ADVERTISEMENT

ದಾಲ್ಮಿಯಾ ಜಂಕ್ಷನ್‌ ಸೇತುವೆ: 10 ದಿನದಲ್ಲಿ ಪೂರ್ಣ

ಎನ್.ನವೀನ್ ಕುಮಾರ್
Published 22 ಜನವರಿ 2018, 19:51 IST
Last Updated 22 ಜನವರಿ 2018, 19:51 IST
ದಾಲ್ಮಿಯಾ ಜಂಕ್ಷನ್‌ನಲ್ಲಿ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿ –ಪ್ರಜಾವಾಣಿ ಚಿತ್ರ/ ಚಂದ್ರಹಾಸ ಕೋಟೆಕಾರ್‌
ದಾಲ್ಮಿಯಾ ಜಂಕ್ಷನ್‌ನಲ್ಲಿ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿ –ಪ್ರಜಾವಾಣಿ ಚಿತ್ರ/ ಚಂದ್ರಹಾಸ ಕೋಟೆಕಾರ್‌   

ಬೆಂಗಳೂರು: ಎರಡೂವರೆ ವರ್ಷಗಳಿಂದ ಕುಂಟುತ್ತಾ ಸಾಗಿದ್ದ ಹೊರವರ್ತುಲ ರಸ್ತೆಯ ಜೆ.ಪಿ. ನಗರದ ದಾಲ್ಮಿಯಾ ಜಂಕ್ಷನ್‌ ಮೇಲ್ಸೇತುವೆಯ ಕಾಮಗಾರಿ ಮುಕ್ತಾಯದ ಹಂತ ತಲುಪಿದೆ.

ಮೈಸೂರು ರಸ್ತೆ ಜಂಕ್ಷನ್‌ನಿಂದ ಸಿಲ್ಕ್‌ಬೋರ್ಡ್‌ವರೆಗಿನ ಹೊರವರ್ತುಲ ರಸ್ತೆಯನ್ನು ಸಿಗ್ನಲ್‌ ಮುಕ್ತಗೊಳಿಸುವ ಯೋಜನೆಯನ್ನು ನಗರೋತ್ಥಾನ ಅನುದಾನದಡಿ ಕೈಗೊಳ್ಳಲಾಗಿದೆ. ಇದರ ಭಾಗವಾಗಿ ಈ ಸೇತುವೆಯನ್ನು ನಿರ್ಮಿಸಲಾಗುತ್ತಿದೆ. ಎಂ.ವೆಂಕಟರಾವ್‌ ಇನ್‌ಫ್ರಾ ಪ್ರಾಜೆಕ್ಟ್‌ ಕಂಪನಿ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿದೆ. 2015ರ ಸೆಪ್ಟೆಂಬರ್‌ 1ರಂದು ಕಾಮಗಾರಿಗೆ ಚಾಲನೆ ನೀಡಲಾಗಿತ್ತು. 19 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗಡುವು ವಿಧಿಸಲಾಗಿತ್ತು.‌

ಈ ಜಂಕ್ಷನ್‌ನಲ್ಲಿ ಕುಡಿಯುವ ನೀರು, ಒಳಚರಂಡಿ ಪೈಪ್‌ಲೈನ್‌ ಹಾಗೂ ಒಎಫ್‌ಸಿ ತೆರವುಗೊಳಿಸಬೇಕಿತ್ತು. 2017ರ ಆಗಸ್ಟ್‌ನಿಂದ ಅಕ್ಟೋಬರ್‌ವರೆಗೆ ನಿರಂತರವಾಗಿ ಮಳೆ ಸುರಿದಿದ್ದರಿಂದ ಕಾಮಗಾರಿ ನಡೆಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಗಡುವನ್ನು 2018ರ ಫೆಬ್ರುವರಿಗೆ ವಿಸ್ತರಿಸಲಾಗಿತ್ತು.

ADVERTISEMENT

ತ್ವರಿತಗತಿಯಲ್ಲಿ ಕೆಲಸಗಳು ನಡೆಯುತ್ತಿವೆ. ಫೆಬ್ರುವರಿ ಮೊದಲ ವಾರದಲ್ಲಿ ಮೇಲ್ಸೇತುವೆಯನ್ನು ಉದ್ಘಾಟಿಸಲು ಉದ್ದೇಶಿಸಲಾಗಿದೆ ಎಂದು ಬಿಬಿಎಂಪಿ ಕೇಂದ್ರ–ಯೋಜನೆ ವಿಭಾಗದ ಹೆಸರು ಹೇಳಲಿಚ್ಛಿಸದ ಎಂಜಿನಿಯರ್‌ ಒಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಸೇತುವೆಯು ದ್ವಿಮುಖ ಸಂಚಾರದ ನಾಲ್ಕು ಪಥಗಳನ್ನು ಹೊಂದಿದೆ. ಡೆಕ್‌ ಸ್ಲ್ಯಾಬ್‌, ತಡೆಗೋಡೆ ಹಾಗೂ ರ‍್ಯಾಂಪ್‌ಗಳನ್ನು ನಿರ್ಮಿಸಲಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ವಿದ್ಯುತ್‌ ದೀಪದ ಕಂಬಗಳನ್ನು ಅಳವಡಿಸಲಾಗುತ್ತಿದೆ. ಡಾಂಬರೀಕರಣ ಮಾಡಲು ಸಿದ್ಧತೆ ನಡೆದಿದೆ ಎಂದು ವಿವರಿಸಿದರು.

ಇಬ್ಬರು ಮೇಯರ್‌ಗಳಿಂದ ಪರಿಶೀಲನೆ: 2017ರ ಸೆಪ್ಟೆಂಬರ್‌ 5ರಂದು ಮೇಲ್ಸೇತುವೆ ಕಾಮಗಾರಿಯನ್ನು ಪರಿಶೀಲಿಸಿದ್ದ ಈ ಹಿಂದಿನ ಮೇಯರ್‌ ಜಿ.ಪದ್ಮಾವತಿ ಅವರು ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಮೂರು ತಿಂಗಳೊಳಗೆ ಕೆಲಸ ಪೂರ್ಣಗೊಳಿಸುವಂತೆ ಸೂಚಿಸಿದ್ದರು.

ಮೇಯರ್‌ ಆರ್‌.ಸಂಪತ್‌ ರಾಜ್‌ 2017ರ ಅಕ್ಟೋಬರ್‌ 23ರಂದು ಮೇಲ್ಸೇತುವೆಯ ಕಾಮಗಾರಿಯನ್ನು ಪರಿಶೀಲಿಸಿದ್ದರು. ಜನವರಿ ಒಳಗೆ ಸೇತುವೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗುತ್ತದೆ ಎಂದು ಹೇಳಿದ್ದರು.

‘ವಾಹನ ಓಡಿಸುವುದು ದುಸ್ಸಾಹಸವೇ ಸರಿ’: ಎರಡೂವರೆ ವರ್ಷಗಳಿಂದ ಕಾಮಗಾರಿ ನಡೆಯುತ್ತಲೇ ಇದೆ. ಸೇತುವೆಯ ಎರಡೂ ಬದಿಯಲ್ಲಿರುವ ಕಿರಿದಾದ ರಸ್ತೆಗಳಲ್ಲೇ ವಾಹನಗಳು ಸಂಚರಿಸಬೇಕಿದೆ. ದಟ್ಟಣೆ ಅವಧಿಯಲ್ಲಿ ಈ ಮಾರ್ಗದಲ್ಲಿ ವಾಹನ ಓಡಿಸುವುದು ದುಸ್ಸಾಹಸವೇ ಸರಿ ಎಂದು ಕಲ್ಯಾಣಿ ಡೆವಲಪರ್ಸ್‌ನ ಧನಂಜಯ್‌ ದೂರಿದರು.

ಈ ಭಾಗದಲ್ಲಿ ಕಲ್ಯಾಣಿ ಮ್ಯಾಗ್ನಂ ಟೆಕ್‌ ಪಾರ್ಕ್‌ ಇದೆ. ಅಲ್ಲಿ ಸುಮಾರು 12 ಕಂಪನಿಗಳು ಇದ್ದು, ಸಾವಿರಾರು ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಟೆಕ್‌ ಪಾರ್ಕ್‌ಗೆ ಹೋಗಬೇಕಾದರೆ ಈ ಜಂಕ್ಷನ್‌ ದಾಟಿಯೇ ಹೋಗಬೇಕು. ಇಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತವೆ. ಹೀಗಾಗಿ, ಈ ಜಂಕ್ಷನ್‌ನಲ್ಲಿ ವಾಹನ ದಟ್ಟಣೆ ಕಂಡುಬರುತ್ತದೆ. ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿದರೆ, ಈ ಭಾಗದ ಜನರಿಗೆ ಬಹಳ ಅನುಕೂಲವಾಗುತ್ತದೆ ಎಂದು ಹೇಳಿದರು.

ಸಾಲುಗಟ್ಟಿ ನಿಲ್ಲುವ ವಾಹನಗಳು
ಸೇತುವೆ ಕಾಮಗಾರಿ ಸಲುವಾಗಿ ಇಲ್ಲಿ ನಿರ್ಮಿಸಿರುವ ಸರ್ವಿಸ್‌ ರಸ್ತೆಗಳಲ್ಲಿ ಏಕಕಾಲದಲ್ಲಿ ಒಂದು ವಾಹನ ಮಾತ್ರ ಸಾಗುವಷ್ಟು ಸ್ಥಳಾವಕಾಶವಿದೆ. ಹಾಗಾಗಿ ಇಲ್ಲಿ ವಾಹನಗಳು ಆಮೆಗತಿಯಲ್ಲಿ ಸಂಚರಿಸುತ್ತವೆ. ಮೈಸೂರು ರಸ್ತೆ ಹಾಗೂ ಕನಕಪುರ ರಸ್ತೆ ಕಡೆಯಿಂದ ಬನ್ನೇರುಘಟ್ಟ ರಸ್ತೆ ಕಡೆಗೆ ಹೋಗುವ ವಾಹನಗಳು ಸಾರಕ್ಕಿ ಜಂಕ್ಷನ್‌ವರೆಗೂ ಸಾಲುಗಟ್ಟಿ ನಿಂತಿರುತ್ತವೆ. ಬನ್ನೇರುಘಟ್ಟ ರಸ್ತೆ ಕಡೆಯಿಂದ ಮೈಸೂರು ರಸ್ತೆ ಕಡೆಗೆ ಹೋಗುವ ವಾಹನಗಳು ಜೇಡಿಮರ ಜಂಕ್ಷನ್‌ವರೆಗೂ ಸಾಲುಗಟ್ಟಿ ನಿಂತಿರುತ್ತವೆ ಎಂದು ಸ್ಥಳೀಯ ವ್ಯಾಪಾರಿ ಕರುಣಾಕರ ಶೆಟ್ಟಿ ತಿಳಿಸಿದರು.

ಬೆಳಿಗ್ಗೆ 7ರಿಂದ 10 ಹಾಗೂ ಸಂಜೆ 5ರಿಂದ ರಾತ್ರಿ 9 ಗಂಟೆಯವರೆಗೆ ಈ ಮಾರ್ಗದಲ್ಲಿ ವಾಹನ ದಟ್ಟಣೆ ವಿಪರೀತ ಇರುತ್ತದೆ. ಈ ಜಂಕ್ಷನ್‌ ದಾಟಲು ಕನಿಷ್ಠ 15 ನಿಮಿಷ ಬೇಕು. ಹೀಗಾಗಿ, ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.

ದೂಳಿನ ಸಮಸ್ಯೆ
ಮೇಲ್ಸೇತುವೆ ಕಾಮಗಾರಿಯಿಂದಾಗಿ ಈ ಭಾಗದಲ್ಲಿ ದೂಳಿನ ಸಮಸ್ಯೆ ಹೆಚ್ಚಾಗಿದೆ. ಇದರ ಅಕ್ಕಪಕ್ಕದ ಮನೆ, ಅಂಗಡಿಗಳು ದೂಳುಮಯವಾಗಿವೆ. ಈ ಭಾಗದಲ್ಲಿ ಸ್ವಲ್ಪ ಹೊತ್ತು ನಿಂತರೆ ಸಾಕು, ದೂಳಿನ ಮಜ್ಜನವಾಗುತ್ತದೆ ಎಂದು ಜೆ.ಪಿ.ನಗರ 2ನೇ ಹಂತದ ನಿವಾಸಿ ಎಲ್‌.ಎಸ್‌.ರಾಜು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.