ADVERTISEMENT

ಎಂಟು ವರ್ಷಗಳ ಬಳಿಕ ಸೆರೆ ಸಿಕ್ಕ ಕೈದಿ

ಪೆರೋಲ್ ಪಡೆದು ಹೊರಗೆ ಬಂದು ತಲೆಮರೆಸಿಕೊಂಡಿದ್ದ ವೆಂಕಟೇಶ್

​ಪ್ರಜಾವಾಣಿ ವಾರ್ತೆ
Published 26 ಜನವರಿ 2018, 20:20 IST
Last Updated 26 ಜನವರಿ 2018, 20:20 IST

ಬೆಂಗಳೂರು: ಪೆರೋಲ್ ಮೇಲೆ ಜೈಲಿನಿಂದ ಹೊರಬಂದು ತಲೆಮರೆಸಿಕೊಂಡಿದ್ದ ವೆಂಕಟೇಶ್ ಎಂಬ ಕೈದಿ ಎಂಟು ವರ್ಷಗಳ ಬಳಿಕ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಪೆರೋಲ್ ಪಡೆಯಲು ವೆಂಕಟೇಶ್‌ಗೆ ಶ್ಯೂರಿಟಿ ನೀಡಿದ್ದ ಆತನ ತಮ್ಮ ಮುರಳಿ ಸಹ, ಸುಳ್ಳು ಮಾಹಿತಿ ನೀಡಿದ ಆರೋಪದಡಿ ಜೈಲಿನ ಅತಿಥಿಯಾಗಿದ್ದಾನೆ.

ತಮಿಳುನಾಡಿನ ಕೊಯಮತ್ತೂರಿನ ಪಟ್ಟಣಂ ಗ್ರಾಮದ ವೆಂಕಟೇಶ್ ಉದ್ಯೋಗ ಅರಸಿ ಪತ್ನಿ ಜತೆ ನಗರಕ್ಕೆ ಬಂದಿದ್ದ. ಪತ್ನಿಯ ನಡತೆ ಬಗ್ಗೆ ಅನುಮಾನ ಹೊಂದಿದ್ದ ಆತ, 2005ರಲ್ಲಿ ಆಕೆ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದ.

ADVERTISEMENT

ಆ ಸಂಬಂಧ ಆರ್‌ಎಂಸಿ ಯಾರ್ಡ್‌ ಪೊಲೀಸರು ಆತನನ್ನು ಬಂಧಿಸಿದ್ದರು. ಆ ಪ್ರಕರಣದಲ್ಲಿ ಆತನಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿತ್ತು.

ಪ್ರಕರಣದ ವಿವರ: 2009ರಲ್ಲಿ ಮೊದಲ ಬಾರಿಗೆ ಪೆರೋಲ್ ಮೇಲೆ ಹೊರಬಂದಿದ್ದ ವೆಂಕಟೇಶ್, ಅವಧಿ ಮುಗಿದ ಬಳಿಕ ಜೈಲಿಗೆ ಹಿಂದಿರುಗಿದ್ದ. 2010ರಲ್ಲಿ ಮತ್ತೊಮ್ಮೆ ಪೆರೋಲ್ ಮೇಲೆ ಹೊರಗೆ ಬಂದಿದ್ದ ಆತ ನಿಗದಿತ ಅವಧಿಯೊಳಗೆ ವಾಪಸ್ ಆಗಿದ್ದ.

ಹಿಂದಿನ ಬಾರಿ ಪೆರೋಲ್ ನೀಡಿದ್ದ ವೇಳೆ ಪ್ರಾಮಾಣಿಕವಾಗಿ ನಡೆದುಕೊಂಡ ಆಧಾರದ ಮೇಲೆ 2010ರ ಡಿಸೆಂಬರ್‌ನಲ್ಲಿ ಮೂರನೇ ಬಾರಿಗೆ ಆತನಿಗೆ ಅಧಿಕಾರಿಗಳು ಪೆರೋಲ್ ನೀಡಿದ್ದರು. ಆದರೆ, ಅವಧಿ ಮುಗಿದರೂ ಆತ ಹಿಂದಿರುಗದೆ ತಲೆಮರೆಸಿಕೊಂಡಿದ್ದ.

‘ಆತನ ಪತ್ತೆಗಾಗಿ ಸಾಕಷ್ಟು ಬಾರಿ ತಮಿಳುನಾಡಿನ ಪಟ್ಟಣಂ ಗ್ರಾಮಕ್ಕೆ ಹೋಗಿ ಹುಡುಕಾಟ ನಡೆಸಿದ್ದೆವು. ಶ್ಯೂರಿಟಿ ನೀಡುವಾಗ ಮುರಳಿ ನೀಡಿದ್ದ ವಿಳಾಸಕ್ಕೂ (ಕೆಲಸ ಮಾಡುವ ಸ್ಥಳ– ಚಿಕ್ಕಮಗಳೂರಿನ ಮಾಚಿಗೊಂಡನಹಳ್ಳಿ) ಹೋಗಿದ್ದೆವು. ಆದರೆ, ಅಣ್ಣ ತಮ್ಮನ ಸುಳಿವು ಸಿಕ್ಕಿರಲಿಲ್ಲ’ ಎಂದು ಪೊಲೀಸರು ತಿಳಿಸಿದರು.

‘ಪಟ್ಟಣಂ ಗ್ರಾಮಕ್ಕೂ ಆಗಾಗ ಮಫ್ತಿಯಲ್ಲಿ ಹೋಗಿ ಬರುತ್ತಿದ್ದೆವು. ಇತ್ತೀಚೆಗೆ ಮುರಳಿಯ ವಿಳಾಸದ ಬಗ್ಗೆ ಮಾಹಿತಿ ಸಿಕ್ಕಿತ್ತು. ಅದರನ್ವಯ ತಮಿಳುನಾಡಿನ ಮೇಡಗಾಮ್‌ಪಲ್ಲಿಗೆ ಹೋಗಿದ್ದಾಗ ಆತ ಸಿಕ್ಕಿಬಿದ್ದಿದ್ದ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ವೆಂಕಟೇಶ್‌ನನ್ನು ಬಂಧಿಸಿದೆವು. ಸದ್ಯ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದೇವೆ’ ಎಂದರು.

ಪತ್ನಿಯ ತಂಗಿಯ ಜತೆ ವಿವಾಹ

ತಲೆಮರೆಸಿಕೊಂಡಿದ್ದ ವೆಂಕಟೇಶ್ ತಮಿಳುನಾಡಿಗೆ ಹೋಗಿ ಪತ್ನಿಯ ಕುಟುಂಬಸ್ಥರ ಮನವೊಲಿಸಿ ಆಕೆಯ ತಂಗಿಯನ್ನೇ ವಿವಾಹವಾಗಿದ್ದ ಎಂದು ಅಧಿಕಾರಿಗಳು ಹೇಳಿದರು.

‘ಹೀಗಾಗಿ, ಮೊದಲು ಆತನ ವಿರೋಧಿಗಳಾಗಿದ್ದ ಪತ್ನಿಯ ಕುಟುಂಬಸ್ಥರೆಲ್ಲರೂ ಬಳಿಕ ಆಪ್ತರಾಗಿದ್ದರು. ನಾವು ಅಲ್ಲಿಗೆ ಭೇಟಿ ಕೊಟ್ಟಾಗಲೆಲ್ಲ ಅವರು ತನಿಖೆಗೆ ಸಹಕಾರ ನೀಡಿರಲಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.