ADVERTISEMENT

276 ವಿದ್ಯಾರ್ಥಿಗಳಿಗೆ ಪದವಿ ‍ಪ್ರದಾನ

​ಪ್ರಜಾವಾಣಿ ವಾರ್ತೆ
Published 23 ಜನವರಿ 2018, 20:12 IST
Last Updated 23 ಜನವರಿ 2018, 20:12 IST
ಸಂಭ್ರಮದಲ್ಲಿ ಪದವೀಧರರು –ಪ್ರಜಾವಾಣಿ ಚಿತ್ರ
ಸಂಭ್ರಮದಲ್ಲಿ ಪದವೀಧರರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ರಾಮಯ್ಯ ಇನ್‌ಸ್ಟಿಟ್ಯೂ­ಟ್ ಆಫ್‌ ಮ್ಯಾನೇಜ್‌ಮೆಂಟ್‌ನಲ್ಲಿ (ಆರ್‌ಐಎಂ) ಮಂಗಳವಾರ ನಡೆದ 21ನೇ ಘಟಿಕೋತ್ಸವದಲ್ಲಿ 276 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಎಐಸಿಟಿಎ ಸ್ನಾತಕೋತ್ತರ ಡಿಪ್ಲೊಮಾದಲ್ಲಿ ಒಬ್ಬ ವಿದ್ಯಾರ್ಥಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಎಂಬಿಎನಲ್ಲಿ ಒಬ್ಬ ವಿದ್ಯಾರ್ಥಿ ಚಿನ್ನದ ಪದಕ ಮುಡಿಗೇರಿಸಿಕೊಂಡರು. ಎಐಸಿಟಿಎಯ 7 ವಿದ್ಯಾರ್ಥಿಗಳು ಹಾಗೂ ಮೈಸೂರು ವಿಶ್ವವಿದ್ಯಾಲಯದ 6 ವಿದ್ಯಾರ್ಥಿಗಳು ಬೆಳ್ಳಿ ‍ಪದಕ ಪಡೆದರು.

ಎಂಬಿಎನಲ್ಲಿ ಚಿನ್ನದ ಪದಕ ಪಡೆದ ಮರಿಯಾ ಕೆ. ಸುಶ್ಮಿತಾ, ‘ಚಿನ್ನದ ಪದಕ ಪಡೆಯುವ ನಿರೀಕ್ಷೆ ಖಂಡಿತಾ ಇರಲಿಲ್ಲ. ಸಹಜವಾಗಿಯೇ ಖುಷಿಯಾಗಿದೆ. ಸದ್ಯ ಗೋಲ್ಡ್‌ಮನ್‌ಸ್ಯಾಚ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಇದೇ ಕ್ಷೇತ್ರದಲ್ಲಿ ಮುಂದುವರಿಯುವ ಬಯಕೆ ಇದೆ’ ಎಂದರು.

ADVERTISEMENT

ಬೆಳ್ಳಿ ಪದಕ ಪಡೆದ ವಾರಾಣಸಿಯ ಅನುಖ್ಯ, ‘ಚಿಲ್ಲರೆ ಮಾರುಕಟ್ಟೆ ನನ್ನ ಆಸಕ್ತಿಯ ಕ್ಷೇತ್ರ. ಐದು ವರ್ಷಗಳಲ್ಲಿ ಮ್ಯಾನೇಜರ್‌ ಆಗಬೇಕು ಎಂಬ ಗುರಿ ಹೊಂದಿದ್ದೇನೆ’ ಎಂದರು.

ಬೆಳ್ಳಿ ಪದಕ ಪಡೆದ ಕೇರಳದ ಆಲಿಯಾ, ‘ವಿಷಯವನ್ನು ಚೆನ್ನಾಗಿ ಗ್ರಹಿಸುತ್ತಿದ್ದೆ. ಬೇರೆಯವರಿಗೆ ಪಾಠ ಹೇಳುತ್ತಿದ್ದೆ. ಹೀಗಾಗಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವುದು ಸುಲಭವಾಯಿತು. ಕರಕುಶಲ ಕಲೆಯಲ್ಲಿ ನನಗೆ ಆಸಕ್ತಿ ಹೆಚ್ಚು’ ಎಂದರು.

ಬಿಗ್‌ ಬ್ಯಾಸ್ಕೆಟ್‌ ಕಂಪನಿಯ ಸಹ ಸಂಸ್ಥಾಪಕ ಹಾಗೂ ಸಿಇಒ ವಿ.ಎಸ್‌.ಸುಧಾಕರ್‌, ‘ಜನರನ್ನು ಗೌರವ ಹಾಗೂ ಪ್ರೀತಿಯಿಂದ ಕಾಣುವ ಗುಣ ಬೆಳೆಸಿಕೊಳ್ಳಿ. ಬೇರೆಯವರು ನಿಮ್ಮ ಬಗ್ಗೆ ಗೌರವ ಹೊಂದುವಂತೆ ನಡೆದುಕೊಳ್ಳಿ. ನೀವು ಮಾಡುವ ಕೆಲಸದ ಬಗ್ಗೆ ನಿಮಗೆ ಖುಷಿ ಇದ್ದರೆ, ಯಶಸ್ಸು ಕಟ್ಟಿಟ್ಟ ಬುತ್ತಿ’ ಎಂದು  ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಗೋಕುಲ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಎಂ.ಆರ್‌ ಜಯರಾಮ್, ‘ವೃತ್ತಿಯಲ್ಲಿ ಯಶಸ್ಸು ಗಳಿಸಲು ಹೊಸತನ್ನು ಆಲೋಚಿಸಬೇಕು. ಸಮಚಿತ್ತದಿಂದ ಇರುವುದು ಬಹಳ ಮುಖ್ಯ. ಯಾವಾಗಲೂ ಚೆನ್ನಾಗಿ ಯೋಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಿ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.