ADVERTISEMENT

ನೇಪಾಳ ಗಡಿಯಲ್ಲಿ ಸಿಕ್ಕ ಕಳ್ಳ ದಂಪತಿ!

*ಉದ್ಯಮಿ ಮನೆಯಲ್ಲಿ ನಡೆದಿದ್ದ ಕಳ್ಳತನ * ₹ 4 ಕೆ.ಜಿ ಚಿನ್ನ ಹೊತ್ತೊಯ್ದಿದ್ದ ಆರೋಪಿಗಳು

​ಪ್ರಜಾವಾಣಿ ವಾರ್ತೆ
Published 24 ಜನವರಿ 2018, 20:13 IST
Last Updated 24 ಜನವರಿ 2018, 20:13 IST
ಮೀನಾಶಾಹಿ ಹಾಗೂ ಭೀಮ್‌
ಮೀನಾಶಾಹಿ ಹಾಗೂ ಭೀಮ್‌   

ಬೆಂಗಳೂರು: ಎಚ್‌ಬಿಆರ್‌ ಲೇಔಟ್‌ನ ಮನೆಯಲ್ಲಿ ಕಳ್ಳತನ ಮಾಡಿದ್ದ ದಂಪತಿಯನ್ನು ನೇಪಾಳ ಗಡಿಯಲ್ಲಿ ಬಂಧಿಸಿರುವ ಬಾಣಸವಾಡಿ ಪೊಲೀಸರು, ₹ 1 ಕೋಟಿ ಮೌಲ್ಯದ ಆಭರಣ ಜಪ್ತಿ ಮಾಡಿದ್ದಾರೆ.

‘ರಿಯಲ್ ಎಸ್ಟೇಟ್ ಉದ್ಯಮಿ ಕೆ.ನಾಗರಾಜ್ ಅವರ ಮನೆಯಲ್ಲಿ 2017ರ ಡಿ.8ರಂದು ಕಳ್ಳತನ ನಡೆದಿತ್ತು. ಈ ಸಂಬಂಧ ನೇಪಾಳದ ಭೀಮ್ ಬಹದ್ದೂರ್ ಶಾಹಿ (46) ಹಾಗೂ ಆತನ ಪತ್ನಿ ಮೀನಾಶಾಹಿ (45) ಎಂಬುವರನ್ನು ಬಂಧಿಸಿದ್ದೇವೆ. ಇನ್ನೊಬ್ಬ ಆರೋಪಿ ಅಪಿಲ್ ಶಾಹಿ ನೇಪಾಳ ಪೊಲೀಸರ ವಶದಲ್ಲಿದ್ದು, ತಲೆಮರೆಸಿಕೊಂಡಿರುವ ಧೀರ್ ಶಾಹಿ ಹಾಗೂ ಧೀರಜ್ ಶಾಹಿಯ ಬಂಧನಕ್ಕೆ ಬಲೆ ಬೀಸಿದ್ದೇವೆ’ ಎಂದು ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್ ತಿಳಿಸಿದರು.

4 ಕೆ.ಜಿ ಚಿನ್ನ ಹೊತ್ತೊಯ್ದರು: ನಾಗರಾಜ್ ಅವರ ಮನೆಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದ ಭೀಮ್, ಪತ್ನಿ ಜತೆ ಮನೆ ಆವರಣದ ಕೊಠಡಿಯಲ್ಲೇ ನೆಲೆಸಿದ್ದ. ಕುಟುಂಬ ಸಮೇತ ಡಿ.8ರಂದು ತಮಿಳುನಾಡಿಗೆ ಪ್ರವಾಸ ಹೊರಟ ನಾಗರಾಜ್, ಮನೆ ನೋಡಿಕೊಳ್ಳವಂತೆ ದಂಪತಿಗೆ ಹೇಳಿ ಹೋಗಿದ್ದರು.

ADVERTISEMENT

ಇದೇ ಸಮಯಕ್ಕಾಗಿ ಕಾಯುತ್ತಿದ್ದ ದಂಪತಿ, ನಗ–ನಾಣ್ಯ ದೋಚಿಕೊಂಡು ನೇಪಾಳಕ್ಕೆ ತೆರಳಲು ನಿರ್ಧರಿಸಿದ್ದರು. ನಗರದ ವಿವಿಧೆಡೆ ಸೆಕ್ಯುರಿಟಿ ಗಾರ್ಡ್‌ಗಳಾಗಿದ್ದ ಅಪಿಲ್, ಧೀರಜ್ ಹಾಗೂ ಧೀರ್‌ ಅವರನ್ನು ಮಧ್ಯಾಹ್ನವೇ ಮನೆ ಹತ್ತಿರ ಕರೆಸಿಕೊಂಡು, ತಮ್ಮ ಸಂಚಿನ ಬಗ್ಗೆ ವಿವರಿಸಿದ್ದರು. ಅವರು ಒಪ್ಪಿಕೊಂಡ ಬಳಿಕ ರಾತ್ರಿವರೆಗೂ ತಮ್ಮ ಕೊಠಡಿಯಲ್ಲೇ ಪಾರ್ಟಿ ಮಾಡಿದ್ದರು.

ರಾತ್ರಿ 1 ಗಂಟೆ ಸುಮಾರಿಗೆ ಬಾಲ್ಕನಿಗೆ ತೆರಳಿದ ಆರೋಪಿಗಳು, ರಾಡ್‌ನಿಂದ ಬಾಗಿಲನ್ನು ಮೀಟಿ ಒಳನುಗ್ಗಿದ್ದರು. ಬಳಿಕ ಅಲ್ಮೆರಾ ಮುರಿದು 4 ಕೆ.ಜಿಯ (₹ 1.8 ಕೋಟಿ ಮೌಲ್ಯ) ಆಭರಣ ಹಾಗೂ ₹ 5.7 ಲಕ್ಷ ನಗದು ದೋಚಿಕೊಂಡು ಕೊಠಡಿಗೆ ಮರಳಿದ್ದರು. ಕದ್ದ ಮಾಲನ್ನು ಅಲ್ಲೇ ಹಂಚಿಕೊಂಡು ರಾತ್ರಿಯೇ ಕೊಠಡಿ ಖಾಲಿ ಮಾಡಿದ್ದರು.

ನಾಗರಾಜ್ ಅವರ ಅಳಿಯ ಚೈತನ್ಯ ಪೈಮಾಗಂ ಅವರು ಡಿ.10ರ ಸಂಜೆ ಮನೆ ಹತ್ತಿರ ಹೋದಾಗ ಕೃತ್ಯ ಬೆಳಕಿಗೆ ಬಂದಿತ್ತು. ಕೂಡಲೇ ಮಾವನಿಗೆ ವಿಷಯ ತಿಳಿಸಿ, ಅವರ ಸೂಚನೆಯಂತೆ ಬಾಣಸವಾಡಿ ಠಾಣೆಗೆ ದೂರು ಕೊಟ್ಟಿದ್ದರು.

ಆರೋಪಿಗಳು ರೈಲಿನಲ್ಲಿ ದೆಹಲಿಗೆ ತೆರಳಿ, ಅಲ್ಲಿಂದ ಟಿ.ಟಿ ವಾಹನದಲ್ಲಿ ಉತ್ತರಾಖಂಡದ ಬನ್‌ಬಾಸಾ (ಭಾರತ–ನೇಪಾಳ ಗಡಿ) ತಲುಪಿದ್ದರು. ಕೆಲಸಕ್ಕಿದ್ದ ನೇಪಾಳದ ದಂಪತಿ ಸೇರಿ ಐದು ಮಂದಿ ಕೃತ್ಯ ಎಸಗಿರುವುದು ಸಿ.ಸಿ ಟಿ.ವಿ ಕ್ಯಾಮೆರಾ ಪರಿಶೀಲಿಸಿದಾಗ ಗೊತ್ತಾಗಿತ್ತು. ಹೀಗಾಗಿ, ಬಾಣಸವಾಡಿ ಪೊಲೀಸರ ತಂಡ ಆರೋಪಿಗಳನ್ನು ಹುಡುಕಿಕೊಂಡು ನೇಪಾಳಕ್ಕೆ ತೆರಳಿತ್ತು.

ಆದರೆ, ಮಾರ್ಗಮಧ್ಯೆ ಉಪಾಯ ಬದಲಿಸಿದ್ದ ದಂಪತಿ, ತಾವು ಬನ್‌ಬಾಸಾದಲ್ಲೇ ಉಳಿದುಕೊಂಡು ಉಳಿದ ಮೂವರನ್ನು ಮಾತ್ರ ನೇಪಾಳಕ್ಕೆ ಕಳುಹಿಸಿದ್ದರು. ಕೈಲಾಲಿ ಜಿಲ್ಲೆಯ ಸುಕ್ಕಡ್ ಠಾಣೆ ಪೊಲೀಸರ ನೆರವಿನಿಂದ 12 ದಿನಗಳ ಬಳಿಕ ಅಪಿಲ್‌ನನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದ ಬಾಣಸವಾಡಿ ಪೊಲೀಸರು, ಆತನ ಬಳಿ 94 ಗ್ರಾಂನ ಚಿನ್ನದ ಸರ ಹಾಗೂ ₹ 29 ಸಾವಿರವನ್ನಷ್ಟೇ ಜಪ್ತಿ ಮಾಡಿದ್ದರು.

ಮೊಬೈಲ್‌ನಿಂದ ಸಿಕ್ಕಿಬಿದ್ದ ದಂಪತಿ: ಫೋನ್ ಬಳಸಿದರೆ ಪೊಲೀಸರಿಗೆ ಸಿಕ್ಕಿಬೀಳಬಹುದೆಂದು ಸಿಮ್‌ ಕಾರ್ಡ್ ಕಿತ್ತೆಸೆದಿದ್ದ ಭೀಮ್, 10 ದಿನಗಳ ಬಳಿಕ ಮೊಬೈಲ್‌ಗೆ ಹೊಸ ಸಿಮ್‌ ಕಾರ್ಡ್ ಹಾಕಿದ್ದ. ನಾಗರಾಜ್ ಅವರೇ ಆತನಿಗೆ ಮೊಬೈಲ್ ಕೊಡಿಸಿದ್ದರಿಂದ ಅದರ ಐಎಂಇಐ ಸಂಖ್ಯೆ ಪೊಲೀಸರಿಗೆ ಸಿಕ್ಕಿತ್ತು. ಅದರ ಜಾಡು ಹಿಡಿದು ದಂಪತಿಯನ್ನು ನೇಪಾಳದ ಗಡಿಯಲ್ಲೇ ವಶಕ್ಕೆ ಪಡೆದುಕೊಂಡಿದ್ದಾರೆ.

ಮುಂಜಾಗ್ರತೆ ವಹಿಸಿ
‘ಸಾರ್ವಜನಿಕರು ತಮ್ಮ ಮನೆ ಅಥವಾ ಕಚೇರಿಗಳಿಗೆ ಸೆಕ್ಯುರಿಟಿ ಗಾರ್ಡ್‌ಗಳನ್ನು ನೇಮಿಸಿಕೊಳ್ಳುವಾಗ ಎಚ್ಚರ ವಹಿಸಬೇಕು. ಆಂತರಿಕ ಭದ್ರತಾ ವಿಭಾಗದಿಂದ (ಐಎಸ್‌ಡಿ) ಪರವಾನಗಿ ಪಡೆದಿರುವ ಭದ್ರತಾ ಏಜೆನ್ಸಿಗಳ ಮೂಲಕವೇ ಸೆಕ್ಯುರಿಟಿ ಗಾರ್ಡ್‌ಗಳನ್ನು ನಿಯೋಜಿಸಿಕೊಳ್ಳಬೇಕು. ಸಿಬ್ಬಂದಿಯ ಹೆಸರು, ವಿಳಾಸ, ಮೊಬೈಲ್ ಸಂಖ್ಯೆಯನ್ನು ಪಡೆದುಕೊಳ್ಳುವುದು ಕಡ್ಡಾಯ’ ಎಂದು ಕಮಿಷನರ್ ಹೇಳಿದರು.

*
ಧೀರ್ ಹಾಗೂ ಧೀರಜ್ ಬಳಿ ಇನ್ನೂ 2 ಕೆ.ಜಿ ಚಿನ್ನವಿದೆ. ಅವರ ಪತ್ತೆಗೆ ನೇಪಾಳ ಪೊಲೀಸರ ನೆರವು ಕೋರಿದ್ದೇವೆ.
–ಬಾಣಸವಾಡಿ ಪೊಲೀಸರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.