ADVERTISEMENT

ಬೆಳ್ಳಂದೂರು ಕೆರೆ ಸಂರಕ್ಷಣೆ: ನಿರ್ಮಾಣ ಚಟುವಟಿಕೆಗೆ ಕಡಿವಾಣ ಹಾಕಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2018, 19:32 IST
Last Updated 22 ಜನವರಿ 2018, 19:32 IST
ಬೆಳ್ಳಂದೂರು ಕೆರೆ ಸಂರಕ್ಷಣೆ: ನಿರ್ಮಾಣ ಚಟುವಟಿಕೆಗೆ ಕಡಿವಾಣ ಹಾಕಿ
ಬೆಳ್ಳಂದೂರು ಕೆರೆ ಸಂರಕ್ಷಣೆ: ನಿರ್ಮಾಣ ಚಟುವಟಿಕೆಗೆ ಕಡಿವಾಣ ಹಾಕಿ   

ಬೆಂಗಳೂರು: ದಿನೇ ದಿನೇ ಶಿಥಿಲವಾಗುತ್ತಿರುವ ಬೆಳ್ಳಂದೂರು ಕೆರೆಯನ್ನು ಉಳಿಸಿಕೊಳ್ಳಬೇಕಾದರೆ ಕೋರಮಂಗಲ ಪ್ರದೇಶದಲ್ಲಿ ನಿರ್ಮಾಣ ಚಟುವಟಿಕೆಗೆ ನಿಯಂತ್ರಣ ಹೇರಬೇಕು ಎಂದು ವಿಜ್ಞಾನಿಗಳು ಸಲಹೆ ನೀಡಿದ್ದಾರೆ.

ಕಳೆದ ವಾರ ಕೆರೆಯಲ್ಲಿ ಕಾಣಿಸಿಕೊಂಡ ಬೆಂಕಿ ಸುಮಾರು 50 ಎಕರೆ ಪ್ರದೇಶವನ್ನು ಆಹುತಿ ಪಡೆದಿತ್ತು. ನಗರದ ಅತಿ ದೊಡ್ಡ ಕೆರೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಈ ಕೆರೆಯಲ್ಲಿ ಇದುವರೆಗೆ ಕಾಣಿಸಿಕೊಂಡ ಭಾರಿ ಪ್ರಮಾಣದ ಬೆಂಕಿ ಇದು.

ಈ ಕೆರೆಯ ಸಹಜ ಸ್ಥಿತಿಗೆ ತರುವ ಮೊದಲ ಹೆಜ್ಜೆಯಾಗಿ ಇದರ ಸುತ್ತಮುತ್ತಲೂ ಕಾಂಕ್ರೀಟ್‌ ಕಟ್ಟಡಗಳು ನಿರ್ಮಾಣವಾಗದಂತೆ ತಡೆಯಬೇಕು ಎಂದು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಇಂಧನ ಮತ್ತು ಜೌಗು ಪ್ರದೇಶ ಸಂಶೋಧನಾ ತಂಡ ಸಿದ್ಧಪಡಿಸಿದ ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ADVERTISEMENT

ಐವರು ತಜ್ಞರನ್ನು ಒಳಗೊಂಡ ಅಧ್ಯಯನ ತಂಡವು ಸಿದ್ಧಪಡಿಸಿರುವ ‘ಅಗರ ಮತ್ತು ಬೆಳ್ಳಂದೂರು ಜೌಗು ಪ್ರದೇಶಗಳಲ್ಲಿ ನಿಲ್ಲದ ಉಲ್ಲಂಘನೆಗಳು’ ಎಂಬ ವರದಿಯು ಈ ಜಲಮೂಲಗಳ ಸಂರಕ್ಷಣೆಗೆ ಅನೇಕ ಶಿಫಾರಸುಗಳನ್ನು ಮಾಡಿದೆ. ತಂಡದ ಸದಸ್ಯರು 2017ರ ಡಿಸೆಂಬರ್‌ 12ರಂದು ಕೆರೆಯ ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ರಾಜ್ಯ ಸರ್ಕಾರವೇ ಅನೇಕ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಈ ತಂಡದ ನೇತೃತ್ವ ವಹಿಸಿರುವ ವಿಜ್ಞಾನಿ ಟಿ.ವಿ.ರಾಮಚಂದ್ರ ಹೇಳಿದರು.

ಅಗಮ ಮತ್ತು ಬೆಳ್ಳಂದೂರು ಕೆರೆಗಳ ಸುತ್ತ ಕೈಗಾರಿಕೀಕರಣ ಹಾಗೂ ವಾಣಿಜ್ಯೀಕರಣವನ್ನು ತಡೆಯಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಕೋರಮಂಗಲ ಪ್ರದೇಶದಲ್ಲಿ ಅಭಿವೃದ್ಧಿ ಚಟುವಟಿಕೆಗೆ ಕಡಿವಾಣ ಹಾಕಬೇಕು ಎಂದು ಅವರು ಒತ್ತಾಯಿಸಿದರು.

ಬುದ್ಧಿಹೀನ ಅನುಮೋದನೆ: ಈ ಕೆರೆಗಳ ಜೌಗು ಪ್ರದೇಶಗಳಲ್ಲಿ ಪ್ರಸ್ತಾವಿತ ವಿಶೇಷ ಆರ್ಥಿಕ ವಲಯವನ್ನು ರಾಜ್ಯದ ಬೇರೆ ಪ್ರದೇಶಕ್ಕೆ ಸ್ಥಳಾಂತರಿಸಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

‘ಅಭಿವೃದ್ಧಿ ನಿಷೇಧ ವಲಯ’ ಎಂದು ಬಿಡಿಎ ಗುರುತು ಮಾಡಿರುವ ಜಾಗದಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಎಸ್‌ಇಜೆಡ್‌ ನಿರ್ಮಿಸುತ್ತದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ನೀರಿನ ಕೊರತೆ ಇದೆ. ಹಾಗಾಗಿ ದೊಡ್ಡ ಪ್ರಮಾಣದ ನಿರ್ಮಾಣ ಯೋಜನೆಗಳಿಗೆ ನಿರಾಕ್ಷೇಪಣಾ ಪತ್ರ ನೀಡುವುದನ್ನು ನಿಲ್ಲಿಸಬೇಕು. ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸಲು ಅವಕಾಶ ಮಾಡಿಕೊಟ್ಟ ಅಧಿಕಾರಿಗಳ ವಿರುದ್ಧವೂ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದರು.

‘ಕೆರೆಯನ್ನು ಸೇರುತ್ತಿರುವ ತ್ಯಾಜ್ಯ ನೀರನ್ನು ಸಂಸ್ಕರಿಸಲು ಯವುದೇ ಕೊಳಚೆ ನೀರು ಸಂಸ್ಕರಣಾ ಘಟಕಗಳಿಲ್ಲ. ಹಾಗಾಗಿ ಈ ಕೆರೆಯು ಕೊಳಚೆ ನೀರಿನಿಂದ ತುಂಬಿದೆ. ಜೌಗು ಪ್ರದೇಶದಲ್ಲಿ ಅಕ್ರಮ ಒತ್ತುವರಿ ಈಗಲೂ ಮುಂದುವರಿದಿದೆ. ಇದಕ್ಕೆ ಕಡಿವಾಣ ಹಾಕುವಲ್ಲಿ ಸರ್ಕಾರ ವಿಫಲವಾಗಿದೆ’ ಎಂದು ಆರೋಪಿಸಿದರು.

ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಕಟ್ಟುನಿಟ್ಟಿನ ಸೂಚನೆ ನೀಡಿದ ಬಳಿಕವೂ ಕೆರೆಗೆ ಪ್ಲಾಸ್ಟಿಕ್‌ನಂತಹ ಘನತ್ಯಾಜ್ಯ ಸೇರದಂತೆ ತಡೆಯಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

‘ಬೆಳ್ಳಂದೂರು ಕಣಿವೆಗೆ ಸರೋವರ ಮತ್ತು ಜೌಗು ಪ್ರದೇಶ ಸಂರಕ್ಷಣಾ ನಿಯಮಗಳಡಿ ವಿಶೇಷ ರಕ್ಷಣೆ ಒದಗಿಸಲಾಗಿದೆ. ಈ ಕೆರೆಯನ್ನು ಸಂರಕ್ಷಣೆ ಮಾಡುವಲ್ಲಿ ವಿಫಲವಾಗಿರುವ ಸರ್ಕಾರ 2006ರ ರಾಷ್ಟ್ರೀಯ ಪರಿಸರ ನೀತಿ ಹಾಗೂ 2002ರ ರಾಷ್ಟ್ರೀಯ ಜಲ ನೀತಿಯನ್ನು ಉಲ್ಲಂಘಿಸಿದೆ’ ಎಂದು ಆರೋಪ ಮಾಡಿದರು.

ನಿರ್ಬಂಧ ಏಕೆ?

* ರಾಜಕಾಲುವೆಯ ಗಾತ್ರ ಕಿರಿದು. ಹೆಚ್ಚು ಒತ್ತಡ ತಾಳಿಕೊಳ್ಳುವ ಸಾಮರ್ಥ್ಯ ಅದಕ್ಕಿಲ್ಲ

* ಅಗರ– ಬೆಳ್ಳಂದೂರು  ಜೌಗು ಪ್ರದೇಶ ಅಪಾಯದಲ್ಲಿದೆ

* ದ್ರವತ್ಯಾಜ್ಯದ ಸಂಸ್ಕರಣೆ ಸಮರ್ಪಕವಾಗಿ ಆಗುತ್ತಿಲ್ಲ

ಕೋರಮಂಗಲದಲ್ಲೇ ಏಕೆ?

ದಶಕಗಳಿಂದ ಇಲ್ಲಿನ ಪ್ರದೇಶ ಸಂಪೂರ್ಣ ವಾಣಿಜ್ಯ ಕೇಂದ್ರವಾಗಿ ಮಾರ್ಪಟ್ಟಿದೆ. ಇಲ್ಲಿನ ತ್ಯಾಜ್ಯ ನೀರು ಬೆಳ್ಳಂದೂರು ಕೆರೆಯನ್ನು ಸೇರುತ್ತಿದೆ.

ಬೆಳ್ಳಂದೂರು ಕೆರೆಯಲ್ಲಿ ಬೆಂಕಿ: ಎನ್‌ಜಿಟಿ ಆಕ್ರೋಶ...

ನವದೆಹಲಿ: ‘ಬೆಳ್ಳಂದೂರು ಕೆರೆಯಲ್ಲಿ 2015ರ ಫೆಬ್ರುವರಿಯಿಂದ ಇದುವರೆಗೆ ಮೂರು ಬಾರಿ ಬೆಂಕಿ ಕಾಣಿಸಿಕೊಂಡಿದ್ದರೂ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಂಡಿಲ್ಲ ಏಕೆ’ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ತೀವ್ರ ಆಕ್ರೋಶ ವ್ಯಕ್ತಪಡಿಸಿತು.

ಕೆರೆಯಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿರುವ ಕಾರಣ ಸೋಮವಾರ ಸ್ವಯಂಪ್ರೇರಿತ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಯು.ಡಿ.ಸಾಳ್ವಿ ನೇತೃತ್ವದ ಹಸಿರು ಪೀಠ, ಇದೇ 24ರಂದು ನಡೆಯಲಿರುವ ವಿಚಾರಣೆ ವೇಳೆ ಸಮರ್ಪಕ ವರದಿಯೊಂದಿಗೆ ಖುದ್ದಾಗಿ ಹಾಜರಾಗುವಂತೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸೂಚಿಸಿತು.

ಬೆಳ್ಳಂದೂರು ಕೆರೆಯಲ್ಲಿ 2015ರ ಫೆಬ್ರುವರಿ ವೇಳೆಗೆ ಮೊದಲ ಬಾರಿಗೆ ಬೆಂಕಿ ಕಾಣಿಸಿಕೊಂಡಿತ್ತು. 2017ರ ಫೆಬ್ರುವರಿ ಹಾಗೂ ಈಗ ಮತ್ತೆ ಬೆಂಕಿ ಕಾಣಿಸಿಕೊಂಡಿದೆ. ಕೆರೆಯ ನೀರಿನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಮೂಲ ಅರ್ಜಿದಾರ ಡಿ.ಕುಪೇಂದ್ರ ರೆಡ್ಡಿ ಪರ ವಕೀಲ ಪಿ.ರಾಮಪ್ರಸಾದ್‌ ದೂರಿದರು.

ಬೆಂಕಿ ಮತ್ತೆ ಕಾಣಿಸಿಕೊಳ್ಳದಂತೆ ಹಾಗೂ ಕೆರೆಯ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿಯವರೇ ಸ್ವತಃ ನಾಲ್ಕು ವರದಿಗಳನ್ನು ಹಸಿರು ಪೀಠಕ್ಕೆ ಸಲ್ಲಿಸಿದ್ದು, ಇದುವರೆಗೆ ಆ ವರದಿಯಲ್ಲಿನ ಅಂಶಗಳ ಕುರಿತು ಗಮನ ಹರಿಸಿಲ್ಲ. ಹಾಗಾಗಿ ಅವರೇ ಪೀಠದೆದುರು ಹಾಜರಾಗಿ ಹೇಳಿಕೆ ನೀಡಲಿ ಎಂದು ಅವರು ಮನವಿ ಮಾಡಿದರು.

ಕೆರೆಯ ಸುತ್ತ ಬೆಳೆದಿರುವ ಹುಲ್ಲಿನಿಂದಾಗಿ ಬೆಂಕಿ ಹರಡುತ್ತಿದೆ. ದುಷ್ಕರ್ಮಿಗಳು ಬೆಂಕಿ ಹಚ್ಚುತ್ತಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಸ್ವಲ್ಪ ಸಮಯಾವಕಾಶ ನೀಡಿದಲ್ಲಿ ಕಾರಣ ತಿಳಿದು ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರದ ಪರ ವಕೀಲ ದೇವರಾಜ್‌ ಅಶೋಕ್‌ ಪೀಠಕ್ಕೆ ವಿವರಿಸಿದರಾದರೂ, ನ್ಯಾಯಮೂರ್ತಿ ಸಾಳ್ವಿ ಅದನ್ನು ಮಾನ್ಯ ಮಾಡಲಿಲ್ಲ.

ದುಷ್ಕರ್ಮಿಗಳು ಬೆಂಕಿ ಇಡುತ್ತಾರೆ ಎಂಬ ಅಂಶ ಗಮನಕ್ಕೆ ಬಂದಿದ್ದರೆ, ಯಾರೂ ಅಕ್ರಮ ಪ್ರವೇಶ ಮಾಡದಂತೆ ಇಡೀ ಕೆರೆಗೆ ಬೇಲಿಯನ್ನು ನಿರ್ಮಿಸುವ ಕಾರ್ಯವನ್ನಾದರೂ ಮಾಡಬೇಕಿತ್ತು. ಸರ್ಕಾರಗಳು ಜನರ ಜೀವದ ಜೊತೆ ಚೆಲ್ಲಾಟ ಆಡಬಾರದು ಎಂದು ತಿಳಿಸಿದ ಪೀಠ, ಈ ಬಗ್ಗೆ ಯಾವುದೇ ರೀತಿಯ ಬೇಜವಾಬ್ದಾರಿ ಕಾರಣ ನೀಡಬಾರದು ಎಂದು ತಾಕೀತು ಮಾಡಿದರು.

ಕೆರೆಯ ಬೆಂಕಿ ನಂದಿಸುವ ನಿಟ್ಟಿನಲ್ಲಿ ಭಾರತೀಯ ಸೇನೆಯ ಸೈನಿಕರು ನಿರಂತರ ಕೆಲಸ ಮಾಡಿದ್ದಾರೆ. ನಾಗರಿಕರ ಆರೋಗ್ಯ ಮತ್ತು ಜೀವ ರಕ್ಷಣೆಗಾಗಿ ಸೇನೆಯ ಅಧಿಕಾರಿಗಳು ಗಮನ ಹರಿಸಿದರೂ ಸರ್ಕಾರ ಯಾವುದೇ ರೀತಿಯಲ್ಲಿ ಸ್ಪಂದಿಸಿಲ್ಲ ಎಂದು ನಮ್ಮ ಬೆಂಗಳೂರು ಫೌಂಡೇಷನ್‌ ಪರ ವಕೀಲ ಸಜ್ಜನ್‌ ಪೂವಯ್ಯ ದೂರಿದರು.

ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರಿಗೆ ವರದಿಯ ಸಮೇತ ವಿಚಾರಣೆಗೆ ಹಾಜರಾಗಿ ಸಮಜಾಯಿಷಿ ನೀಡುವಂತೆ ಸೂಚಿಸಿದ ಪೀಠವು ಇದೇ 24ಕ್ಕೆ ವಿಚಾರಣೆ ಮುಂದೂಡಿತು.

ಪೂರ್ವ ನಿಗದಿಯಂತೆ ಇದೇ 29ರಂದು ವಿಚಾರಣೆ ನಡೆಸಿದಲ್ಲಿ ಕೆರೆಯ ಬೆಂಕಿಗೆ ಕಾರಣ ತಿಳಿದು ವರದಿ ಸಲ್ಲಿಸಬಹುದಾಗಿದೆ ಎಂದು ಸರ್ಕಾರದ ಪರ ವಕೀಲರು ಕೋರಿದರಾದರೂ ಪೀಠ ಅದನ್ನು ಪುರಸ್ಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.