ADVERTISEMENT

ಸಂತೋಷ್ ಹತ್ಯೆ ಖಂಡಿಸಿ ಬಿಜೆಪಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2018, 19:58 IST
Last Updated 2 ಫೆಬ್ರುವರಿ 2018, 19:58 IST
ಬಿ.ಎನ್‌. ವಿಜಯಕುಮಾರ್‌, ಆರ್‌. ಅಶೋಕ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಶೋಭಾ ಕರಂದ್ಲಾಜೆ, ಪಿ.ಎನ್‌. ಸದಾಶಿವ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಬಿ.ಎನ್‌. ವಿಜಯಕುಮಾರ್‌, ಆರ್‌. ಅಶೋಕ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಶೋಭಾ ಕರಂದ್ಲಾಜೆ, ಪಿ.ಎನ್‌. ಸದಾಶಿವ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.   

ಬೆಂಗಳೂರು: ಬಿಜೆಪಿ ಕಾರ್ಯಕರ್ತ ಕೆ.ಸಂತೋಷ್ ಹತ್ಯೆ ಪ್ರಕರಣನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ಒಪ್ಪಿಸುವಂತೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಆನಂದ ರಾವ್ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ ಅವರು, ರಾಜ್ಯದಲ್ಲಿ ನಡೆಯುತ್ತಿರುವ ಸಂಘಪರಿವಾರದ ಹಾಗೂ ಹಿಂದೂ ಕಾರ್ಯಕರ್ತರ ಹತ್ಯೆಗೆ ಕಾಂಗ್ರೆಸ್‌ ಪರೋಕ್ಷವಾಗಿ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದರು.

‘ಸಂತೋಷ್‌ ಕೊಲೆ ವೈಯಕ್ತಿಕ ಕಾರಣಕ್ಕೆ ನಡೆದಿದೆ. ಮತೀಯ ಹಿನ್ನೆಲೆ ಇಲ್ಲ’ ಎಂಬ ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿಕೆಗೆ ಸಂಸದೆ ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಸ್ಕ್ರೂ ಡ್ರೈವರ್‌ನಿಂದ ಸುಮ್ಮನೆ ಚುಚ್ಚಿದ್ದಕ್ಕೆ ಸತ್ತಿದ್ದಾರೆ ಎಂದೂ ಹೇಳಿಕೆ ನೀಡಿದ್ದಾರೆ. ಸುಮ್ಮನೆ ಚುಚ್ಚಿದರೆ ಸಾಯಲು ಸಾಧ್ಯವೇ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಇದೇ ದಾಟಿಯಲ್ಲಿ ಮಾತನಾಡಿದ್ದಾರೆ. ತನಿಖೆಯ ದಿಕ್ಕು ತಪ್ಪಿಸಲು ಇಂಥ ಹೇಳಿಕೆಗಳನ್ನು ನೀಡಿದ್ದಾರೆ’ ಎಂದು ಆರೋಪಿಸಿದರು.

₹50 ಲಕ್ಷ ಪರಿಹಾರಕ್ಕೆ ಆಗ್ರಹ: ‘ಸಂತೋಷ್ ಕುಟುಂಬಕ್ಕೆ ನೀಡಿರುವ ₹ 10 ಲಕ್ಷ ಪರಿಹಾರ ಸಾಲದು. ಅದನ್ನು ₹ 50 ಲಕ್ಷಕ್ಕೆ ಏರಿಸಬೇಕು. ಮೃತರ ಪತ್ನಿಗೆ ಸರ್ಕಾರಿ ನೌಕರಿ ನೀಡಬೇಕು’ ಎಂದು ಶಾಸಕ ಆರ್.ಅಶೋಕ ಒತ್ತಾಯಿಸಿದರು.

‘ಆರೋಪಿಗಳು ಸುಮ್ಮನೆ ಸ್ಕ್ರೂಡ್ರೈವರ್‌ನಿಂದ ಚುಚ್ಚಿದ್ದಾರೆ ಎಂದು ಗೃಹಸಚಿವರು ಹೇಳಿದ್ದಾರೆ. ಅವರ ಪ್ರಕಾರ ಮಚ್ಚಿನಿಂದ ಕೊಚ್ಚಿ ಕೊಲ್ಲಬೇಕಿತ್ತಾ’ ಎಂದು ಪ್ರಶ್ನಿಸಿದರು.

ಯು.ಟಿ.ಖಾದರ್ ನಿವಾಸದಲ್ಲಿ ಪಾರ್ಟಿ
ಸಿದ್ದರಾಮಯ್ಯ ಭೇಟಿ ನೀಡಿದ ಜಾಗದಲ್ಲೆಲ್ಲ ಹಿಂದೂ ಕಾರ್ಯಕರ್ತರ ಹತ್ಯೆ ನಡೆಯುತ್ತಿದೆ. ಸಂತೋಷ್ ಕುಟುಂಬಕ್ಕೆ ಸಾಂತ್ವನ ಹೇಳಬೇಕಿದ್ದ ಅವರು ಸಚಿವ ಯು.ಟಿ.ಖಾದರ್ ನಿವಾಸಕ್ಕೆ ಹೋಗಿ ಪಾರ್ಟಿ ಮಾಡಿದ್ದಾರೆ. ಜತೆಗೆ ನೃತ್ಯ ಮಾಡಿದ್ದಾರೆ. ಸಮೀಪದಲ್ಲೇ ಸಂತೋಷ್ ಮನೆ ಇದ್ದರೂ ಅಲ್ಲಿಗೆ ಹೋಗದೆ ಮಾನವೀಯತೆ ಮರೆತಿದ್ದಾರೆ ಎಂದು ಶೋಭಾ ಕರಂದ್ಲಾಜೆ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.