ADVERTISEMENT

ಸ್ನೇಹಿತೆಗೆ ಪಿಸ್ತೂಲ್‌ ತೋರಿಸಿದ್ದವನ ಬಂಧನ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2018, 19:30 IST
Last Updated 1 ಫೆಬ್ರುವರಿ 2018, 19:30 IST

ಬೆಂಗಳೂರು: ಹುಟ್ಟುಹಬ್ಬದ ಔತಣಕೂಟಕ್ಕೆ ಬಂದಿದ್ದ ಸ್ನೇಹಿತೆಗೆ ಪಿಸ್ತೂಲ್‌ ತೋರಿಸಿ ಬೆದರಿಸಿದ್ದ ನಿತಿನ್ ಎಂಬಾತನನ್ನು ಮಾರತ್ತಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಿಹಾರದ ಆತ, ಎಂಜಿನಿಯರಿಂಗ್‌ ವ್ಯಾಸಂಗಕ್ಕಾಗಿ ನಗರಕ್ಕೆ ಬಂದಿದ್ದ. ಕಾಲೇಜು ಅರ್ಧಕ್ಕೆ ಬಿಟ್ಟು ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದ. ಸಾಯಿ ಲೇಔಟ್‌ನಲ್ಲಿ ವಾಸವಿದ್ದ. ತನ್ನದೇ ಹುಟ್ಟುಹಬ್ಬದ ಆಚರಣೆ ವೇಳೆ ಈ ಕೃತ್ಯ ಎಸಗಿದ್ದಾನೆ.

‘ಆರೋಪಿಯು ಬಿಹಾರದ ಬಿಜೆಪಿ ಮುಖಂಡರೊಬ್ಬರ ಮಗನೆಂದು ಗೊತ್ತಾಗಿದೆ. ಆತನಿಂದ ಪಿಸ್ತೂಲ್‌ ಜಪ್ತಿ ಮಾಡಿದ್ದೇವೆ’ ಎಂದು ಪೊಲೀಸರು ತಿಳಿಸಿದರು.

ADVERTISEMENT

ಆರೋಪಿಯು ತಾನು ವಾಸವಿದ್ದ ಮನೆಯಲ್ಲೇ ಬುಧವಾರ ಹುಟ್ಟುಹಬ್ಬದ ಔತಣಕೂಟ ಇಟ್ಟುಕೊಂಡು ಸ್ನೇಹಿತರನ್ನು ಆಹ್ವಾನಿಸಿದ್ದ. ಸ್ನೇಹಿತೆ ಗರೀಮಾ ಸೇರಿದಂತೆ 16 ಮಂದಿ ಔತಣಕೂಟಕ್ಕೆ ಬಂದಿದ್ದರು. ಕೇಕ್‌ ಕತ್ತರಿಸಿದ ಬಳಿಕ ನೃತ್ಯ ಮಾಡಿ ಅವರೆಲ್ಲ ಸಂಭ್ರಮಿಸಿದ್ದರು ಎಂದು ಪೊಲೀಸರು ತಿಳಿಸಿದರು.

ತಡರಾತ್ರಿ ಸ್ನೇಹಿತರು ಹರಟೆಯಲ್ಲಿ ತೊಡಗಿದ್ದರು. ಅದೇ ವೇಳೆ ಗರೀಮಾ ಹಾಗೂ ನಿತಿನ್‌ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಕೊಠಡಿಗೆ ಹೋಗಿದ್ದ ಆರೋಪಿ, ಅಲ್ಲಿದ್ದ ನಾಡ ಪಿಸ್ತೂಲ್‌ ತಂದು ಗರೀಮಾರ ಹಣೆಗಿಟ್ಟು ಗುಂಡು ಹಾರಿಸುವುದಾಗಿ ಬೆದರಿಸಿದ್ದ.

ಹೆದರಿದ ಯುವತಿಯು ಪೊಲೀಸ್‌ ನಿಯಂತ್ರಣ ಕೊಠಡಿ ‘ನಮ್ಮ 100‘ಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಮನೆಗೆ ಹೋದ ಸಿಬ್ಬಂದಿ, ನಿತಿನ್‍ನನ್ನು ಬಂಧಿಸಿದರು ಎಂದು ಪೊಲೀಸರು ಹೇಳಿದರು.

₹10 ಸಾವಿರಕ್ಕೆ ಖರೀದಿ: ನಾಡ್‌ ಪಿಸ್ತೂಲ್‌ ಬಗ್ಗೆ ಹೇಳಿಕೆ ನೀಡಿರುವ ಆರೋಪಿ, ‘ಬಿಹಾರದ ವ್ಯಕ್ತಿಯೊಬ್ಬರಿಗೆ ₹10 ಸಾವಿರ ಕೊಟ್ಟು ಪಿಸ್ತೂಲು ಖರೀದಿಸಿದ್ದೇನೆ’ ಎಂದಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.