ADVERTISEMENT

ಮಗನಿಗೆ ನಿರ್ದಯವಾಗಿ ಥಳಿಸಿದ್ದ ತಂದೆ ಸೆರೆ

ಬೆಲ್ಟ್, ವೈರ್‌ನಿಂದ ಹಲ್ಲೆ * ಮೊಬೈಲ್ ರಿಪೇರಿಗೆ ಕೊಟ್ಟಾಗ ಬಯಲಾಯ್ತು ಕೃತ್ಯ

​ಪ್ರಜಾವಾಣಿ ವಾರ್ತೆ
Published 27 ಜನವರಿ 2018, 19:43 IST
Last Updated 27 ಜನವರಿ 2018, 19:43 IST
ಮಗನಿಗೆ ನಿರ್ದಯವಾಗಿ ಥಳಿಸಿದ್ದ ತಂದೆ ಸೆರೆ
ಮಗನಿಗೆ ನಿರ್ದಯವಾಗಿ ಥಳಿಸಿದ್ದ ತಂದೆ ಸೆರೆ   

ಬೆಂಗಳೂರು: ಸುಳ್ಳು ಹೇಳುವುದನ್ನು ಕಲಿತಿದ್ದಾನೆ ಎಂಬ ಕಾರಣಕ್ಕೆ 9 ವರ್ಷದ ಮಗನ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದ ತಂದೆಯನ್ನು ಕೆಂಗೇರಿ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಕೆಂಗೇರಿಯ ಗ್ಲೋಬಲ್ ವಿಲೇಜ್ ನಿವಾಸಿ ಮಹೇಂದ್ರ ಕುಮಾರ್, 2017ರ ನ.17ರಂದು ತಮ್ಮ ಮಗನಿಗೆ ಮನಸೋಇಚ್ಛೆ ಥಳಿಸಿದ್ದರು. ಆ ದೃಶ್ಯವನ್ನು ಬಾಲಕನ ತಾಯಿ ಶಿಲ್ಪಾ ಅವರೇ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ಆ ವಿಡಿಯೊ ವೈರಲ್ ಆಗಿ, ಪೋಷಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಕೆಂಗೇರಿ ಪೊಲೀಸರು ಶನಿವಾರ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತಂದೆಯನ್ನು ಬಂಧಿಸಿದ್ದಾರೆ.

ADVERTISEMENT

ತಾಯಿ ದೂರು: ಕೊಳಾಯಿ ರಿಪೇರಿ ಮಾಡುವ ಮಹೇಂದ್ರ, ಪತ್ನಿ–ಮಗನ ಜತೆ 2 ವರ್ಷಗಳಿಂದ ನಗರದಲ್ಲಿ ನೆಲೆಸಿದ್ದಾರೆ. ಮಗ ಮನೆ ಹತ್ತಿರದ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಾನೆ.  ‘ಮಗ ಸರಿಯಾಗಿ ಟ್ಯೂಷನ್‌ಗೆ ಹೋಗುತ್ತಿಲ್ಲ. ಬಹಳ ಸುಳ್ಳು ಹೇಳುವುದನ್ನು ಕಲಿತಿದ್ದಾನೆ’ ಎಂದು ನ.17ರಂದು ಶಿಲ್ಪಾ ಪತಿ ಬಳಿ ದೂರಿದ್ದರು. ಇದರಿಂದ ಕುಪಿತಗೊಂಡ ಮಹೇಂದ್ರ, ನಡುಮನೆಯಲ್ಲಿ ಕುಳಿತಿದ್ದ ಮಗನನ್ನು ಕೋಣೆಗೆ ಎಳೆದೊಯ್ದಿದ್ದರು.

‘ಸುಳ್ಳು ಹೇಳುತ್ತೀಯಾ...’ ಎನ್ನುತ್ತಲ್ಲೇ ಮೊದಲು ಮೊಬೈಲ್‌ ಚಾರ್ಜರ್‌ನಿಂದ ಬಾಸುಂಡೆ ಬರುವಂತೆ ಹೊಡೆದಿದ್ದಾರೆ. ಆ ನಂತರ ಬೆಲ್ಟ್‌, ಕೇಬಲ್, ಹಗ್ಗ.. ಹೀಗೆ, ಕೈಗೆ ಸಿಕ್ಕ ಎಲ್ಲ ವಸ್ತುಗಳಿಂದಲೂ ಮಗನಿಗೆ ಬಾರಿಸಿದ್ದಾರೆ. ಕೊನೆಗೆ ನಾಲ್ಕೈದು ಬಾರಿ ಮೇಲಕ್ಕೆ ಎತ್ತಿ ಮಂಚದ ಮೇಲೆ ಎಸೆದಿದ್ದಾರೆ. ‘ಇಲ್ಲ ಅಪ್ಪ. ಇನ್ನು ಮುಂದೆ ಸುಳ್ಳು ಹೇಳಲ್ಲ’ ಎಂದು ಮಗ ಅಳುತ್ತ ಅಂಗಲಾಚಿದರೂ ಬಿಡದೆ, ಮುಖ ಹಾಗೂ ಎದೆಗೆ ಒದ್ದಿದ್ದಾರೆ.’

ಈ ಸಂದರ್ಭದಲ್ಲಿ ಶಿಲ್ಪಾ, ‘ಎಷ್ಟು ಹೇಳಿದರೂ ಆತನಿಗೆ ಬುದ್ಧಿ ಬರಲ್ಲ’ ಎನ್ನುತ್ತ ಮೊಬೈಲ್‌ನಲ್ಲಿ ಇಡೀ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.

ವಿಡಿಯೊ ವೈರಲ್: ಮಗ ಮುಂದಿನ ದಿನಗಳಲ್ಲಿ ಮಾತು ಕೇಳದಿದ್ದರೆ, ಆ ವಿಡಿಯೊ ತೋರಿಸಿ ಹೆದರಿಸಬಹುದು ಎಂದು ದಂಪತಿ ಅದನ್ನು ಮೊಬೈಲ್‌ನಲ್ಲಿ ಹಾಗೆಯೇ ಇಟ್ಟುಕೊಂಡಿದ್ದರು.

ಮೊಬೈಲ್ ಹಾಳಾಗಿದ್ದರಿಂದ, ಶುಕ್ರವಾರ ಮನೆ ಸಮೀಪವೇ ರಿಪೇರಿಗೆ ಕೊಟ್ಟಿದ್ದರು. ದುರಸ್ತಿ ಮಾಡಿದ ಬಳಿಕ ಅಂಗಡಿಯವನು ಆ ವಿಡಿಯೊ ನೋಡಿದ್ದ. ನಂತರ ಅದನ್ನು ತನ್ನ ಮೊಬೈಲ್‌ಗೆ ಕಳುಹಿಸಿಕೊಂಡು, ಮೊಬೈಲ್ ಮರಳಿಸಿದ್ದ.

‘ಪಾಪಿ ತಂದೆಯ ರಾಕ್ಷಸೀ ಕೃತ್ಯ. ಮಗನಿಗೆ ಹೊಡೆಯುತ್ತಿರುವ ದೃಶ್ಯ ಸೆರೆ ಹಿಡಿದ ತಾಯಿ...’ ಎಂಬ ಶೀರ್ಷಿಕೆಯಡಿ ಆ ವ್ಯಕ್ತಿ ಶನಿವಾರ ಫೇಸ್‌ಬುಕ್‌ಗೆ ವಿಡಿಯೊ ಅಪ್‌ಲೋಡ್ ಮಾಡಿದ್ದ. ಕೆಲ ಸುದ್ದಿ ವಾಹಿನಿಗಳು ಬೆಳಿಗ್ಗೆಯಿಂದಲೇ ವಿಡಿಯೊ ಸಮೇತ ಸುದ್ದಿ ಪ್ರಸಾರ ಮಾಡಿದವು. ಅದನ್ನು ನೋಡಿದ ಪಶ್ಚಿಮ ವಿಭಾಗದ ಡಿಸಿಪಿ ಎಂ.ಎನ್.ಅನುಚೇತ್, ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತಂದೆ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೆಂಗೇರಿ ಇನ್‌ಸ್ಪೆರ್‌ಗೆ ಸೂಚಿಸಿದ್ದರು.

ಅಂತೆಯೇ ಬಾಲನ್ಯಾಯ ಕಾಯ್ದೆ, ಹಲ್ಲೆ (ಐಪಿಸಿ 323) ಹಾಗೂ ಜೀವ ಬೆದರಿಕೆ (ಐಪಿಸಿ 506) ಆರೋಪಗಳಡಿ ಎಫ್‌ಐಆರ್ ಮಾಡಿದ ಪೊಲೀಸರು, ಮನೆಗೆ ತೆರಳಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಶಿಲ್ಪಾ ಅವರಿಗೂ ಬೈದು ಬುದ್ಧಿ ಹೇಳಿ ಬಂದಿದ್ದಾರೆ.

ಪೋಷಕರಿಗೆ ಕಾನೂನು ಗೊತ್ತಿರಲಿ

‘ಮಕ್ಕಳ ಮೇಲೆ ದೈಹಿಕ ದೌರ್ಜನ್ಯ ಎಸಗಿದರೆ ಮೂರು ವರ್ಷ ಕಾರಾಗೃಹ ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ‘ಬಾಲನ್ಯಾಯ ಕಾಯ್ದೆ’ಯ ಕಲಂ–72 ಸ್ಪಷ್ಟವಾಗಿ ಹೇಳುತ್ತದೆ. ಅವರು ಪೋಷಕರೇ ಆಗಿದ್ದರೂ ಇದೇ ನಿಯಮ ಅನ್ವಯವಾಗುತ್ತದೆ. ‘ನಮ್ಮ ಮಕ್ಕಳನ್ನು ನಾವು ಏನು ಬೇಕಾದರೂ ಮಾಡಿಕೊಳ್ಳುತ್ತೇವೆ’ ಎಂಬ ಭ್ರಮೆಯಲ್ಲಿರುವ ಪೋಷಕರಿಗೆ ಈ ಕಾನೂನಿನ ಜಾಗೃತಿ ಇರಲಿ. ಮಕ್ಕಳು ದೇಶದ ಆಸ್ತಿ. ಅವರ ಮೇಲೆ ಮನೆಯಲ್ಲಿ ದೌರ್ಜನ್ಯ ನಡೆದರೂ, ಪ್ರಶ್ನಿಸುವ ಅಧಿಕಾರ ಎಲ್ಲರಿಗೂ ಇದೆ’ ಎಂದು ಮಕ್ಕಳ ಸಹಾಯವಾಣಿಯ ನೋಡಲ್‌ ಸೂಪರ್‌ವೈಸರ್ ನಾಗಸಿಂಹ ಜಿ.ರಾವ್ ತಿಳಿಸಿದರು.

‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ಆರೋಪಿ ತಂದೆ ಮಗುವನ್ನು ಬೊಂಬೆಯಂತೆ ಎಸೆದಿದ್ದಾನೆ. ಆ ವಿಡಿಯೊ ನೋಡಿದರೆ ಎಂಥವರ ಹೃದಯಕ್ಕೂ ಘಾಸಿಯಾಗುತ್ತದೆ. ಮಗ ಸುಳ್ಳು ಹೇಳಿದರೆ, ಆಪ್ತ ಸಮಾಲೋಚನೆ ಮೂಲಕ ಸರಿಪಡಿಸಬೇಕು. ಬುದ್ಧಿ ಹೇಳಲು ಇಂಥ ಕೆಟ್ಟ ದಾರಿಯನ್ನು ತುಳಿದಿದ್ದು ಸರಿಯಲ್ಲ. ಮಗನನ್ನು ರಕ್ಷಿಸಬೇಕಾಗಿದ್ದ ತಾಯಿಯೇ ದೌರ್ಜನ್ಯಕ್ಕೆ ಪ್ರಚೋದನೆ ನೀಡಿದ್ದಾರೆ. ಹೀಗಾಗಿ, ಅವರ ವಿರುದ್ಧವೂ ಕ್ರಮ ಜರುಗಿಸಬೇಕು. ಈ ನಿಟ್ಟಿನಲ್ಲಿ ಮಕ್ಕಳ ರಕ್ಷಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.