ADVERTISEMENT

‘ಮಿಲೆನಿಯಂ ವೋಟರ್ಸ್‌’ಗಾಗಿ ಹುಡುಕಾಟ!

2000ನೇ ವರ್ಷದ ಮೊದಲ ದಿನ ಜನಿಸಿದವರಿಗೆ ವಿಶಿಷ್ಟ ಮತದಾರರ ಗುರುತಿನ ಚೀಟಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2018, 19:30 IST
Last Updated 22 ಜನವರಿ 2018, 19:30 IST
‘ಮಿಲೆನಿಯಂ ವೋಟರ್ಸ್‌’ಗಾಗಿ ಹುಡುಕಾಟ!
‘ಮಿಲೆನಿಯಂ ವೋಟರ್ಸ್‌’ಗಾಗಿ ಹುಡುಕಾಟ!   

ಬೆಂಗಳೂರು: 01.01.2000 ದಂದು ಜನಿಸಿದವರಿಗಾಗಿ ಬಿಬಿಎಂಪಿ ಹುಡುಕಾಟ ನಡೆಸುತ್ತಿದೆ! ರಾಜ್ಯದಲ್ಲಿ ಇನ್ನು ಮೂರು ತಿಂಗಳಲ್ಲಿ ನಡೆಯುವ ವಿಧಾನಸಭಾ ಚುನಾವಣೆಯ ಮತದಾನದಲ್ಲಿ 2000ನೇ ವರ್ಷದ ಮೊದಲ ದಿನ ಜನಿಸಿದವರು ಹೊಸ ಅತಿಥಿಗಳಾಗಲಿದ್ದಾರೆ. ಇವರಲ್ಲಿ ಕೆಲವರನ್ನು ಪ್ರಜಾಪ್ರಭುತ್ವದ ಚುನಾವಣಾ ಪ್ರಕ್ರಿಯೆಯ ರಾಯಭಾರಿಗಳಂತೆ ಬಳಸಿಕೊಳ್ಳಲು ಕೇಂದ್ರ ಚುನಾವಣಾ ಆಯೋಗವು ವಿಶಿಷ್ಟ ಕಾರ್ಯಕ್ರಮ ಆಯೋಜಿಸಲು ಉದ್ದೇಶಿಸಿದೆ.

ಈ ವಿಧಾನಸಭಾ ಚುನಾವಣೆಯಲ್ಲಿ 2000 ಇಸವಿಯ ಜನವರಿ, ಫೆಬ್ರುವರಿ ಮಾರ್ಚ್‌ನಲ್ಲಿ ಜನಿಸಿದವರಿಗೆ ಮಾತ್ರ ಮತದಾನದ ಹಕ್ಕು ಸಿಗಲಿದೆ. ಇದೇ 25 ರಂದು ನಡೆಯುವ ರಾಷ್ಟ್ರೀಯ ಮತದಾರರ ದಿನ ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ‘ಮಿಲೆನಿಯಂ ವೋಟರ್ಸ್‌’ ಹೆಸರಿನ ಮತದಾರರ ಗುರುತಿನ ಚೀಟಿಯನ್ನು ಆಯ್ದ ಕೆಲವರಿಗೆ ವಿತರಿಸಲಿದ್ದಾರೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

‘ಮಿಲೆನಿಯಂ ವೊಟರ್ಸ್‌’ ಗುರುತಿನ ಚೀಟಿಯನ್ನು ವಿತರಿಸುವ ಉದ್ದೇಶದಿಂದ ಚುನಾವಣಾ ಆಯೋಗ 01.0.1.2000 ದಂದು ಜನಿಸಿರುವ ಆಯ್ದ ಯುವಕ– ಯುವತಿಯರ ಹೆಸರುಗಳನ್ನು ನೀಡುವಂತೆ ಬಿಬಿಎಂಪಿಗೆ ಸೂಚಿಸಿದೆ.  ಅದೇ ದಿನದಂದು ಜನಿಸಿರುವವರ ಹೆಸರು ಮತದಾರರ ಪಟ್ಟಿಯಲ್ಲಿ ಸೇರಿಸಿದ್ದರೆ ಆ ಕುರಿತ ಮಾಹಿತಿಯನ್ನು ಬಿಬಿಎಂಪಿಯು ಆಯೋಗಕ್ಕೆ ನೀಡಲಿದೆ. ಇದೇ ರೀತಿಯಲ್ಲಿ ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ‘ಮಿಲೆನಿಯಂ ವೋಟರ್ಸ್‌’ಗಳನ್ನು ಗುರುತಿಸಲು ಕೇಂದ್ರ ಚುನಾವಣಾ ಆಯೋಗ ಸೂಚಿಸಿದೆ.

ADVERTISEMENT

ಫೆಬ್ರುವರಿ 28 ಕ್ಕೆ ಮತದಾರರ ಪಟ್ಟಿ ಅಂತಿಮಗೊಳ್ಳಲಿದೆ.  ‘ಮಿಲೆನಿಯಂ ವೋಟರ್ಸ್‌’ ಅಡಿ ವಿಶೇಷ ಮತದಾರರ ಗುರುತಿನ ಚೀಟಿ ಪಡೆಯುವ ಯುವಕ– ಯುವತಿಯರನ್ನು ಮತದಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ (Systematic Voters’ Education and Electoral Participation)ದಲ್ಲಿ ಬಳಸಿಕೊಳ್ಳಲು ಆಯೋಗ ಉದ್ದೇಶಿಸಿದೆ ಮೂಲಗಳು ತಿಳಿಸಿವೆ.

ಚುನಾವಣೆ ಮತ್ತು ಮತದಾನದ ಮಹತ್ವದ ಕುರಿತು ಶಾಲಾ– ಕಾಲೇಜು ವಿದ್ಯಾರ್ಥಿಗಳಿಗಾಗಿ ರಾಜ್ಯ ಮಟ್ಟದ ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅದರಲ್ಲಿ ಗದಗ ಜಿಲ್ಲೆಯ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ವಿಜೇತರಾಗಿದ್ದು, ಅವರಿಗೆ ರಾಜ್ಯಪಾಲರು ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ. ರಾಷ್ಟ್ರೀಯ ಮತದಾರರ ದಿನ ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲೂ ನಡೆಯಲಿದೆ.

ವಿಶೇಷ ಸೌಲಭ್ಯಗಳು: ಈ ಬಾರಿ ಮತದಾರರ ದಿನದ ಘೋಷ ವಾಕ್ಯ ‘ಆಕ್ಸೆಸೆಬಲ್‌ ಎಲೆಕ್ಷನ್‌’. ಮತದಾನದ ದಿನ ಮತಗಟ್ಟೆಯಲ್ಲಿ ಎಲ್ಲ ರೀತಿ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಈ ಘೋಷ ವಾಕ್ಯವನ್ನು ಇಡಲಾಗಿದೆ. ಅಂಗವಿಕಲರಿಗೆ ಸುಲಭವಾಗಿ ಮತದಾನ ಮಾಡಲು ಗಾಲಿ ಕುರ್ಚಿ, ನೆರಳಿನ ವ್ಯವಸ್ಥೆ, ಕುಡಿಯುವ ನೀರು, ಅಂಧರಿಗೆ ಬ್ರೈಲ್‌ ಲಿಪಿಒಳಗೊಂಡ ವ್ಯವಸ್ಥೆ ಮಾಡಲಾಗುವುದು ಎಂದು ಆಯೋಗದ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.