ADVERTISEMENT

ಭೂ ನ್ಯಾಯಮಂಡಳಿ ಮಾಜಿ ಸದಸ್ಯನ ಬಂಧನ, ಬಿಡುಗಡೆ

ಸುಳ್ಳು ಪ್ರಮಾಣಪತ್ರ ಸಲ್ಲಿಕೆ: ಹೈಕೋರ್ಟ್‌ ಕೆಂಡಾಮಂಡಲ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2018, 19:30 IST
Last Updated 1 ಫೆಬ್ರುವರಿ 2018, 19:30 IST

ಬೆಂಗಳೂರು: ‘ಜಮೀನು ವ್ಯಾಜ್ಯವೊಂದಕ್ಕೆ ಸಂಬಂಧಿಸಿದಂತೆ ಕೋರ್ಟ್‌ಗೆ ಸುಳ್ಳು ದಾಖಲೆ ಸಲ್ಲಿಸಲಾಗಿದೆ’ ಎಂಬ ಆರೋಪದಡಿ ಹೊಸಕೋಟೆಯ ಭೂ ನ್ಯಾಯಮಂಡಳಿಯ ಮಾಜಿ ಸದಸ್ಯರೊಬ್ಬರನ್ನು ಹೈಕೋರ್ಟ್‌ ಏಕಸದಸ್ಯ ನ್ಯಾಯಪೀಠ ಗುರುವಾರ ಪೊಲೀಸ್ ವಶಕ್ಕೆ ಒಪ್ಪಿಸಿ ಆದೇಶಿಸಿತು.

ಆದರೆ, ಕೆಲವೇ ಗಂಟೆಗಳಲ್ಲಿ ನ್ಯಾಯಮೂರ್ತಿಗಳ ಆದೇಶವನ್ನು ಪರಿಶೀಲಿಸಿದ ಪೊಲೀಸರು ಹಾಗೂ ಹೈಕೋರ್ಟ್‌ ಆಡಳಿತ ವಿಭಾಗದ ರಿಜಿಸ್ಟ್ರಾರ್ ಚಂದ್ರಶೇಖರ ರೆಡ್ಡಿ, ವಶಕ್ಕೆ ಪಡೆದ ವ್ಯಕ್ತಿಯನ್ನು ಬಿಡುಗಡೆ ಮಾಡಿದರು.

ಪ್ರಕರಣವೇನು: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯ ಅಪ್ಪಸಂದ್ರ ಗ್ರಾಮದ ಸರ್ವೇ ನಂ 29ರ ಐದು ಎಕರೆ ಜಮೀನು ಮಾಲೀಕತ್ವದ ಬಗ್ಗೆ ವಿ.ರಾಜಣ್ಣ ಮತ್ತು ಕರ್ನಾಟಕ ಭೂ ನ್ಯಾಯಮಂಡಳಿಯ ಮಾಜಿ ಸದಸ್ಯ ಎಂ.ನಾರಾಯಣ ಸ್ವಾಮಿ ನಡುವೆ ವ್ಯಾಜ್ಯ ನಡೆಯುತ್ತಿದೆ.

ADVERTISEMENT

ಈ ಸಂಬಂಧ ವಿ.ರಾಜಣ್ಣ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದು, ಅದರಲ್ಲಿ ನಾರಾಯಣ ಸ್ವಾಮಿ ಪ್ರತಿವಾದಿಯಾಗಿದ್ದಾರೆ. ಈ ರಿಟ್‌ ಅರ್ಜಿಗೆ ನಾರಾಯಣ ಸ್ವಾಮಿ ಆಕ್ಷೇಪಣೆ ಸಲ್ಲಿಸಿದ್ದರು. ಆದರೆ, ಈ ಆಕ್ಷೇಪಣೆ ಸುಳ್ಳು ಅಂಶಗಳಿಂದ ಕೂಡಿದೆ ಎಂದು ಸಿಟ್ಟಿಗೆದ್ದ ನ್ಯಾಯಮೂರ್ತಿ ಎಸ್.ಎನ್‌.ಸತ್ಯನಾರಾಯಣ ಅವರು, ನಾರಾಯಣ ಸ್ವಾಮಿಯನ್ನು ಹೈಕೋರ್ಟ್ ಪೊಲೀಸ್ ವಶಕ್ಕೆ ಒಪ್ಪಿಸಿ ಆದೇಶಿಸಿದರು. ನಾರಾಯಣ ಸ್ವಾಮಿ ವಿರುದ್ಧ ಎಫ್‌ಐಆರ್ ದಾಖಲಿಸಿ ಮುಂದಿನ ಕ್ರಮ ಜರುಗಿಸುವಂತೆಯೂ ಆದೇಶಿಸಿದರು.

ತಕ್ಷಣ ನಾರಾಯಣ ಸ್ವಾಮಿಯನ್ನು ವಶಕ್ಕೆ ಪಡೆದ ಪೊಲೀಸರು, ತದನಂತರ ಆದೇಶವನ್ನು ಪರಿಶೀಲಿಸಿ ನಿರ್ದಿಷ್ಟ ಆರೋಪಗಳು ಇಲ್ಲವೆಂಬ ಕಾರಣಕ್ಕೆ ಅವರ ಪರ ವಕೀಲರಿಂದ ಮುಚ್ಚಳಿಕೆ ಬರೆಸಿಕೊಂಡು ಎರಡು ದಿನಗಳ ನಂತರ ಹಾಜರಾಗುವಂತೆ ತಿಳಿಸಿ ಬಿಡುಗಡೆ ಮಾಡಿದರು.

ಕಳವಳ: ವಿಚಾರಣೆ ವೇಳೆ ನ್ಯಾಯಮೂರ್ತಿಗಳು, ‘ಕಂದಾಯ ಇಲಾಖೆಯಲ್ಲಿ ದಾಖಲೆಗಳ ತಿರುಚುವಿಕೆ, ಸುಳ್ಳು ಕಂತೆಗಳ ಸಲ್ಲಿಕೆ ಹೆಚ್ಚುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು. ‘ಕೋರ್ಟ್‌ಗೆ ಸುಳ್ಳು ದಾಖಲೆ ಕೊಡುವ ಇವರ ಧೈರ್ಯ ಎಷ್ಟಿದೆ ನೋಡಿ’ ಎಂದು ಆತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.