ADVERTISEMENT

ಕೈ ಕೈ ಮಿಲಾಯಿಸಿದ ಕಾಂಗ್ರೆಸ್– ಬಿಜೆಪಿ ಕಾರ್ಯಕರ್ತರು

​ಪ್ರಜಾವಾಣಿ ವಾರ್ತೆ
Published 29 ಜನವರಿ 2018, 19:52 IST
Last Updated 29 ಜನವರಿ 2018, 19:52 IST

ಬೆಂಗಳೂರು: ಅಗ್ರಹಾರ ದಾಸರಹಳ್ಳಿಯ (ವಾರ್ಡ್ ಸಂಖ್ಯೆ 105) 9ನೇ ಅಡ್ಡರಸ್ತೆಯಲ್ಲಿ ನಡೆಯುತ್ತಿರುವ ಚರಂಡಿ ಕಾಮಗಾರಿ ವಿಚಾರವಾಗಿ ಕಾಂಗ್ರೆಸ್‌ ಹಾಗೂ ಬಿಜೆಪಿ ಕಾರ್ಯಕರ್ತರು ಸೋಮವಾರ ಹೊಡೆದಾಡಿಕೊಂಡಿದ್ದಾರೆ.

ಗಲಾಟೆ ಸಂಬಂಧ  ಕಾರ್ಪೊರೇಟರ್‌ ಶಿಲ್ಪಾ ಅವರ ಪತಿ ಶ್ರೀಧರ್‌, ಮಾಗಡಿ ರಸ್ತೆ ಪೊಲೀಸರಿಗೆ ದೂರು ನೀಡಿದ್ದಾರೆ. ಕಾಂಗ್ರೆಸ್‌ ಮುಖಂಡ ಕೃಷ್ಣಮೂರ್ತಿ ಸಹ ಪ್ರತಿ ದೂರು ದಾಖಲಿಸಿದ್ದಾರೆ.

‘ಇಬ್ಬರ ದೂರನ್ನು ಸ್ವೀಕರಿಸಿದ್ದೇವೆ. ಕಾನೂನು ತಜ್ಞರ ಅಭಿಪ್ರಾಯ ಪಡೆದು ಮುಂದುವರಿಯುತ್ತೇವೆ’ ಎಂದು ಪೊಲೀಸರು ತಿಳಿಸಿದರು.

ADVERTISEMENT

ಘಟನೆ ವಿವರ:

ಗೋವಿಂದರಾಜನಗರ ಶಾಸಕರ ಅನುದಾನದಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಈ ಕಾಮಗಾರಿ ಕಳಪೆಯಾಗಿದೆ ಎಂದು ಸ್ಥಳೀಯರು, ಪಾಲಿಕೆ ಸದಸ್ಯೆ ಶಿಲ್ಪಾ ಅವರಿಗೆ ದೂರು ನೀಡಿದ್ದರು. ಶಿಲ್ಪಾ ಹಾಗೂ ಅವರ ಪತಿ ಶ್ರೀಧರ್, ಪರಿಶೀಲನೆಗಾಗಿ ಕಾಮಗಾರಿ ಸ್ಥಳಕ್ಕೆ ಸೋಮವಾರ ಮಧ್ಯಾಹ್ನ ಬಂದಿದ್ದರು.

‘ಕಾಮಗಾರಿ ಸರಿಯಾಗಿ ಮಾಡಿ’ ಎಂದು ಸ್ಥಳದಲ್ಲಿದ್ದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಶ್ರೀನಿವಾಸ್‌ಗೆ ಸೂಚಿಸಿದ್ದರು. ಅದೇ ವೇಳೆ ಸ್ಥಳಕ್ಕೆ ಬಂದಿದ್ದ ಕೃಷ್ಣಮೂರ್ತಿ, ‘ಇದು ಶಾಸಕರ ಅನುದಾನದಲ್ಲಿ ನಡೆಯುತ್ತಿರುವ ಕಾಮಗಾರಿ. ಇಲ್ಲಿ ನಿಮಗೇನು ಕೆಲಸ. ವಾಪಸ್‌ ಹೋಗಿ’ ಎಂದು ಏರುಧ್ವನಿಯಲ್ಲಿ ಮಾತನಾಡಿದ್ದರು. ಆಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು ಎಂದು ಪೊಲೀಸರು ತಿಳಿಸಿದರು.

‘ಗಲಾಟೆ ವಿಕೋಪಕ್ಕೆ ಹೋಗುತ್ತಿದ್ದಂತೆ ಇಬ್ಬರ ಬೆಂಬಲಿಗರು ಪರಸ್ಪರ ಕೈ ಕೈ ಮಿಲಾಯಿಸಿದ್ದರು. ಅದೇ ವೇಳೆ ಕೃಷ್ಣಮೂರ್ತಿ, ಹಾರೆ ಹಾಗೂ ಕಲ್ಲಿನಿಂದ ಹಲ್ಲೆ ಮಾಡಿರುವುದಾಗಿ ಶ್ರೀಧರ್‌ ಆರೋಪಿಸುತ್ತಿದ್ದಾರೆ. ಶ್ರೀಧರ್‌ ಅವರೇ ಹಲ್ಲೆ ಮಾಡಿದ್ದಾರೆ ಎಂದು ಕೃಷ್ಣಮೂರ್ತಿ ದೂರುತ್ತಿದ್ದಾರೆ’ ಎಂದು ಹೇಳಿದರು.

‘ಕಳೆದ ಚುನಾವಣೆಯಲ್ಲಿ ಕೃಷ್ಣಮೂರ್ತಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತಿದ್ದರು. ಅಂದಿನಿಂದಲೇ ಕಾರ್ಪೊರೇಟರ್‌ ಹಾಗೂ ಅವರ ನಡುವೆ ವೈಷಮ್ಯವಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.