ADVERTISEMENT

ನಕ್ಸಲ್‌ ಶೋಧ ಅಂತ್ಯ: ತಂಡ ವಾಪಸ್‌

​ಪ್ರಜಾವಾಣಿ ವಾರ್ತೆ
Published 19 ಜನವರಿ 2018, 19:27 IST
Last Updated 19 ಜನವರಿ 2018, 19:27 IST

ಉಪ್ಪಿನಂಗಡಿ: ಶಿರಾಡಿ ಗ್ರಾಮದ ಮಿತ್ತಮಜಲು ಎಂಬಲ್ಲಿ ನಕ್ಸಲರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶೋಧ ಕಾರ್ಯ ಶುಕ್ರವಾರ ಸಂಜೆ ಅಂತ್ಯಗೊಂಡಿದೆ. ನಕ್ಸಲ್ ನಿಗ್ರಹ ಪಡೆ  ಹೆಬ್ರಿ ಮತ್ತು ಕಿಗ್ಗ ಕೇಂದ್ರಸ್ಥಾನಗಳಿಗೆ ತೆರಳಿದೆ.

ಹೆಬ್ರಿ ಎಎನ್‍ಎಫ್ ಇನ್‌ಸ್ಪೆಕ್ಟರ್ ತಿಮ್ಮಪ್ಪ ನಾಯ್ಕ ಹಾಗೂ ಕಿಗ್ಗ ಎಎನ್‍ಎಫ್‍ನ ಎಸ್‍ಐ ಅಮರೇಶ್ ನೇತೃತ್ವದಲ್ಲಿ ಎರಡು ತಂಡಗಳು ಪ್ರತ್ಯೇಕವಾಗಿ ಶೋಧಕಾರ್ಯ ನಡೆಸುತ್ತಿದ್ದವು. ತಿಮ್ಮಪ್ಪ ನಾಯ್ಕ ನೇತೃತ್ವದ ತಂಡ ಗುರುವಾರ ಶೋಧ ಮುಗಿಸಿ ಕೇಂದ್ರ ಸ್ಥಾನವಾದ ಹೆಬ್ರಿ ತೆರಳಿತ್ತು. ಅಮರೇಶ್ ನೇತೃತ್ವದ ತಂಡ ಶುಕ್ರವಾರ ಬೆಳಿಗ್ಗೆ ಕೇಂದ್ರ ಸ್ಥಾನವಾದ ಕಿಗ್ಗಕ್ಕೆ ತೆರಳಿದೆ  ಎಂದು ತಿಳಿದು ಬಂದಿದೆ.

ಈ ತಂಡಗಳು ಶಿಶಿಲ, ದೇರಗುಂಡಿ, ಮಿತ್ತಮಜಲು, ಉದನೆ, ಅರ್ಬಿಗುಡ್ಡೆ, ಚೆರ್ವತ್ತಡ್ಕ ಗುಡ್ಡೆ, ನೇರೆಂಕಿ ಮಲೆ, ಕಬ್ಬಿನಾಲೆ ರಕ್ಷಿತಾರಣ್ಯದಲ್ಲಿ ನಕ್ಸಲರಿಗಾಗಿ ಶೋಧ ನಡೆಸಿವೆ. ಅಡಗುತಾಣ , ಕುರುಹು, ಸುಳಿವು ದೊರೆಯದ್ದರಿಂದ ಮೇಲಧಿಕಾರಿಗಳ ಆದೇಶದಂತೆ ಶೋಧವನ್ನು ಅಂತ್ಯಗೊಳಿಸಲಾಗಿದೆ‌.

ADVERTISEMENT

ಎಸ್‌ಪಿ ಭೇಟಿ:  ಈ ಮಧ್ಯೆ ಗುರುವಾರ ರಾತ್ರಿ ನಕ್ಸಲ್ ನಿಗ್ರಹ ದಳದ ಅಧೀಕ್ಷಕ ಕೆ.ಟಿ. ಬಾಲಕೃಷ್ಣ ಹಾಗೂ ಡಿವೈಎಸ್ಪಿ ದಿನೇಶ್ ಕುಮಾರ್ ಮಿತ್ತಮಜಲಿಗೆ ಭೇಟಿ ನೀಡಿ ನಕ್ಸಲರು ಭೇಟಿ ನೀಡಿದ ಮನೆಯವರನ್ನು ಹಾಗೂ ಸ್ಥಳೀಯರನ್ನು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಇಬ್ಬರು ಪುರುಷರು ಮತ್ತು ಒಬ್ಬ ಮಹಿಳೆ ಇದ್ದ ನಕ್ಸಲ್ ತಂಡ ಭಾನುವಾರ ರಾತ್ರಿ ಮಿತ್ತಮಜಲುನಲ್ಲಿ 3 ದಲಿತ ಮನೆಗಳಿಗೆ ಭೇಟಿ ನೀಡಿ ಅಕ್ಕಿ, ಪಡಿತರ ಸಾಮಗ್ರಿ ಪಡೆದುಕೊಂಡು ಹೋಗಿದ್ದರು ಎಂಬ ಮಾಹಿತಿಯನ್ನು ಸ್ಮರಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.