾರಣಿಗಳು ಒಂದೇ ರೀತಿ ಇರುವುದಿಲ್ಲ. ನಾನು ಅವರನ್ನು ಕರೆದು ವಿಚಾರಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.