ADVERTISEMENT

ಸಂಚಾರಿ ಇಂದಿರಾ ಕ್ಯಾಂಟೀನ್‌ಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2018, 20:10 IST
Last Updated 26 ಜನವರಿ 2018, 20:10 IST
ವಿಧಾನಸೌಧದ ಆವರಣದಲ್ಲಿ ಶುಕ್ರವಾರ ಉದ್ಘಾಟನೆಗೊಂಡ ಕ್ಯಾಂಟೀನ್‌ನಲ್ಲಿ ಊಟ ಪಡೆದ ಸಾರ್ವಜನಿಕರು -ಪ್ರಜಾವಾಣಿ ಚಿತ್ರ
ವಿಧಾನಸೌಧದ ಆವರಣದಲ್ಲಿ ಶುಕ್ರವಾರ ಉದ್ಘಾಟನೆಗೊಂಡ ಕ್ಯಾಂಟೀನ್‌ನಲ್ಲಿ ಊಟ ಪಡೆದ ಸಾರ್ವಜನಿಕರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ನಾಗರಿಕರಿಗೆ ಕೈಗೆಟಕುವ ದರದಲ್ಲಿ ಆಹಾರ ಪೂರೈಸುವ ಸಂಚಾರಿ ಇಂದಿರಾ ಕ್ಯಾಂಟೀನ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಚಾಲನೆ ನೀಡಿದರು. ಸಂಚಾರಿ ಕ್ಯಾಂಟೀನ್‌ಗಳು ನಗರದ 24 ವಾರ್ಡ್‌ಗಳಲ್ಲಿ ಆಹಾರ ಪೂರೈಸಲಿವೆ.

ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟೀನ್‌ಗೆ 2017ರ ಆಗಸ್ಟ್‌ 16ರಂದು ಚಾಲನೆ ನೀಡಲಾಗಿತ್ತು. ಮೊದಲ ಹಂತದಲ್ಲಿ 101 ವಾರ್ಡ್‌ಗಳಲ್ಲಿ ಕ್ಯಾಂಟೀನ್‌ಗಳು ಕಾರ್ಯಾರಂಭ ಮಾಡಿದ್ದವು. ಎರಡನೇ ಹಂತದ 50 ಕ್ಯಾಂಟೀನ್‌ಗಳು ಅಕ್ಟೋಬರ್‌ 2ರಿಂದ ಆರಂಭವಾಗಿದ್ದವು. ಉಳಿದ 24 ವಾರ್ಡ್‌ಗಳಲ್ಲಿ ಕಟ್ಟಡ ನಿರ್ಮಿಸಲು ಜಾಗ ಲಭ್ಯವಾಗದ ಕಾರಣ, ವಾಹನಗಳ ಮೂಲಕ ಆಹಾರ ಪೂರೈಸಲು ನಿರ್ಧರಿಸಲಾಗಿತ್ತು.

ಫೋರ್ಸ್‌ ಕಂಪನಿಯ 24 ಟೆಂಪೊ ಟ್ರಾವೆಲರ್‌ಗಳನ್ನು (ಟಿ.ಟಿ) ತಲಾ ₹8.50 ಲಕ್ಷ ಮೊತ್ತಕ್ಕೆ ಖರೀದಿಸಲಾಗಿದೆ. ಅವುಗಳ ಒಳ, ಹೊರ ವಿನ್ಯಾಸ ಹಾಗೂ ವಾಹನ ಪರಿವರ್ತನಾ ಕಾರ್ಯಕ್ಕೆ ತಲಾ ₹5.50 ಲಕ್ಷ ವೆಚ್ಚ ಮಾಡಲಾಗಿದೆ. ಈ ವಾಹನದಲ್ಲಿ ನಾಲ್ಕು ಸಿ.ಸಿ.ಟಿ.ವಿ ಕ್ಯಾಮೆರಾಗಳು ಮತ್ತು ಜಿಪಿಎಸ್‌ ಅಳವಡಿಸಲಾಗಿದೆ.

ADVERTISEMENT

ಇವುಗಳನ್ನು ಕೇಂದ್ರೀಕೃತ ನಿಯಂತ್ರಣ ಕೊಠಡಿಯಿಂದ ನಿಯಂತ್ರಿಸಲಾಗುತ್ತದೆ. ಕಿಡಿಗೇಡಿಗಳು ವಾಹನಗಳನ್ನು ಹಾಳು ಮಾಡದಂತೆ ತಡೆಯುವ ಹಾಗೂ ಗ್ರಾಹಕರ ಸುರಕ್ಷತೆ ಕಾಪಾಡುವ ದೃಷ್ಟಿಯಿಂದ ಪ್ರತಿ ಸಂಚಾರಿ ಕ್ಯಾಂಟೀನ್‌ಗೆ ಸೇನೆಯ ನಿವೃತ್ತ ಸಿಬ್ಬಂದಿಯ ಭದ್ರತೆ ಒದಗಿಸಲಾಗಿದೆ.

ಇದರಲ್ಲಿ ಪ್ರತಿದಿನ ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟವನ್ನು ತಲಾ 500 ಮಂದಿಗೆ ವಿತರಿಸಲಾಗುತ್ತದೆ. ತಿಂಗಳಿಗೆ 10 ಲಕ್ಷ ಮಂದಿ ಈ ಸೌಲಭ್ಯ ಪಡೆಯಲಿದ್ದಾರೆ.

ಬೆಳಗಿನ ತಿಂಡಿಗೆ ₹5 ಹಾಗೂ ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ತಲಾ ₹10 ದರವನ್ನು ನಿಗದಿಪಡಿಸಲಾಗಿದೆ.

ಇವುಗಳನ್ನು ವಾರ್ಡ್‌ಗಳ ನಿರ್ದಿಷ್ಟ ಜಾಗದಲ್ಲಿ ನಿಲ್ಲಿಸಿ ಆಹಾರ ವಿತರಿಸಲಾಗುತ್ತದೆ. ಕೂಪನ್‌ ಕೊಡುವವರು, ಇಬ್ಬರು ಆಹಾರ ವಿತರಿಸುವವರು, ಅಟೆಂಡರ್‌ ಹಾಗೂ ಮಾರ್ಷಲ್‌ ಈ ವಾಹನಗಳಲ್ಲಿ ಇರುತ್ತಾರೆ. ಕೇಂದ್ರೀಕೃತ ಅಡುಗೆ ಮನೆಗಳಿಂದ ಆಹಾರವನ್ನು ಪೂರೈಸಲಾಗುತ್ತದೆ. ಈಗಾಗಲೇ 20 ಅಡುಗೆ ಮನೆಗಳನ್ನು ನಿರ್ಮಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

ಲೋಕಾಯುಕ್ತದ 121 ಅಧಿಕಾರಿಗಳು ಮೂರು ದಿನ ಇಂದಿರಾ ಕ್ಯಾಂಟೀನ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡಿದ್ದಾರೆ. ಕ್ಯಾಂಟೀನ್‌ಗಳಲ್ಲಿರುವ ನ್ಯೂನತೆಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಕಾಲೇಜುಗಳಲ್ಲೂ ಕ್ಯಾಂಟೀನ್‌ ಸ್ಥಾಪಿಸಿ
‘ನಗರದ 198 ವಾರ್ಡ್‌ಗಳಿಗೆ ಇಂದಿರಾ ಕ್ಯಾಂಟೀನ್‌ ಸೀಮಿತವಾಗಬಾರದು. ಬಸ್‌ ನಿಲ್ದಾಣ, ರೈಲು ನಿಲ್ದಾಣ, ಆಸ್ಪತ್ರೆ, ಕಾಲೇಜುಗಳು ಹಾಗೂ ಜನಸಂದಣಿ ಇರುವ ಸ್ಥಳಗಳಲ್ಲಿ ಕ್ಯಾಂಟೀನ್‌ ಸ್ಥಾಪಿಸಬೇಕು. ಇದಕ್ಕೆ ಅನುದಾನ ನೀಡಲು ಸರ್ಕಾರ ಸಿದ್ಧವಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳು ತಿಂಡಿ ತಿನ್ನದೆ ಕಾಲೇಜಿಗೆ ಬಂದಿರುತ್ತಾರೆ, ಅವರಿಗೆ ಬೆಳಗಿನ ತಿಂಡಿ ಹಾಗೂ ಮಧ್ಯಾಹ್ನದ ಊಟ ವಿತರಿಸಲು ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.

ಈ ಯೋಜನೆಗೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಅಡ್ಡಿಪಡಿಸಿದ್ದವು. ಉದ್ಯಾನ, ಆಸ್ಪತ್ರೆಯ ಜಾಗದಲ್ಲಿ ಕ್ಯಾಂಟೀನ್‌ ತೆರೆಯಲಾಗಿದೆ ಎಂದು ಗುಲ್ಲೆಬ್ಬಿಸಿದ್ದರು. ಇಂತಹ ಕ್ಷುಲ್ಲಕ ಹೇಳಿಕೆ ನೀಡುವ ಹಾಗೂ ವಿರೋಧಿ ಮನೋಭಾವದ ಹೇಳಿಕೆಗಳನ್ನು ಜನರು ಖಂಡಿಸಬೇಕು ಎಂದರು.

ರಾಗಿ ಮುದ್ದೆ ಸೇರ್ಪಡೆಗೆ ಚಿಂತನೆ
ಇಂದಿರಾ ಕ್ಯಾಂಟೀನ್‌ನ ಮೆನುವಿನಲ್ಲಿ ರಾಗಿ ಮುದ್ದೆ ಸೇರಿಸಲು ಬಿಬಿಎಂಪಿ ಚಿಂತನೆ ನಡೆಸಿದೆ.

ರಾಗಿ ಮುದ್ದೆ ತಯಾರಿಸುವ ಯಂತ್ರದ ಬಗ್ಗೆ ಅಧ್ಯಯನ ನಡೆಸಲು ಪಾಲಿಕೆಯ ಕೆಲ ಅಧಿಕಾರಿಗಳು ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ (ಸಿಎಫ್‌ಟಿಆರ್‌ಐ) ಭೇಟಿ ಕೊಟ್ಟಿದ್ದಾರೆ.

ಕೈಯಿಂದ ಮಾಡಿದ ಮುದ್ದೆಯಷ್ಟು ಮೃದುವಾಗಿ ಯಂತ್ರದಿಂದ ಮಾಡಿದ ಮುದ್ದೆ ಬರುವುದಿಲ್ಲ. ಹೀಗಾಗಿ, ಮುದ್ದೆ ಸೇರ್ಪಡೆಯ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ ಎಂದು ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

ಸದ್ಯ, ಇಂದಿರಾ ಕ್ಯಾಂಟೀನ್‌ಗಳಲ್ಲಿ ಮಧ್ಯಾಹ್ನ ಹಾಗೂ ರಾತ್ರಿಯ ಊಟಕ್ಕೆ ಅಕ್ಕಿಯಿಂದ ಮಾಡಿದ ಪದಾರ್ಥಗಳು, ಬೆಳಗಿನ ತಿಂಡಿಗೆ ಇಡ್ಲಿ, ಉಪ್ಪಿಟ್ಟು ಹಾಗೂ ರೈಸ್‌ಬಾತ್‌ ವಿತರಿಸಲಾಗುತ್ತಿದೆ.

ರಾಜ್ಯ ಸರ್ಕಾರವು ಇತ್ತೀಚೆಗೆ ಆಯೋಜಿಸಿದ್ದ ‘ಸಿರಿಧಾನ್ಯ’ ಮೇಳದಲ್ಲಿ ರಾಗಿ ಮುದ್ದೆ ಸೇರ್ಪಡೆ ಬಗ್ಗೆ ಸುಳಿವು ನೀಡಲಾಗಿತ್ತು. ಇಂದಿರಾ ಕ್ಯಾಂಟೀನ್‌ ಮೆನುಗೆ ರಾಗಿ ಮುದ್ದೆ ಸೇರ್ಪಡೆ ಮಾಡಲು ಕೃಷಿ ಸಚಿವ ಕೃಷ್ಣ ಬೈರೇಗೌಡ ಉತ್ಸುಕರಾಗಿದ್ದಾರೆ.

ಜೆಡಿಎಸ್‌ನ ಟಿ.ಎ.ಶರವಣ ನಡೆಸುತ್ತಿರುವ ‘ನಮ್ಮ ಅಪ್ಪಾಜಿ’ ಕ್ಯಾಂಟೀನ್‌ನಲ್ಲಿ ರಾಗಿ ಮುದ್ದೆ ಪ್ರಮುಖ ಆಹಾರವಾಗಿದೆ.

*
ಬಡವರಿಗೆ ಕಡಿಮೆ ಬೆಲೆಯಲ್ಲಿ ತಿಂಡಿ–ಊಟ ನೀಡುವ ಯೋಜನೆಯನ್ನು ಖಂಡಿಸುವವರು ಸಾರ್ವಜನಿಕ ಜೀವನದಲ್ಲಿ ಇರಲು ನಾಲಾಯಕ್‌. ಅವರಿಗೆ ಹಸಿವಿನ ನೋವು ಗೊತ್ತಿಲ್ಲ.
–ಸಿದ್ದರಾಮಯ್ಯ, ಮುಖ್ಯಮಂತ್ರಿ

ಸಂಚಾರಿ ಕ್ಯಾಂಟೀನ್‌ ವಿಶೇಷ
* ಆಹಾರ ವಿತರಣೆಗಾಗಿ ವಿಶಿಷ್ಟ ವಿನ್ಯಾಸದ ವಾಹನ
* ನಗದು ಸ್ವೀಕರಿಸಲು ಮತ್ತು ಆಹಾರ ವಿತರಿಸಲು ಎರಡು ಪ್ರತ್ಯೇಕ ಕೌಂಟರ್‌
* ಒಳಾಂಗಣ ವಿನ್ಯಾಸಕ್ಕೆ ಎಸ್‌–304 ಶ್ರೇಣಿಯ ಕಲೆರಹಿತ ಉಕ್ಕು (ಸ್ಟೇನ್‌ಲೆಸ್‌ ಸ್ಟೀಲ್‌) ಬಳಕೆ
* ಕುಡಿಯುವ ನೀರು ಪೂರೈಸಲು 250 ಲೀಟರ್‌ ಸಾಮರ್ಥ್ಯದ , ಕೈ ತೊಳೆಯಲು 350 ಲೀಟರ್‌ ಸಾಮರ್ಥ್ಯದ ಟ್ಯಾಂಕ್‌
* ಬಳಸಿದ ನೀರು ಶೇಖರಿಸಲು 500 ಲೀಟರ್‌ ಸಾಮರ್ಥ್ಯದ ಟ್ಯಾಂಕ್‌
* ತಾಜಾ ಮತ್ತು ಸ್ವಚ್ಛ ತಟ್ಟೆಗಳ ಶೇಖರಣೆಗೆ ಪ್ರತ್ಯೇಕ ರ‍್ಯಾಕ್‌
* ಒಳಾಂಗಣ ಮತ್ತು ಹೊರಾಂಗಣದಲ್ಲಿ ಬೆಳಕಿನ ವ್ಯವಸ್ಥೆ
* ಸೌರ ವಿದ್ಯುತ್‌ ಬಳಕೆ
* ಮಳೆ ಮತ್ತು ಬಿಸಿಲಿನಿಂದ ರಕ್ಷಣೆ ಒದಗಿಸಲು ವಿಸ್ತರಿಸಬಹುದಾದ ಚಾವಣಿ
* ಹೆಚ್ಚುವರಿಯಾಗಿ ಆರು ಊಟದ ಟೇಬಲ್‌ಗಳು
* ಬಳಸಿದ ತಟ್ಟೆಗಳು ಹಾಗೂ ತ್ಯಾಜ್ಯ ಆಹಾರ ಸಂಗ್ರಹಣೆಗೆ ಕ್ರೇಟ್‌ಗಳನ್ನು ಒಳಗೊಂಡ ಪ್ರತ್ಯೇಕ ಸ್ಥಳ

ಅಂಕಿ–ಅಂಶ
₹28.5 ಲಕ್ಷ– ಇಂದಿರಾ ಕ್ಯಾಂಟೀನ್‌ ಕಟ್ಟಡ ನಿರ್ಮಾಣದ ವೆಚ್ಚ
* ₹14 ಲಕ್ಷ–  ಸಂಚಾರಿ ಕ್ಯಾಂಟೀನ್‌ ವೆಚ್ಚ‌
* 2.5 ಕೋಟಿ– ಕ್ಯಾಂಟೀನ್‌ನಲ್ಲಿ ಈವರೆಗೆ ಊಟ ಮಾಡಿದವರ ಸಂಖ್ಯೆ
* 2 ಲಕ್ಷ– ಕ್ಯಾಂಟೀನ್‌ಗಳಲ್ಲಿ ಪ್ರತಿದಿನ ಆಹಾರ ಸೇವಿಸುತ್ತಿರುವವರು
* 2.5 ಲಕ್ಷ–  ಸಂಚಾರಿ ಕ್ಯಾಂಟೀನ್‌ ಸೇರ್ಪಡೆ ಬಳಿಕ ನಿತ್ಯ ಆಹಾರ ಸೇವಿಸುವವರ ಸಂಖ್ಯೆ

ಸಂಚಾರಿ ಕ್ಯಾಂಟೀನ್‌ ಹೊಂದಿರುವ ವಾರ್ಡ್‌ಗಳು
ಕಾಡುಮಲ್ಲೇಶ್ವರ‌
ಓಕಳಿಪುರ
ದಯಾನಂದ ನಗರ
ಬಸವೇಶ್ವರ ನಗರ
ಚಾಮರಾಜಪೇಟೆ
ಶ್ರೀರಾಮಮಂದಿರ
ಶ್ರೀನಗರ
ಗಿರಿನಗರ
ಮಡಿವಾಳ
ಜಯನಗರ ಪೂರ್ವ
ಜೆ.ಪಿ. ನಗರ
ಗಣೇಶ ದೇವಾಲಯ
ಕೆಂಪಾಪುರ ಅಗ್ರಹಾರ
ಬಾಪೂಜಿ ನಗರ
ಯಡಿಯೂರು
ಕಾಚರಕನಹಳ್ಳಿ
ಮನೋರಾಯನಪಾಳ್ಯ
ಹಲಸೂರು
ಯಲಚೇನಹಳ್ಳಿ
ಎಚ್‌ಎಎಲ್‌ ವಿಮಾನ ನಿಲ್ದಾಣ
ಲಕ್ಷ್ಮಿದೇವಿ ನಗರ
ಜ್ಞಾನಭಾರತಿ ನಗರ
ಲಗ್ಗೆರೆ
ಮೆಜೆಸ್ಟಿಕ್‌– ಬಿಎಂಟಿಸಿ ಬಸ್‌ ನಿಲ್ದಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.