ADVERTISEMENT

ಸತ್ಯನಾರಾಯಣರಾವ್‌ಗೆ ಬೀಳ್ಕೊಡುಗೆ: ರೂಪಾ ವಿರೋಧ

​ಪ್ರಜಾವಾಣಿ ವಾರ್ತೆ
Published 31 ಜನವರಿ 2018, 19:30 IST
Last Updated 31 ಜನವರಿ 2018, 19:30 IST
ಸತ್ಯನಾರಾಯಣರಾವ್‌ಗೆ ಬೀಳ್ಕೊಡುಗೆ: ರೂಪಾ ವಿರೋಧ
ಸತ್ಯನಾರಾಯಣರಾವ್‌ಗೆ ಬೀಳ್ಕೊಡುಗೆ: ರೂಪಾ ವಿರೋಧ   

ಬೆಂಗಳೂರು: ಕಾರಾಗೃಹ ಇಲಾಖೆಯ ನಿವೃತ್ತ ಡಿಜಿಪಿ ಎಚ್‌.ಎನ್‌. ಸತ್ಯನಾರಾಯಣ ರಾವ್‌ ಅವರಿಗೆ ಬೀಳ್ಕೊಡುಗೆ ನೀಡುವುದಕ್ಕೆ ಗೃಹ ರಕ್ಷಕ ದಳದ ಹೆಚ್ಚುವರಿ ಕಮಾಂಡೆಂಟ್ ಡಿ. ರೂಪಾ ವಿರೋಧ ವ್ಯಕ್ತಪಡಿಸಿದರು.

ಇತ್ತೀಚೆಗೆ ನಿವೃತ್ತರಾದ ಐಪಿಎಸ್‌ ಅಧಿಕಾರಿಗಳಿಗಾಗಿ ‘ಕರ್ನಾಟಕ ಐಪಿಎಸ್‌ ಅಧಿಕಾರಿಗಳ ಒಕ್ಕೂಟ’ ನಗರದಲ್ಲಿ ಬುಧವಾರ ಬೀಳ್ಕೊಡುಗೆ ಕಾರ್ಯಕ್ರಮ ಆಯೋಜಿಸಿತ್ತು. ಪೊಲೀಸ್‌ ತರಬೇತಿ ವಿಭಾಗದ ಡಿಜಿಪಿ ಪ್ರೇಮ್‌ ಶಂಕರ್ ಮೀನಾ ಹಾಗೂ ಸತ್ಯನಾರಾಯಣ ರಾವ್‌ ಅವರನ್ನು ಸನ್ಮಾನಿಸಲು ಉದ್ದೇಶಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಬಂದಿದ್ದ ರೂಪಾ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದರು.

‘ರಾವ್‌ ಬಂದರೆ, ವೇದಿಕೆಯಲ್ಲೇ ಅವರ ಜತೆ ಮಾತನಾಡಲು ಅವಕಾಶ ನೀಡಬೇಕು’ ಎಂದು ರೂಪಾ ಪಟ್ಟು ಹಿಡಿದಿದ್ದರು. ಆದರೆ, ರಾವ್‌ ಕಾರ್ಯಕ್ರಮಕ್ಕೆ ಬರಲೇ ಇಲ್ಲ. ಮೀನಾ ಅವರನ್ನಷ್ಟೇ ಸನ್ಮಾನಿಸಿ ಬೀಳ್ಕೂಡಲಾಯಿತು.

ADVERTISEMENT

ಸಂದೇಶ ಕಳುಹಿಸಿದ್ದ ರೂಪಾ: ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ಒಕ್ಕೂಟದ ಪದಾಧಿಕಾರಿಗಳ ವಾಟ್ಸ್‌ಆ್ಯಪ್‌ ಗ್ರೂಪ್‌ಗೆ ಸಂದೇಶ ಕಳುಹಿಸಿದ್ದ ರೂಪಾ, ‘ಸತ್ಯನಾರಾಯಣರಾವ್‌ ಅವರು ಸೇವಾ ಅವಧಿಯಲ್ಲಿ ಐಪಿಎಸ್ ಅಧಿಕಾರಿಗಳ ಹಿತ ಕಾಪಾಡಿಲ್ಲ. ಅವರ ಈ ವರ್ತನೆ ವಿರುದ್ಧ ನನ್ನ ಪ್ರತಿಭಟನೆ’ ಎಂದಿದ್ದಾರೆ.

‘ಕಾರಾಗೃಹಗಳ ಇಲಾಖೆಯ ಡಿಐಜಿ ಹುದ್ದೆಗೆ ನಾನು ವರ್ಗಾವಣೆ ಆಗಿದ್ದೆ. ಎಐಜಿ ಬಳಿ ವರದಿ ಮಾಡಿಕೊಳ್ಳುವಂತೆ ಡಿಜಿಪಿ ಹೇಳಿದ್ದರು. ಅದು ನಿಯಮಬಾಹಿರವೆಂದು ವಾದಿಸಿದಾಗ, ನನ್ನದೇ ತಪ್ಪು ಎಂಬಂತೆ ನಡೆಸಿಕೊಂಡರು.’

‘ಎಸ್‌ಐ ದರ್ಜೆ ಅಧಿಕಾರಿಯಾಗಿ ನೇಮಕಗೊಂಡ ಅಧಿಕಾರಿಯು ಇಲಾಖೆಯ ಎಐಜಿ ಆಗಿದ್ದಾರೆ. ಡಿಐಜಿಯಿಂದ ಎಐಜಿ ಆಗಲು ಐಪಿಎಸ್ ಅಧಿಕಾರಿಗೆ ಕನಿಷ್ಠ 4 ವರ್ಷಗಳು ಬೇಕು. ಆದರೆ, ಎಸ್ಐ ಆಗಿದ್ದವರು ಡಿಐಜಿ ಹುದ್ದೆಯಿಂದ 3 ವರ್ಷದಲ್ಲೇ ಬಡ್ತಿ ಪಡೆದಿದ್ದಾರೆ. ಅವರ ಬಳಿ ನಾನು ವರದಿ ಮಾಡಿಕೊಳ್ಳಬಹುದೆ? ಇಂಥ ಸೂಚನೆ ನೀಡುವ ಮೂಲಕ ರಾವ್‌ ನನ್ನ ಹಿತಕ್ಕೆ ಧಕ್ಕೆ ತಂದಿದ್ದಾರೆ’ ಎಂದು ಸಂದೇಶದಲ್ಲಿ ಬರೆದಿದ್ದಾರೆ.

‘ಐಪಿಎಸ್ ಅಧಿಕಾರಿಗಳ ಹಿತ ಕಾಪಾಡುವಂತೆ ಅವರ ಬಳಿ ಕಳಕಳಿಯಿಂದ ವಿನಂತಿಸಿದ್ದೆ. ನನ್ನ ಮನವಿಯನ್ನು ಅವರು ಕಿವಿಗೆ ಹಾಕಿಕೊಳ್ಳದೆ ನನ್ನನ್ನೇ ಅಪರಾಧಿ ಸ್ಥಾನದಲ್ಲಿರಿಸಿದರು.’

‘ಪ್ರತಿ ವರ್ಷ 10ರಿಂದ 11 ಐಪಿಎಸ್‌ ಅಧಿಕಾರಿಗಳು ರಾಜ್ಯಕ್ಕೆ ಬರುತ್ತಾರೆ. ಹಿರಿಯ ಅಧಿಕಾರಿಗಳು ಈ ರೀತಿ ವರ್ತಿಸಿದರೆ ಅವರ ಪರಿಸ್ಥಿತಿ ಏನಾಗಬೇಕು? ಇದಕ್ಕೆ ಒಕ್ಕೂಟವೇ ಸೂಕ್ತ ಪರಿಹಾರ ಕಂಡುಕೊಳ್ಳಬೇಕು’ ಎಂದು ರೂಪಾ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.