ADVERTISEMENT

ಭಾಷಾ ಚಳವಳಿಗೆ ಹೊಸ ಮಾದರಿ ಅಗತ್ಯ

ವಿಚಾರ ಸಂಕಿರಣದಲ್ಲಿ ರಂಗತಜ್ಞ ಪ್ರೊ.ಸಂಪಿಗೆ ತೋಂಟದಾರ್ಯ ಅಭಿಮತ

​ಪ್ರಜಾವಾಣಿ ವಾರ್ತೆ
Published 28 ಜನವರಿ 2018, 19:30 IST
Last Updated 28 ಜನವರಿ 2018, 19:30 IST
ಡಾ.ಕಾ.ವೆಂ.ಶ್ರೀನಿವಾಸಮೂರ್ತಿ, ಪ್ರೊ.ಸಂಪಿಗೆ ತೋಂಟದಾರ್ಯ, ಕರ್ನಾಟಕ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಸಿ.ವೀರಣ್ಣ ಹಾಗೂ ಪ್ರೊ.ಎಲ್.ಎನ್.ಮುಕುಂದರಾಜ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು –ಪ್ರಜಾವಾಣಿ ಚಿತ್ರ
ಡಾ.ಕಾ.ವೆಂ.ಶ್ರೀನಿವಾಸಮೂರ್ತಿ, ಪ್ರೊ.ಸಂಪಿಗೆ ತೋಂಟದಾರ್ಯ, ಕರ್ನಾಟಕ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಸಿ.ವೀರಣ್ಣ ಹಾಗೂ ಪ್ರೊ.ಎಲ್.ಎನ್.ಮುಕುಂದರಾಜ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಆಧುನೀಕರಣಗೊಂಡ ಬದುಕಿನ ಮತ್ತು ಸಮಾಜದ ಅಗತ್ಯಗಳಿಗೆ ಕನ್ನಡ ಭಾಷಾ ಚಳವಳಿಯ ಹೊಸ ಮಾದರಿಗಳನ್ನು ಹುಡುಕಿಕೊಳ್ಳುವ ಅಗತ್ಯವಿದೆ ಎಂದು ರಂಗತಜ್ಞ ಪ್ರೊ.ಸಂಪಿಗೆ ತೋಂಟದಾರ್ಯ ಅಭಿಪ್ರಾಯಪಟ್ಟರು.

ಕರ್ನಾಟಕ ಸಾಹಿತ್ಯ ಪರಿಷತ್ತು ಭಾನುವಾರ ಆಯೋಜಿಸಿದ್ದ ದಿವಂಗತ ಬೆ.ರ.ರಂಗರಾಜು ಸ್ಮಾರಕ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

'ಕನ್ನಡದಲ್ಲಿ ಇದುವರೆಗೆ ಏನೇನು ಪ್ರಯೋಗಗಳು ನಡೆಯಬೇಕಿತ್ತೋ ಅವೆಲ್ಲವೂ ಆಗಿವೆ. ಶಿಕ್ಷಣದಲ್ಲಿ ಮತ್ತು ಉದ್ಯೋಗದಲ್ಲಿ ಕನ್ನಡ ಎಷ್ಟರ
ಮಟ್ಟಿಗೆ ಬೇಕು ಎನ್ನುವ ಬಗ್ಗೆ ಮರುಚಿಂತನೆ ಮಾಡಬೇಕಾಗಿದೆ. ಬದುಕು, ನಾಡಿಗೆ, ಶಿಕ್ಷಣಕ್ಕೆ ಅನುಗುಣವಾಗಿ ಹೊಸ ಕಾಲದ ಅಗತ್ಯಗಳಿಗೆ ತಕ್ಕಂತೆ  ಬದಲಾಗಬೇಕಿದೆ' ಎಂದರು.

ADVERTISEMENT

ಕನ್ನಡ ಚಳವಳಿಯ ಮುನ್ನೋಟಗಳು ಕುರಿತು ಮಾತನಾಡಿದ ಚಿಂತಕ ಪ್ರೊ.ಎಲ್‌.ಎನ್.ಮುಕುಂದರಾಜ್‌, 'ಕನ್ನಡವು ಅಸ್ಮಿತೆಗಾಗಿ ಶತಮಾನಗಳಿಂದ ಹುಡುಕಾಟ ನಡೆಸಿದೆ. ಅನೇಕ ಭಾಷೆಗಳು ಸಂಸ್ಕೃತದ ಪ್ರಾಬಲ್ಯವನ್ನು ಪ್ರಶ್ನಿಸಿದಂತೆ ಕನ್ನಡವೂ ಪ್ರಶ್ನಿಸಿದೆ. ಇಡೀ ಕನ್ನಡ ಸಾಹಿತ್ಯ ಚಳವಳಿಯು ಈ ಅಸ್ಮಿತೆಯ ಭಾಗ. ಇಂದಿನ ಚಳವಳಿಗಳು ಕೂಡ ಅದರ ಮುಂದುವರಿದ ಭಾಗವಷ್ಟೇ’ ಎಂದರು.

‘ಕನ್ನಡ ನಾಡಿಗೆ ರಾಷ್ಟ್ರಕವಿ, ಪ್ರತ್ಯೇಕ ಧ್ವಜ, ನಾಡಗೀತೆ ಅಗತ್ಯ’ ಕುರಿತು ಮಾತನಾಡಿದ ಡಾ.ಕಾ.ವೆಂ.ಶ್ರೀನಿವಾಸಾಚಾರ್ಯ, ‘ಕನ್ನಡದ ಎಲ್ಲ ಕವಿಗಳೂ ಕನ್ನಡವನ್ನು ಸಾಹಿತ್ಯದ ಭಾಷೆಯಾಗಿಸಲು ಹೋರಾಟವನ್ನೇ ಮಾಡಿದ್ದಾರೆ. ರಾಷ್ಟ್ರಕವಿ ಬಿರುದನ್ನು ಇಬ್ಬರು, ಮೂವರಿಗೆ ಸೀಮಿತಗೊಳಿಸಬಾರದು’ ಎಂದರು.

ಬ್ರಿಟಿಷರ ಆಡಳಿತಕ್ಕೆ ಬಹುಕಾಲ ಒಳಪಟ್ಟಿದ್ದರಿಂದ ಮತ್ತು ದೇಶದಲ್ಲಿ ಬಹುಭಾಷಾ ಸಂಸ್ಕೃತಿ ಇದ್ದ ಕಾರಣಕ್ಕೆ ಶಿಕ್ಷಣದಲ್ಲಿ ಕನ್ನಡ ಅಳವಡಿಸುವುದು ಯಾವತ್ತೂ ದೊಡ್ಡ ಸಮಸ್ಯೆಯಾಗಿಯೇ ಕಾಡಿದೆ. ಗೋಕಾಕ್‌ ಚಳವಳಿ ಎಲ್ಲರನ್ನೂ ಒಂದುಗೂಡಿಸಿತು. ಆದರೆ, ಭಾಷೆಯ ಬೆಳವಣಿಗೆ ದೃಷ್ಟಿಯಲ್ಲಿ ನಿರೀಕ್ಷಿತ ಫಲ ಕೊಡಲಿಲ್ಲ ಎಂದು ಕನ್ನಡ ಶ್ರೀಸಾಮಾನ್ಯರ ಕೂಟದ ಅಧ್ಯಕ್ಷ ಶ್ರ.ದೇ.ಪಾರ್ಶ್ವನಾಥ ಅವರು
ಅಭಿಪ್ರಾಯಪಟ್ಟರು.

‘ಹಿಂದೆ ಮದ್ಯದ ದೊರೆಗಳು ಸರ್ಕಾರವನ್ನು ನಿಯಂತ್ರಿಸುತ್ತಿದ್ದರು. ಆದರೆ, ಇಂದು ಶಿಕ್ಷಣ ಸಂಸ್ಥೆಗಳ ಲಾಬಿ ಸರ್ಕಾರವನ್ನು ಹಿಡಿತದಲ್ಲಿಟ್ಟುಕೊಂಡಿದೆ. ಅಧಿಕಾರಸ್ಥ ರಾಜಕಾರಣಿಗಳ ಕೈಯಲ್ಲಿ ಹೆಚ್ಚು ಶಿಕ್ಷಣ ಸಂಸ್ಥೆಗಳಿರುವುದರಿಂದ 1ರಿಂದ 10ನೇ ತರಗತಿವರೆಗೆ ಕನ್ನಡ ಕಡ್ಡಾಯಗೊಳಿಸುವುದು ಅಸಾಧ್ಯವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.