ADVERTISEMENT

ಆಧುನಿಕ ಪದ್ಧತಿ ಉತ್ತೇಜಿಸಲು ಕೃಷಿ ಉತ್ಕೃಷ್ಟತಾ ಕೇಂದ್ರ: ಪ್ರಿಯಾಂಕ್‌ ಖರ್ಗೆ ಭರವಸೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2018, 19:51 IST
Last Updated 21 ಜನವರಿ 2018, 19:51 IST
ಮೇಳದಲ್ಲಿ ಪಾಲ್ಗೊಂಡಿದ್ದ ಜನ –ಪ್ರಜಾವಾಣಿ ಚಿತ್ರಗಳು
ಮೇಳದಲ್ಲಿ ಪಾಲ್ಗೊಂಡಿದ್ದ ಜನ –ಪ್ರಜಾವಾಣಿ ಚಿತ್ರಗಳು   

ಬೆಂಗಳೂರು: ಕೃಷಿ ಚಟುವಟಿಕೆಗಳಲ್ಲಿ ಯುವಕರು ತೊಡಗುವಂತೆ ಪ್ರೋತ್ಸಾಹಿಸಲು ಹಾಗೂ ಆಧುನಿಕ ಕೃಷಿ ಪದ್ಧತಿ ಅಳವಡಿಕೆ, ಸಂಶೋಧನೆಗಳನ್ನು ನಡೆಸಲು ‘ಕೃಷಿ ಉತ್ಕೃಷ್ಟತಾ ಕೇಂದ್ರ’ ಆರಂಭಿಸಲಾಗುವುದು ಎಂದು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

ಭಾನುವಾರ ಸಂಪನ್ನಗೊಂಡ ಸಾವಯವ, ಸಿರಿಧಾನ್ಯ ಅಂತರರಾಷ್ಟ್ರೀಯ ವ್ಯಾಪಾರ ಮೇಳದಲ್ಲಿ ನವೋದ್ಯಮಗಳಿಗೆ ಅನುದಾನದ ಚೆಕ್‌ ವಿತರಿಸಿ ಅವರು ಮಾತನಾಡಿದರು.

ರೈತ ಉತ್ಪಾದಕ ಸಂಸ್ಥೆಗಳ ಅಭಿಯಾನಕ್ಕೆ ಉತ್ತೇಜನ ನೀಡಲು, ಕಾರ್ಪೊರೇಟ್‌ ಸಂಸ್ಥೆಗಳೊಂದಿಗೆ ರೈತ ಉತ್ಪಾದಕ ಸಂಸ್ಥೆಗಳು ನೇರ ಸಂಪರ್ಕ ಕಲ್ಪಿಸಲು ಹಾಗೂ ಮಧ್ಯವರ್ತಿಗಳ ಹಾವಳಿ ತಪ್ಪಿಸುವುದಕ್ಕೂ ಈ ಕೇಂದ್ರ ಸಹಕಾರಿಯಾಗಲಿದೆ ಎಂದು ವಿವರಿಸಿದರು.

ADVERTISEMENT

ಕಳೆದ ವರ್ಷ 250ಕ್ಕೂ ಹೆಚ್ಚು ನವೋದ್ಯಮಗಳಿಗೆ ನೇರವಾಗಿ ಅನುದಾನ ಬಿಡುಗಡೆ ಮಾಡಿದ್ದೇವೆ. ‘ಎಲಿವೇಟ್‌ –100’ ಕಾರ್ಯಕ್ರಮದಲ್ಲಿ ಗ್ರಾಮೀಣ ಭಾಗಗಳಲ್ಲಿ 1,800 ನವೋದ್ಯಮಗಳು ಸ್ಥಾಪನೆಯಾಗಿದ್ದವು. ಅವುಗಳಲ್ಲಿ 111 ನವೋದ್ಯಮಗಳಿಗೆ ₹25ಕೋಟಿ ಅನುದಾನ ನೀಡಿದ್ದೇವೆ ಎಂದು ವಿವರಿಸಿದರು.

‘ವಿಶ್ವದಲ್ಲಿಯೇ ನವೋದ್ಯಮಗಳಿಗೆ ಉತ್ತಮ ವಾತಾವರಣ ಕಲ್ಪಿಸುತ್ತಿರುವ ಪ್ರದೇಶಗಳಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ನಾವು ಅಂತರ್ಜಾಲ ವ್ಯವಸ್ಥೆಯನ್ನು ಬಳಸುತ್ತಿರುವ ರೀತಿ ರಾಷ್ಟ್ರಕ್ಕೆ ಮಾದರಿಯಾಗಿದೆ’ ಎಂದರು.

ನವೋದ್ಯಮಗಳ ರಾಜ್ಯ: ‘ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಸೀಮಿತವಾಗಿದ್ದ ನವೋದ್ಯಮ ಈಗ ಕೃಷಿ ಕ್ಷೇತ್ರಕ್ಕೆ ಕಾಲಿಟ್ಟಿದೆ. ಕಳೆದ ವರ್ಷದಿಂದ ಇದಕ್ಕಾಗಿಯೇ ಬಜೆಟ್‌ನಲ್ಲಿ ₹10 ಕೋಟಿ ಮೀಸಲಿಡಲಾಗಿದೆ. ಈ ಮೇಳದಲ್ಲಿ 16 ಕೃಷಿ ನವೋದ್ಯಮಗಳಿಗೆ ₹2 ಕೋಟಿಯಷ್ಟು ಪ್ರೋತ್ಸಾಹ ಧನವನ್ನು ನೀಡಿದ್ದೇವೆ’ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.

‘ಮತ್ತೊಮ್ಮೆ ನವೋದ್ಯಮಗಳಿಗಾಗಿ ಅರ್ಜಿ ಆಹ್ವಾನಿಸಲಾಗುವುದು. ಖಾಸಗಿ ಕ್ಷೇತ್ರಗಳು ಕೃಷಿಯಿಂದ ದೂರ ಉಳಿದಿದ್ದವು. ಈ ಮೂಲಕ ಅವೂ ಕೃಷಿ ಕ್ಷೇತ್ರಕ್ಕೆ ಕಾಲಿಡುತ್ತಿವೆ’ ಎಂದು ವಿವರಿಸಿದರು.

‘ನಮ್ಮ ಕೃಷಿ ಪದ್ಧತಿಯಲ್ಲಿ ಹೆಚ್ಚು ತಂತ್ರಜ್ಞಾನ ಬಳಸುತ್ತಿಲ್ಲ. ಅವುಗಳ ನಡೆವೆ ಇರುವ ಅಂತರವನ್ನು ಕಡಿಮೆ ಮಾಡಿ, ತಂತ್ರಜ್ಞಾನ ಸ್ಪರ್ಶದಿಂದ ಇಳುವರಿ ಉತ್ತಮಗೊಳಿಸಿ, ರೈತರಿಗೆ ಹೆಚ್ಚು ಆದಾಯ ಬರುವಂತೆ ಮಾಡುವುದು ನಮ್ಮ ಉದ್ದೇಶವಾಗಿದೆ. ರೈತರು ಬೆಳೆದ ಉತ್ಪನ್ನಗಳನ್ನು ದಲ್ಲಾಳಿಗಳ ಹಾವಳಿಯಿಲ್ಲದೆ, ಮಾರಾಟ ಮಾಡುವ ವ್ಯವಸ್ಥೆ ರೂಪಿಸಬೇಕಿದೆ’ ಎಂದರು.

ಜೈವಿಕ ಇಂಡಿಯ ರಾಷ್ಟ್ರೀಯ ಪ್ರಶಸ್ತಿ

ಸಾವಯವ ಸಿರಿಧಾನ್ಯ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿರುವ ಆರು ರೈತರಿಗೆ ರಾಜ್ಯ ಸರ್ಕಾರದ ವತಿಯಿಂದ ನೀಡುವ ಜೈವಿಕ್‌ ಇಂಡಿಯ ರಾಷ್ಟ್ರೀಯ ಪ್ರಶಸ್ತಿ ನೀಡಿಲಾಯಿತು. ಈ ಬೆಳೆಗಳಿಗೆ ಪ್ರೋತ್ಸಾಹ ನೀಡುತ್ತಿರುವ ಉತ್ತರಾಖಂಡ (ಪ್ರಥಮ) ಕರ್ನಾಟಕ (ದ್ವಿತೀಯ) ಮಧ್ಯಪ್ರದೇಶ (ತೃತೀಯ) ರಾಜ್ಯ ಸರ್ಕಾರಗಳನ್ನು ಅತ್ಯುತ್ತಮ ರಾಜ್ಯ ಸರ್ಕಾರಗಳೆಂದು ಗುರುತಿಸಿ ಜೈವಿಕ ರಾಷ್ಟ್ರೀಯ ಪ್ರಶಸ್ತಿ ನೀಡಲಾಯಿತು. ಪ್ರಶಸ್ತಿಯು ತಲಾ ₹50,000 (ಪ್ರಥಮ) ₹25,000 (ದ್ವಿತೀಯ) ನಗದು ಒಳಗೊಂಡಿದೆ.

ಆಹಾರ ಸಂಸ್ಕರಣೆಗೆ ಪ್ರೋತ್ಸಾಹ

‘ಆಹಾರ ಸಂಸ್ಕರಣಾ ಘಟಕ ಮಾಡಲು ಇಚ್ಛಿಸುವವರಿಗೂ ಇಲಾಖೆಯಿಂದ ಪ್ರೋತ್ಸಾಹ ಧನ ನೀಡಲಾಗುತ್ತದೆ. ಕೇವಲ ಹೊಸದಾಗಿ ಪ್ರಾರಂಭಿಸಿದವರಿಗಲ್ಲದೆ, ಈಗಾಗಲೇ ಕಂಪನಿ ಪ್ರಾರಂಭಿಸಿದ್ದವರು ಉದ್ಯಮ ವಿಸ್ತರಿಸುವ ಬಗ್ಗೆ ಯೋಜನಾ ವರದಿ ಸಿದ್ಧಪಡಿಸಿ, ಇಲಾಖೆಗೆ ಕಳುಹಿಸಿದರೆ. ಅವರಿಗೂ ಧನಸಹಾನ ಮಾಡುತ್ತೇವೆ’ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.