ADVERTISEMENT

ಅಪಘಾತ; ಬಸ್ಸಿನಡಿ ಸಿಲುಕಿ ಡಿಪೊಗೆ ಬಂದ ಶವ!

ಬೇರೆ ಬಸ್ಸಿನಲ್ಲಿ ಶವ ಬಚ್ಚಿಟ್ಟಿದ್ದ ಕೆಎಸ್‌ಆರ್‌ಟಿಸಿ ಚಾಲಕ ಬಂಧನ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2018, 19:30 IST
Last Updated 3 ಫೆಬ್ರುವರಿ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ತಮಿಳುನಾಡಿನಿಂದ ನಗರಕ್ಕೆ ಬರುತ್ತಿದ್ದ ಕೆಎಸ್ಆರ್‌ಟಿಸಿ ಬಸ್ಸಿನ ಚಾಸಿಯಲ್ಲಿ ಸಿಲುಕಿದ್ದ ಅಪರಿಚಿತ ವ್ಯಕ್ತಿಯೊಬ್ಬರ ಶವ, ಬಸ್ಸಿನೊಂದಿಗೆ ಶಾಂತಿನಗರದ ಒಂದನೇ ಡಿಪೊಗೆ ಬಂದಿದೆ.

ಶವದ ಹಿಂಭಾಗವು ವಿಕಾರವಾಗಿದ್ದು, ಗುರುತು ಪತ್ತೆಯಾಗಿಲ್ಲ. ಮೃತನಿಗೆ 35ರಿಂದ 40 ವರ್ಷ ವಯಸ್ಸಾಗಿರಬಹುದು. ಉದ್ದವಾದ ಗಡ್ಡ ಬಿಟ್ಟಿದ್ದಾರೆ. ಬಸ್ಸಿನ ಚಾಲಕ ಮಾರ್ಗಮಧ್ಯೆ ಅಪಘಾತವನ್ನುಂಟು ಮಾಡಿರಬಹುದು. ಅದೇ ವೇಳೆ ಶವವು ಚಾಸಿಯಲ್ಲಿ ಸಿಲುಕಿರಬಹುದೆಂದು ಅನುಮಾನ ವ್ಯಕ್ತಪಡಿಸಿರುವ ವಿಲ್ಸನ್‌ ಗಾರ್ಡನ್‌ ಪೊಲೀಸರು, ಚಾಲಕ ಮೊಹಿನುದ್ದೀನ್‌ (42) ಅವರನ್ನು ಬಂಧಿಸಿದ್ದಾರೆ.

ರಾಯಚೂರಿನ ಮೊಹಿನುದ್ದೀನ್‌, ಕೆಲ ವರ್ಷಗಳಿಂದ ಒಂದನೇ ಡಿಪೊದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಸ್ಲೀಪರ್‌ ಬಸ್ ತೆಗೆದುಕೊಂಡು ತಮಿಳುನಾಡಿನ ಕಣ್ಣೂರಿಗೆ ಹೋಗಿದ್ದರು. ಅಲ್ಲಿಂದ ಗುರುವಾರ (ಫೆ. 1) ವಾಪಸ್‌ ಹೊರಟು ಶುಕ್ರವಾರ ಬೆಳಿಗ್ಗೆ  ನಗರಕ್ಕೆ ಬಂದು ಡಿಪೊದಲ್ಲಿ ಬಸ್‌ ನಿಲ್ಲಿಸಿದ್ದರು. ಅದೇ ಬಸ್ಸಿನಲ್ಲೇ ಶವವು ಡಿಪೊದೊಳಗೆ ಬಂದಿದೆ ಎಂದು ಪೊಲೀಸರು ತಿಳಿಸಿದರು.

ADVERTISEMENT

ಮಾರ್ಗಮಧ್ಯೆ ಅಪಘಾತ: ಮೈಸೂರು, ಮಂಡ್ಯ, ರಾಮನಗರ ಮಾರ್ಗವಾಗಿ ಬಸ್‌ ನಗರಕ್ಕೆ ಬಂದಿದೆ. ಆ ರಸ್ತೆಯಲ್ಲಿ ವ್ಯಕ್ತಿಯೊಬ್ಬರಿಗೆ ಬಸ್‌ ಗುದ್ದಿರುವ ಅನುಮಾನವಿದೆ. ಅಪಘಾತದ ಬಳಿಕ ಚಾಲಕ, ಬಸ್‌ ನಿಲ್ಲಿಸದೆ ಚಲಾಯಿಸಿಕೊಂಡು ಬಂದಿದ್ದಾರೆ. 

ಅಪಘಾತದ ವೇಳೆ ಮೃತ ವ್ಯಕ್ತಿ ಕಾಲುಗಳು, ಬಸ್ಸಿನ ಚಾಸಿಯಲ್ಲಿ ಸಿಲುಕಿಕೊಂಡಿವೆ. ಘಟನಾ ಸ್ಥಳದಿಂದಲೇ ಅವರ ದೇಹವು ನೆಲಕ್ಕೆ ಉಜ್ಜಿಕೊಂಡು ನಗರದವರೆಗೂ ಬಂದಿದೆ. ಶವದ ಹಿಂಭಾಗವು ಛಿದ್ರವಾಗಿದ್ದು, ಅದೇ ಸ್ಥಿತಿಯಲ್ಲೇ ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಿದೆವು ಎಂದು ಪೊಲೀಸರು ವಿವರಿಸಿದರು.

ಶವ ಬಚ್ಚಿಟ್ಟಿದ್ದ ಚಾಲಕ: ಶಾಂತಿನಗರ ನಿಲ್ದಾಣಕ್ಕೆ ಬೆಳಿಗ್ಗೆ 2.30ಕ್ಕೆ ಬಸ್ ಬಂದಿತ್ತು. ಪ್ರಯಾಣಿಕರನ್ನು ಇಳಿಸಿದ್ದ ಮೊಹಿನುದ್ದೀನ್, ಬೆಳಿಗ್ಗೆ 3 ಗಂಟೆಗೆ ಬಸ್‌ ತೆಗೆದುಕೊಂಡು ಡಿಪೊಗೆ ಹೋಗಿದ್ದರು.

ಡಿಪೊ ಬಾಗಿಲು ಬಳಿಯೇ ಬಸ್‌ ನಿಲ್ಲಿಸಿ, ಚಾಸಿಯನ್ನು ಬಗ್ಗಿ ನೋಡಿದ್ದರು. ಅವಾಗಲೇ ಅವರಿಗೆ ಶವ ಕಂಡಿತ್ತು. ಗಾಬರಿಗೊಂಡ ಅವರು, ಅದೇ ಸ್ಥಿತಿಯಲ್ಲಿ ಬಸ್ಸನ್ನು ಒಳಗೆ ತೆಗೆದುಕೊಂಡು ಹೋಗಿದ್ದರು. ಸ್ವಲ್ಪ ದೂರ ಹೋಗುವಷ್ಟರಲ್ಲೇ ಶವ ಕೆಳಗೆ ಬಿದ್ದಿತ್ತು. ಅದನ್ನು ನೋಡಿದ ಚಾಲಕ, ಶವವನ್ನು ತೆಗೆದುಕೊಂಡು ಹೋಗಿ ಡಿಪೊದಲ್ಲಿದ್ದ ಬೇರೊಂದು ಬಸ್ಸಿನಲ್ಲಿ ಬಚ್ಚಿಟ್ಟಿದ್ದರು. ತದನಂತರ ತಮ್ಮ ಬಸ್ಸನ್ನು ನಿಗದಿತ ಜಾಗದಲ್ಲಿ ನಿಲ್ಲಿಸಿ, ಮನೆಗೆ ಹೋಗಿದ್ದರು ಎಂದು ಪೊಲೀಸರು ತಿಳಿಸಿದರು.

ಬಸ್‌ ಸ್ವಚ್ಛಗೊಳಿಸಲು ಬೆಳಿಗ್ಗೆ 9 ಗಂಟೆಗೆ ಡಿಪೊಗೆ ಬಂದಿದ್ದ ಸಿಬ್ಬಂದಿ, ಶವ ಕಂಡು ಮಾಹಿತಿ ನೀಡಿದ್ದರು. ಸ್ಥಳಕ್ಕೆ ಹೋದಾಗ, ಶವ ಎಲ್ಲಿಂದ ಬಂತು ಎಂಬುದು ಗೊತ್ತಾಗಿರಲಿಲ್ಲ. ಡಿಪೊದ ಸಿ.ಸಿ.ಟಿ.ವಿ ಕ್ಯಾಮೆರಾ ಪರಿಶೀಲಿಸಿದಾಗ, ಮೊಹಿನುದ್ದೀನ್‌ ತಮ್ಮ ಬಸ್ಸಿನ ಕೆಳಗೆ ಬಗ್ಗಿ ನೋಡುತ್ತಿದ್ದ ದೃಶ್ಯ ಕಂಡಿತ್ತು. ಡಿಪೊದಲ್ಲಿದ್ದ ಅವರ ಬಸ್ಸಿನ ಚಾಸಿ ಪರಿಶೀಲಿಸಿದಾಗ, ರಕ್ತದ ಕಲೆಗಳು ಕಂಡುಬಂದವು. ಅದರ ಆಧಾರದಲ್ಲಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡರು ಎಂದು ಪೊಲೀಸರು ವಿವರಿಸಿದರು.

ಮಂಡ್ಯ, ಮೈಸೂರು ಪೊಲೀಸರಿಗೆ ಮಾಹಿತಿ: ‘ಶವದ ಛಾಯಾಚಿತ್ರ ಸಮೇತ ಮಂಡ್ಯ ಹಾಗೂ ಮೈಸೂರು ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆಗಾಗಿ ಕಸ್ಟಡಿಗೆ ಪಡೆದಿದ್ದೇವೆ. ಘಟನಾ ಸ್ಥಳಕ್ಕೆ ಅವರನ್ನು ಕರೆದೊಯ್ದ ಬಳಿಕವೇ ಅಪಘಾತದ ನಿಖರ ಮಾಹಿತಿ ದೊರೆಯಲಿದೆ’ ಎಂದು ಪೊಲೀಸರು ತಿಳಿಸಿದರು.
**
ಜೋರಾದ ಶಬ್ದ ಕೇಳಿಸಿತು

ಚನ್ನಪಟ್ಟಣದಿಂದ ಬೆಂಗಳೂರಿನತ್ತ ಬರುವಾಗ ಮಾರ್ಗ ಮಧ್ಯೆ ಜೋರಾದ ಶಬ್ದ ಕೇಳಿಸಿತು. ಪ್ರಯಾಣಿಕರೆಲ್ಲ ಮಲಗಿದ್ದರಿಂದ ಯಾರೊಬ್ಬರು ಆ ಬಗ್ಗೆ ವಿಚಾರಿಸಲಿಲ್ಲ. ನಾನೂ ಆ ಶಬ್ದದ ಬಗ್ಗೆ ತಲೆ ಕೆಡಿಸಿಕೊಳ್ಳದೆ ಬಸ್ ಓಡಿಸಿಕೊಂಡು ನಗರಕ್ಕೆ ಬಂದೆ. ಬಸ್‌ ನಿಲ್ಲಿಸಲು ಡಿಪೊಗೆ ಹೋದಾಗಲೇ ಶವವಿರುವುದು ಗೊತ್ತಾಯಿತು’ ಎಂದು ಆರೋಪಿ ಮೊಹಿನುದ್ದೀನ್‌ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.