ADVERTISEMENT

‘20 ದಿನಗಳಲ್ಲಿ ₹ 30 ಕೋಟಿ ವಹಿವಾಟು’

​ಪ್ರಜಾವಾಣಿ ವಾರ್ತೆ
Published 23 ಜನವರಿ 2018, 19:54 IST
Last Updated 23 ಜನವರಿ 2018, 19:54 IST

ಬೆಂಗಳೂರು: ‘ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಖಾದಿ ಉತ್ಸವಕ್ಕೆ ಉತ್ತಮ ಜನಸ್ಪಂದನೆ ವ್ಯಕ್ತವಾಗಿದೆ. ಜ.2ರಿಂದ ಇಲ್ಲಿಯವರೆಗೆ ₹30 ಕೋಟಿ ವಹಿವಾಟು ನಡೆದಿದೆ’ ಎಂದು ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷ ಯಲುವಹಳ್ಳಿ ಎನ್.ರಮೇಶ್ ತಿಳಿಸಿದರು.

ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಒಂದು ಲಕ್ಷ ಮಂದಿ ಮೇಳಕ್ಕೆ ಭೇಟಿ ನೀಡಿದ್ದರು. ಆಗ ಒಟ್ಟು ₹30 ಕೋಟಿ ಆದಾಯ ಬಂದಿತ್ತು. ಈ ಬಾರಿ 20 ದಿನಕ್ಕೆ ಅಷ್ಟು ಆದಾಯ ಬಂದಿದೆ. ಉಳಿದ ಎಂಟು ದಿನಗಳಲ್ಲಿ 20 ಸಾವಿರಕ್ಕಿಂತ ಹೆಚ್ಚು ಜನ ಭೇಟಿ ನೀಡುವ ನಿರೀಕ್ಷೆ ಇದೆ ಎಂದು ಹೇಳಿದರು.

ಉತ್ಸವದಲ್ಲಿ ರಾಜ್ಯದವರಲ್ಲದೇ, ಹೊರ ರಾಜ್ಯಗಳ ಗುಡಿ ಕೈಗಾರಿಕೆಗಳು ಹಾಗೂ ಖಾದಿ ಮಂಡಳಿಗಳ ಸದಸ್ಯರು ಸೇರಿ 600 ಜನ ವ್ಯಾಪಾರ ಮಾಡುತ್ತಿದ್ದಾರೆ. ಮಂಡಳಿಯಿಂದ ಪ್ರೋತ್ಸಾಹ ಪಡೆದ ಮಳಿಗೆಗಳಲ್ಲಿ ಶೇ 35ರಷ್ಟು, ಉಳಿದ ರಾಜ್ಯದ ಖಾದಿ ಮಳಿಗೆಗಳಲ್ಲಿ ಶೇ 20ರಷ್ಟು ಹಾಗೂ ಹೊರ ರಾಜ್ಯಗಳ ಮಳಿಗೆಗಳಲ್ಲಿ ಶೇ 15ರಷ್ಟು ರಿಯಾಯಿತಿ ಇದೆ.

ADVERTISEMENT

ಚಿಕ್ಕಬಳ್ಳಾಪುರದಲ್ಲಿ ಮುಂದಿನ ಉತ್ಸವ: ಫೆಬ್ರುವರಿ 2ರಿಂದ 17ರವರೆಗೆ ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾ ಮಟ್ಟದ ಖಾದಿ ಉತ್ಸವ ನಡೆಯಲಿದೆ. 15 ದಿನಗಳು ನಡೆಯುವ ಉತ್ಸವದಲ್ಲಿ ಫ್ಯಾಷನ್ ಷೊ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿವೆ ಎಂದು ಅವರು ತಿಳಿಸಿದರು.

ನಮ್ಮ ಖಾದಿ: ‘ರಾಜ್ಯದಲ್ಲಿ ತಯಾರಾಗುವ ಖಾದಿ ಉತ್ಪನ್ನಗಳಿಗೆ ‘ನಮ್ಮ ಖಾದಿ’ ಎಂದು ಬ್ರ್ಯಾಂಡಿಂಗ್‌ ಮಾಡುವ ಬಗ್ಗೆ ಚಿಂತನೆ ನಡೆಯುತ್ತಿದೆ. 3 ತಿಂಗಳಲ್ಲಿ ಆ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ. ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳ ಕಾಯಂ ಮಾರಾಟಕ್ಕಾಗಿ ಖಾದಿ ಪ್ಲಾಜಾ ವಿಶೇಷ ಮಾರಾಟ ಮಳಿಗೆ ಪ್ರಾರಂಭಿಸುವ ಕೆಲಸ ಭರದಿಂದ ಸಾಗಿದೆ. ಎರಡು–ಮೂರು ಕಡೆ ಜಾಗವನ್ನು ನೋಡಿದ್ದೇವೆ. ಶೀಘ್ರ ಕಟ್ಟಡ ಕೆಲಸ ಪ್ರಾರಂಭಿಸುತ್ತೇವೆ’ ಎಂದು ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯವಿಭವ ಸ್ವಾಮಿ ತಿಳಿಸಿದರು.

ಪ್ಲಾಸ್ಟಿಕ್‌ ಬಳಕೆ ನಿಷೇಧ: ಖಾದಿ ಮೇಳದಲ್ಲಿ ಪ್ಲಾಸ್ಟಿಕ್‌ ಬಳಕೆ ಹೆಚ್ಚಾಗಿರುವುದು ಕಂಡುಬಂದಿದೆ. ಬುಧವಾರದಿಂದಲೇ ಅದನ್ನು ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳುತ್ತೇವೆ. ಮೇಳಕ್ಕೆ ಬರುವವರು ಕೈಚೀಲವನ್ನು ಹಿಡಿದು ತಂದರೆ, ನಮ್ಮ ಕೆಲಸಕ್ಕೆ ಸಹಾಯವಾಗುತ್ತದೆ ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.