ADVERTISEMENT

ಸರ್ಜಾಪುರ ರಸ್ತೆ ವಿಸ್ತರಣೆ: ಭೂಸ್ವಾಧೀನಕ್ಕೆ ಸಿದ್ಧತೆ

ಇಬ್ಬಲೂರು ಜಂಕ್ಷನ್‌ನಿಂದ ಚಿಕ್ಕಕನ್ನಹಳ್ಳಿಯ ರೈಲ್ವೆ ಮೇಲ್ಸೇತುವೆ ತನಕ ಟೆಂಡರ್‌ ಶ್ಯೂರ್‌ ಮಾದರಿಯಲ್ಲಿ ಅಭಿವೃದ್ಧಿ: 80 ಅಡಿಯಿಂದ 150 ಅಡಿಗೆ ಹೆಚ್ಚಳ

ಎನ್.ನವೀನ್ ಕುಮಾರ್
Published 31 ಜನವರಿ 2018, 19:30 IST
Last Updated 31 ಜನವರಿ 2018, 19:30 IST
ಸರ್ಜಾಪುರ ರಸ್ತೆ ವಿಸ್ತರಣೆ: ಭೂಸ್ವಾಧೀನಕ್ಕೆ ಸಿದ್ಧತೆ
ಸರ್ಜಾಪುರ ರಸ್ತೆ ವಿಸ್ತರಣೆ: ಭೂಸ್ವಾಧೀನಕ್ಕೆ ಸಿದ್ಧತೆ   

ಬೆಂಗಳೂರು: ಸರ್ಜಾಪುರ ರಸ್ತೆಯ ಇಬ್ಬಲೂರು ಜಂಕ್ಷನ್‌ನಿಂದ ಚಿಕ್ಕಕನ್ನಹಳ್ಳಿಯ ರೈಲ್ವೆ ಮೇಲ್ಸೇತುವೆಯವರೆಗಿನ ಭಾಗವನ್ನು 150 ಅಡಿಗೆ ವಿಸ್ತರಿಸಲು ಬಿಬಿಎಂಪಿ ರಸ್ತೆ ಮೂಲಸೌಕರ್ಯ ವಿಭಾಗ ಸಿದ್ಧತೆ ನಡೆಸಿದೆ.

ಈ ಯೋಜನೆಯ ಟೆಂಡರ್‌ ಪ್ರಕ್ರಿಯೆಗೆ ನಗರಾಭಿವೃದ್ಧಿ ಇಲಾಖೆ ಅನುಮೋದನೆ ನೀಡಿದೆ. ರಸ್ತೆ ವಿಸ್ತರಣೆಗೆ ಅಗತ್ಯವಿರುವ ಭೂಮಿಯನ್ನು ಅಭಿವೃದ್ಧಿ ಹಕ್ಕುಗಳ ಹಸ್ತಾಂತರ (ಟಿಡಿಆರ್‌) ನಿಯಮಾವಳಿಗಳನ್ವಯ ಸ್ವಾಧೀನಪಡಿಸಲು ಪಾಲಿಕೆ ಮುಂದಾಗಿದೆ. ಭೂಸ್ವಾಧೀನ ಪ್ರಕ್ರಿಯೆಗೆ ಶೀಘ್ರದಲ್ಲೇ ಚಾಲನೆ ನೀಡಲಾಗುತ್ತದೆ.

ರಸ್ತೆಯ ವಿಶೇಷತೆಗಳು: ಟೆಂಡರ್‌ ಶ್ಯೂರ್‌ ಮಾದರಿಯಲ್ಲಿ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಒಂದು ಪಥದಲ್ಲಿ 11 ಮೀಟರ್‌ ಮುಖ್ಯರಸ್ತೆ, 1.2 ಮೀಟರ್‌ ಉದ್ದದ ಕಾಲುವೆ, 5.5 ಮೀಟರ್‌ ಉದ್ದದ ಸರ್ವಿಸ್‌ ರಸ್ತೆ ಹಾಗೂ 3 ಮೀಟರ್‌ ಪಾದಚಾರಿ ಮಾರ್ಗ ಬರುತ್ತದೆ. ಪಾದಚಾರಿ ಮಾರ್ಗದಲ್ಲಿ ಕುಡಿಯುವ ನೀರಿನ ಹಾಗೂ ತ್ಯಾಜ್ಯ ನೀರಿನ ಜಾಲ, ಅನಿಲ ಕೊಳವೆ ಹಾಗೂ ಒಎಫ್‌ಸಿಗೆ ವ್ಯವಸ್ಥೆ ಮಾಡಲಾಗುತ್ತದೆ. ಅದೇ ರೀತಿ ಮತ್ತೊಂದು ಪಥವನ್ನೂ ನಿರ್ಮಿಸಲಾಗುತ್ತದೆ ಎಂದು ರಸ್ತೆ ಮೂಲಸೌಕರ್ಯ ವಿಭಾಗದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಜಲಮಂಡಳಿ, ಬೆಸ್ಕಾಂ ಹಾಗೂ ಒಎಫ್‌ಸಿಯವರು ರಸ್ತೆ ಅಗೆಯುವುದನ್ನು ತಪ್ಪಿಸುವ ಉದ್ದೇಶದಿಂದ ಈ ರೀತಿ ವಿನ್ಯಾಸ ಮಾಡಲಾಗುತ್ತದೆ. ಮಳೆ ನೀರು ಸರಾಗವಾಗಿ ಕಾಲುವೆಗೆ ಹರಿದು ಹೋಗುವುದರಿಂದ ರಸ್ತೆಯಲ್ಲಿ ಗುಂಡಿ ಬೀಳುವುದು ಕಡಿಮೆ ಆಗಲಿದೆ. ಕಾಲುವೆಯ ಹೂಳನ್ನು ಸುಲಭವಾಗಿ ತೆರವುಗೊಳಿಸಲು ಸಾಧ್ಯವಾಗುವ ರೀತಿಯಲ್ಲಿ ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಿದರು.

ಇನ್ಫೊಸಿಸ್‌, ವಿಪ್ರೊದಂತಹ ಕಂಪನಿಗಳ ಕಚೇರಿಗಳು ಸರ್ಜಾಪುರ ರಸ್ತೆಯ ಸಮೀಪ ಇವೆ. ಇಲ್ಲಿ ಸಾವಿರಾರು ಮಂದಿ ಕೆಲಸ ಮಾಡುತ್ತಾರೆ. ಇಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತವೆ. ಇದರಿಂದ ವಾಹನ ದಟ್ಟಣೆ ಹೆಚ್ಚಾಗಿದೆ ಎಂದು ಖಾಸಗಿ ಕಂಪನಿಯ ಉದ್ಯೋಗಿ ಎಚ್‌.ಕೆ.ಶ್ರೀನಾಥ್‌ ತಿಳಿಸಿದರು.

ಸಿಲ್ಕ್‌ಬೋರ್ಡ್‌ನಿಂದ ಟಿನ್‌ಫ್ಯಾಕ್ಟರಿವರೆಗಿನ ಹೊರವರ್ತುಲ ರಸ್ತೆ ಹಾಗೂ ಸರ್ಜಾಪುರ ರಸ್ತೆಯಲ್ಲಿ ಬೆಳಿಗ್ಗೆಯಿಂದ ರಾತ್ರಿವರೆಗೆ ವಾಹನ ದಟ್ಟಣೆ ಇರುತ್ತದೆ. ಕೆಲಸಕ್ಕೆ ನಿಗದಿತ ಸಮಯಕ್ಕೆ ಹೋಗಲು ಸಾಧ್ಯವಾಗುವುದಿಲ್ಲ. ಕಾಮಗಾರಿಯನ್ನು ತ್ವರಿತಗತಿಯಲ್ಲಿ ಕೈಗೆತ್ತಿಕೊಳ್ಳಬೇಕು ಎಂದು ಮಳಿಗೆಯೊಂದರ ನೌಕರ ಬಿ.ಕೆ.ರಾಜೇಶ್‌ ಒತ್ತಾಯಿಸಿದರು.

100 ಅಡಿ ಸಾಕು

ಇಬ್ಬಲೂರು ಜಂಕ್ಷನ್‌– ಚಿಕ್ಕಕನ್ನಹಳ್ಳಿವರೆಗಿನ ರಸ್ತೆಯನ್ನು 80 ಅಡಿಯಿಂದ 100 ಅಡಿಗೆ ವಿಸ್ತರಿಸಿದರೆ ಸಾಕು ಎಂಬುದು ಸ್ಥಳೀಯ ನಿವಾಸಿಗಳ ವಾದ.

ನ್ಯಾಯಾಲಯಕ್ಕೆ ಮೊರೆ: ಎಚ್ಚರಿಕೆ

ರಸ್ತೆ ವಿಸ್ತರಣೆಗೆ ಸ್ವಾಧೀನಪಡಿಸಿಕೊಳ್ಳುವ ಭೂಮಿಗೆ ಅಭಿವೃದ್ಧಿ ಹಕ್ಕುಗಳ ಬದಲಿಗೆ ಪರಿಹಾರ ನೀಡುವಂತೆ ಭೂ ಮಾಲೀಕರು ಒತ್ತಾಯಿಸಿದ್ದಾರೆ.

ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಅವರು ಭೂಮಾಲೀಕರೊಂದಿಗೆ ಸಭೆ ನಡೆಸಿದ್ದರು. ಈ ವೇಳೆ, ಭೂಮಾಲೀಕರು ಪರಿಹಾರಕ್ಕೆ ಪಟ್ಟು ಹಿಡಿದರೆ, ಟಿಡಿಆರ್‌ ನೀಡುವ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪಾಲಿಕೆ ಸ್ಪಷ್ಟಪಡಿಸಿತ್ತು.

‘248 ಕುಟುಂಬಗಳು ಜಾಗ ಕಳೆದುಕೊಳ್ಳಲಿದ್ದು, 113 ಕುಟುಂಬಗಳು ಅಭಿವೃದ್ಧಿ ಹಕ್ಕುಗಳ ಬದಲಿಗೆ ನಗದು ನೀಡುವಂತೆ ಒತ್ತಾಯಿಸುತ್ತಿವೆ. ಪರಿಹಾರ ನೀಡದಿದ್ದರೆ ಕೋರ್ಟ್‌ ಮೊರೆ ಹೋಗುತ್ತೇವೆ’ ಎಂದು ಸರ್ಜಾಪುರ ರಸ್ತೆ ವಿಸ್ತರಣೆ ದೌರ್ಜನ್ಯ ತಡೆ ಸಮಿತಿಯ ಪ್ರತಿನಿಧಿ ಬಿ.ವಿ.ರಾಮಚಂದ್ರ ರೆಡ್ಡಿ ಹೇಳಿದ್ದಾರೆ.

ಅಂಕಿ–ಅಂಶ

80 ಅಡಿ - ಇಬ್ಬಲೂರು ಜಂಕ್ಷನ್‌– ಚಿಕ್ಕಕನ್ನಹಳ್ಳಿವರೆಗಿನ ರಸ್ತೆಯ ಪ್ರಸ್ತುತ ಅಗಲ

4.70 ಕಿ.ಮೀ. - ವಿಸ್ತರಣೆ ಮಾಡಲು ಉದ್ದೇಶಿಸಿರುವ ಉದ್ದ

₹84.5 ಕೋಟಿ - ಯೋಜನೆಯ ಅಂದಾಜು ವೆಚ್ಚ

20 ಎಕರೆ 5 ಗುಂಟೆ - ಸ್ವಾಧೀನ ಪಡಿಸಿಕೊಳ್ಳಲು ಉದ್ದೇಶಿಸಿರುವ ಭೂಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.