ADVERTISEMENT

ನೀರು, ವಿದ್ಯುತ್‌ ಪೂರೈಕೆ ಕಡಿತಕ್ಕೆ ಶಿಫಾರಸು

ಅಗ್ನಿ ಸುರಕ್ಷತಾ ಕ್ರಮ ಕೈಗೊಳ್ಳದ 60 ಪಬ್‌ಗಳು

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2018, 19:30 IST
Last Updated 3 ಫೆಬ್ರುವರಿ 2018, 19:30 IST

ಬೆಂಗಳೂರು: ಅಗ್ನಿ ಸುರಕ್ಷತಾ ಕ್ರಮ ಕೈಗೊಳ್ಳದ ನಗರದ 60 ಪಬ್‌ಗಳ ನೀರು ಹಾಗೂ ವಿದ್ಯುತ್‌ ಪೂರೈಕೆ ಕಡಿತಗೊಳಿಸುವಂತೆ ಬೆಸ್ಕಾಂ ಹಾಗೂ ಬಿಬಿಎಂಪಿ ಅಧಿಕಾರಿಗಳಿಗೆ ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆಯ ಅಧಿಕಾರಿಗಳು ಶಿಫಾರಸು ಮಾಡಿದ್ದಾರೆ.

ಮುಂಬೈ ಪಬ್‌ನಲ್ಲಿ ಸಂಭವಿಸಿದ್ದ ಅಗ್ನಿ ಅವಘಡದಿಂದ ಎಚ್ಚೆತ್ತಿದ್ದ ಅಗ್ನಿಶಾಮಕ ಇಲಾಖೆ ಅಧಿಕಾರಿಗಳು, ನಗರದ ಪಬ್‌, ಬಾರ್‌ ಹಾಗೂ ರೆಸ್ಟೊರೆಂಟ್‌ಗಳಲ್ಲಿ ಅಗ್ನಿ ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದ್ದರು. 83 ಪಬ್‌, ಬಾರ್‌ ಹಾಗೂ ರೆಸ್ಟೊರೆಂಟ್‌ಗಳಲ್ಲಿ ಸುರಕ್ಷತಾ ಕ್ರಮಗಳಿಲ್ಲದಿರುವುದು ಪತ್ತೆಯಾಗಿತ್ತು. ಅದೇ ಕಾರಣಕ್ಕೆ ನೋಟಿಸ್‌ ಸಹ ನೀಡಲಾಗಿತ್ತು.

ಅದಾದ ನಂತರವೂ 60 ಪಬ್‌ಗಳಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರಲಿಲ್ಲ. ಎರಡನೇ ಬಾರಿ ಪ‍ರಿಶೀಲನೆ ನಡೆಸಿದ ಅಧಿಕಾರಿಗಳು, ಪಬ್‌ಗಳ ನಿಯಮ ಉಲ್ಲಂಘನೆ ಬಗ್ಗೆ ವರದಿ ಸಿದ್ಧಪಡಿಸಿದ್ದರು. ಆ ವರದಿ ಆಧರಿಸಿ ಉನ್ನತ ಅಧಿಕಾರಿಗಳು, ಬೆಸ್ಕಾಂ ಹಾಗೂ ಬಿಬಿಎಂಪಿಗೆ ಶಿಫಾರಸು ಪತ್ರ ಬರೆದಿದ್ದಾರೆ. ನೀರು ಹಾಗೂ ವಿದ್ಯುತ್‌ ಪೂರೈಕೆಯನ್ನು ವಾರದೊಳಗೆ ಕಡಿತಗೊಳಿಸಿ ಅದರ ವರದಿಯನ್ನು ವಾಪಸ್‌ ಕಳುಹಿಸುವಂತೆ ಹೇಳಿದ್ದಾರೆ.

ADVERTISEMENT

‘ಪಬ್‌ಗಳ ನಿಯಮ ಉಲ್ಲಂಘನೆ ಪತ್ತೆ ಹಚ್ಚಿದ್ದೇವೆ. ಅವುಗಳ ವಿರುದ್ಧ ಸ್ಥಳೀಯ ಸಂಸ್ಥೆಗಳೇ ಕ್ರಮ ಕೈಗೊಳ್ಳಬೇಕು’ ಎಂದು ಇಲಾಖೆಯ ಡಿಜಿಪಿ ಎಂ.ಎನ್‌.ರೆಡ್ಡಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.