ADVERTISEMENT

ನಮ್ಮ ಮೆಟ್ರೊ: 15 ಸಂಪರ್ಕ ಸಾರಿಗೆ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 30 ಜನವರಿ 2018, 19:55 IST
Last Updated 30 ಜನವರಿ 2018, 19:55 IST
ಮೆಟ್ರೊ ಸಂಪರ್ಕ ಸಾರಿಗೆ
ಮೆಟ್ರೊ ಸಂಪರ್ಕ ಸಾರಿಗೆ   

ಬೆಂಗಳೂರು: ‘ನಮ್ಮ ಮೆಟ್ರೊ’ ಪ್ರಯಾಣಿಕರಿಗಾಗಿ ಪ್ರಾರಂಭಿಸಿದ್ದ ಸಂಪರ್ಕ (ಫೀಡರ್‌) ಸಾರಿಗೆಗಳನ್ನು ಕಡಿಮೆಗೊಳಿಸಲು ಬಿಎಂಟಿಸಿ ನಿರ್ಧರಿಸಿದೆ.

‘ನಗರದ ವಿವಿಧೆಡೆಯಿಂದ ಮೆಟ್ರೊ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ 173 ಬಸ್‌ಗಳ ಪೈಕಿ 15 ಬಸ್‌ಗಳನ್ನು ಸ್ಥಗಿತಗೊಳಿಸಲಾಗಿದೆ. ಉತ್ತರ-ದಕ್ಷಿಣ ಕಾರಿಡಾರ್‌ನಲ್ಲಿ (ನಾಗಸಂದ್ರ- ಯೆಲಚೇನಹಳ್ಳಿ) ಸಂಚರಿಸುತ್ತಿದ್ದ ಬಸ್‌ಗಳಿಗೆ ನೀರಸ ಸ್ಪಂದನೆ ವ್ಯಕ್ತವಾಗಿದ್ದರಿಂದ ಈ ನಿರ್ಧಾರಕ್ಕೆ ಬರಲಾಗಿದೆ. 40 ವೋಲ್ವೊ ಬಸ್‌ಗಳು ಸೇರಿ ಈ ಫೀಡರ್‌ ಬಸ್‌ಗಳಿಂದ ಸಂಸ್ಥೆಗೆ ‍ಪ್ರತಿ ತಿಂಗಳು ₹1.5 ಕೋಟಿ ನಷ್ಟವಾಗುತ್ತಿದೆ’ ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ತಿಳಿಸಿದರು.

ಪೂರ್ವ–ಪಶ್ಚಿಮ ಕಾರಿಡಾರ್‌ನಲ್ಲಿ (ಬೈಯಪ್ಪನಹಳ್ಳಿ– ಮೈಸೂರು ರಸ್ತೆ) 84 ಬಸ್‌ಗಳು ಎಂದಿನಂತೆ ಸಂಚರಿಸಲಿವೆ. ಆದರೆ, ಟ್ರಿಪ್‌ಗಳ ಸಂಖ್ಯೆಯನ್ನು ಕಡಿಮೆಗೊಳಿಸಲಾಗಿದೆ. ಇಲ್ಲಿವರೆಗೆ ನಿಲ್ದಾಣದಿಂದ 15 ನಿಮಿಷಕ್ಕೊಂದು ಬಸ್‌ ತೆರಳುತ್ತಿತ್ತು. ಇನ್ನು ಮುಂದೆ 30 ನಿಮಿಷಕ್ಕೊಂದು ಸಂಚರಿಸಲಿದೆ.

ADVERTISEMENT

‘ಈ ಬಸ್‌ಗೆ ಬೇಡಿಕೆ ಬಂದಲ್ಲಿ ಸ್ಥಗಿತಗೊಳಿಸಿರುವ ಮಾರ್ಗಗಳಲ್ಲಿ ಮತ್ತೆ ಸೇವೆ ಪ್ರಾರಂಭಿಸುತ್ತೇವೆ’ ಎಂದು ಅಧಿಕಾರಿಗಳು ಹೇಳಿದರು.

‘ಪ್ರತಿ ಫೀಡರ್‌ ಬಸ್‌ನಿಂದ ದಿನವೊಂದಕ್ಕೆ ಬರುತ್ತಿರುವ ವರಮಾನ ₹5,000ಕ್ಕಿಂತ ಕಡಿಮೆ. ₹7,000ಕ್ಕಿಂತ ಕಡಿಮೆ ವರಮಾನ ಬಂದರೆ, ಸೇವೆ ಒದಗಿಸುವುದು ಕಷ್ಟ. ಕೆಲವೊಂದು ಮೆಟ್ರೊ ನಿಲ್ದಾಣದ ಬಳಿ ಐದು ನಿಮಿಷವೂ ಬಸ್‌ ನಿಲ್ಲಿಸಲು ಸಾಧ್ಯವಾಗುವುದಿಲ್ಲ. ಬೈಯಪ್ಪನಹಳ್ಳಿಯಿಂದ ಐಟಿಪಿಎಲ್‌ ಮಾರ್ಗವೊಂದನ್ನು ಹೊರತುಪಡಿಸಿ ಎಲ್ಲ ಮಾರ್ಗಗಳಲ್ಲಿ ಸಂಚರಿಸುತ್ತಿರುವ ಫೀಡರ್‌ ಬಸ್‌ಗಳು ನಷ್ಟದಲ್ಲಿಯೇ ಸಾಗುತ್ತಿವೆ’ ಎಂದು ಮಾಹಿತಿ ನೀಡಿದರು.

ಫೀಡರ್‌ ಸೇವೆ ಪ್ರಾರಂಭ: ಎಂ.ಜಿ.ರಸ್ತೆ ವೆುಟ್ರೊ ರೈಲು ನಿಲ್ದಾಣ– ಬೈಯಪ್ಪನಹಳ್ಳಿ ನಡುವೆ ಮೊದಲ ವೆುಟ್ರೊ ಸಂಚಾರ 2011ರಲ್ಲಿ ಆರಂಭವಾಗಿತ್ತು. ಮರುದಿನದಿಂದ ಬಿಎಂಟಿಸಿ ಫೀಡರ್ ಬಸ್ ಸೇವೆ ಆರಂಭಿಸಿತ್ತು. 6 ಮೆಟ್ರೊ ನಿಲ್ದಾಣಗಳಿಗೆ 24 ಮೆಟ್ರೊ ಫೀಡರ್ ಬಸ್‌ಗಳು ಸಂಚರಿಸಿದ್ದವು. ಬಳಿಕ ಅವುಗಳ ಸಂಖ್ಯೆ ಹೆಚ್ಚಿಸಲಾಗಿತ್ತು. ಪ್ರತಿ 10 ನಿಮಿಷಗಳ ಅಂತರದಲ್ಲಿ 1,248 ಟ್ರಿಪ್‌ಗಳ ಮೂಲಕ ಒಟ್ಟು 60 ಬಸ್‌ಗಳು ಸೇವೆ ಒದಗಿಸಿದ್ದವು. ಸ್ಪಂದನೆ ಸಿಗದ ಕಾರಣ ಸಂಖ್ಯೆ ಕಡಿಮೆ ಮಾಡಲಾಗಿತ್ತು. ‘ನಮ್ಮ ಮೆಟ್ರೊ’ ಮೊದಲನೇ ಹಂತದಲ್ಲಿ ಪೂರ್ಣ ಪ್ರಮಾಣದಲ್ಲಿ ರೈಲು ಸಂಚಾರ ಶುರುವಾದ ಬಳಿಕ ಬಸ್‌ಗಳ ಸಂಖ್ಯೆ ಹೆಚ್ಚಿಸಲಾಗಿತ್ತು.
***
ಅಂಕಿಅಂಶ

₹18ಕೋಟಿ
ಫೀಡರ್‌ ಬಸ್‌ಗಳಿಂದ ಬಿಎಂಟಿಸಿಗೆ ವಾರ್ಷಿಕ ಅಂದಾಜು ನಷ್ಟ

2011
ಮೊದಲ ಫೀಡರ್‌ ಸೇವೆ ಆರಂಭ
**
ಮೆಟ್ರೊ ನಿಗಮದಿಂದಲೇ ಫೀಡರ್‌ ಬಸ್‌ಗಳನ್ನು ಪ್ರಾರಂಭಿಸುವ ಯಾವುದೇ ಯೋಜನೆಗಳಿಲ್ಲ. ಮೆಟ್ರೊ ಮಾರ್ಗ ವಿಸ್ತರಣೆ  ನಮ್ಮ ಸದ್ಯದ ಗುರಿ
–ಮಹೇಂದ್ರ ಜೈನ್‌, ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ
**

ಬಸ್‌ಗಳ ಮಾರ್ಗಗಳ  ಪರಿಷ್ಕರಣೆ ನಿಯಮಿತವಾಗಿ ನಡೆಯುತ್ತಿರುತ್ತದೆ. ಅಗತ್ಯವಿರುವ ಕಡೆ ಹೆಚ್ಚು ಬಸ್‌ಗಳ ಸೇವೆ ಒದಗಿಸುತ್ತೇವೆ
–ವಿ. ಪೊನ್ನುರಾಜ್‌, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.