ADVERTISEMENT

ಆಂಬುಲೆನ್ಸ್ ಚಾಲಕನ ಡಿಎಲ್ ಜಪ್ತಿ

​ಪ್ರಜಾವಾಣಿ ವಾರ್ತೆ
Published 20 ಜನವರಿ 2018, 19:30 IST
Last Updated 20 ಜನವರಿ 2018, 19:30 IST

ಬೆಂಗಳೂರು: ಪಾನಮತ್ತರಾಗಿ ಆಂಬುಲೆನ್ಸ್ ಚಾಲನೆ ಮಾಡುತ್ತಿದ್ದ ಆರೋಪದ ಮೇಲೆ ಹಲಸೂರು ಗೇಟ್ ಸಂಚಾರ ಪೊಲೀಸರು ವಿಶ್ವೇಶ್ವರಯ್ಯ ಎಂಬುವರ ಚಾಲನಾ ಪರವಾನಗಿಯನ್ನು (ಡಿಎಲ್) ಜಪ್ತಿ ಮಾಡಿದ್ದಾರೆ.

ಜಯನಗರದ ‘ಯಶಸ್ವಿನಿ ಆಂಬುಲೆನ್ಸ್‌ ಸರ್ವಿಸ್‌’ ಏಜೆನ್ಸಿಯಲ್ಲಿ ಕೆಲಸ ಮಾಡುವ ವಿಶ್ವೇಶ್ವರಯ್ಯ, ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಕಾರ್ಪೊ
ರೇಷನ್ ಮಾರ್ಗವಾಗಿ ಸಾಗುತ್ತಿದ್ದರು. ವಾಹನ ತಡೆದು ಆಲ್ಕೋಮೀಟರ್ ಮೂಲಕ ತಪಾಸಣೆಗೆ ಮಾಡಿದಾಗ, ಅವರ ದೇಹದಲ್ಲಿ 87 ಮಿ.ಗ್ರಾಂ ಮದ್ಯದ ಪ್ರಮಾಣವಿತ್ತು. ಹೀಗಾಗಿ, ಆಂಬುಲೆನ್ಸ್ ಜಪ್ತಿ ಮಾಡಿ ಕಳುಹಿಸಿದ್ದೆವು ಎಂದು ಪೊಲೀಸರು ಹೇಳಿದ್ದಾರೆ.

ಬೆಳಿಗ್ಗೆ ಠಾಣೆಗೆ ಬಂದ ಚಾಲಕ, ‘ಕುಣಿಗಲ್‌ಗೆ ಶವ ಸಾಗಿಸಿ, ನಗರಕ್ಕೆ ಮರಳುವಾಗ ಯಶವಂತಪುರದ ಬಾರ್‌ ವೊಂದರಲ್ಲಿ ಮದ್ಯಪಾನ ಮಾಡಿದ್ದೆ’ ಎಂದು ಹೇಳಿಕೆ ಕೊಟ್ಟರು. ಅವರ ಡಿಎಲ್ ಹಾಗೂ ವಾಹನದ ದಾಖಲೆಗಳನ್ನು ಪಡೆದು ಆಂಬುಲೆನ್ಸ್ ಬಿಟ್ಟು ಕಳುಹಿಸಿದೆವು. ಚಾಲನಾ ಪರವಾನಗಿಯನ್ನು ಅಮಾನತಿನಲ್ಲಿ ಇಡಲು ಸಾರಿಗೆ ಇಲಾಖೆಗೆ ಕಳುಹಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

‘ಸಾಮಾನ್ಯವಾಗಿ ಅಂಬುಲೆನ್ಸ್‌ಗಳ ತಪಾಸಣೆ ನಡೆಸುವುದು ಕಡಿಮೆ. ರೋಗಿಗಳನ್ನು ತುರ್ತಾಗಿ ಕರೆದೊಯ್ಯುತ್ತಿದ್ದಾರೆ ಎಂದು ಭಾವಿಸಿ ಅವುಗಳ ಸುಗಮ ಸಂಚಾರಕ್ಕೆ ಎಲ್ಲರೂ ಅನುವು ಮಾಡಿಕೊಡುತ್ತಾರೆ. ಇದನ್ನೇ ದುರುಪಯೋಗ ಮಾಡಿಕೊಳ್ಳುತ್ತಿರುವ ಕೆಲ ಚಾಲಕರು, ರೋಗಿಗಳಿಲ್ಲದಿದ್ದರೂ ಸೈರನ್ ಹಾಕಿಕೊಂಡು ಹೋಗುವ ಹಾಗೂ ಪಾನಮತ್ತರಾಗಿ ಚಾಲನೆ ಮಾಡವ ಖಯಾಲಿ ಬೆಳೆಸಿಕೊಂಡಿದ್ದಾರೆ. ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುತ್ತೇವೆ’ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.