ADVERTISEMENT

ಬಿಜೆಪಿ ರೈತರನ್ನು ನಿರ್ಲಕ್ಷಿಸಿದೆ: ಸಿ.ಎಂ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2018, 20:07 IST
Last Updated 4 ಫೆಬ್ರುವರಿ 2018, 20:07 IST

ಹೊಸಕೋಟೆ : ‘ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್‌ನಲ್ಲಿ ರೈತರ ಸಾಲ ಮನ್ನಾದ ಬಗ್ಗೆ ಪ್ರಸ್ತಾಪವಿಲ್ಲ. ಬಿಜೆಪಿ ರೈತರನ್ನು ನಿರ್ಲಕ್ಷಿಸಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೂರಿದರು.

ಪಟ್ಟಣದಲ್ಲಿ ಭಾನುವಾರ ನಡೆದ ‘ಟೌನ್ ಕೋ ಆಪರೇಟಿವ್ ಬ್ಯಾಂಕಿನ ಶತಮಾನೋತ್ಸವ’ದಲ್ಲಿ ಅವರು ಮಾತನಾಡಿದರು.

‘ಅಧಿಕಾರದಲ್ಲಿ ಇದ್ದಾಗ ರೈತರ ಸಾಲ ಮನ್ನದ ಬಗ್ಗೆ ತಲೆಕೆಡಿಸಿಕೊಳ್ಳದ ಯಡಿಯೂರಪ್ಪ, ಈಗ ಅಧಿಕಾರ ಸಿಕ್ಕರೆ ಒಂದು ದಿನದಲ್ಲೇ ಸಾಲ ಮನ್ನ ಮಾಡುವುದಾಗಿ ಡೋಂಗಿ ಬಿಡುತ್ತಿದ್ದಾರೆ’ ಎಂದು ಟೀಕಿಸಿದರು.

ADVERTISEMENT

‘ಬಿಜೆಪಿಯ ಮಿಷನ್ 150 ಟುಸ್‌ ಆಗಿದ್ದು, ಈಗ 50ಕ್ಕೆ ಇಳಿದಿದೆ. ಇದರಿಂದ ಹತಾಶರಾಗಿರುವ ಅವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅವರು ನಂಬಿಕೆಗೆ ಅನರ್ಹರು’ ಎಂದು ಲೇವಡಿ ಮಾಡಿದರು.

ತಾಲ್ಲೂಕಿನ ಅನುಗೊಂಡನಹಳ್ಳಿಯ 29 ಕೆರೆಗಳಿಗೆ ನೀರು ತುಂಬಿಸಬೇಕಿದ್ದು, ಏತ ನೀರಾವರಿ ಯೋಜನೆ ಮತ್ತು ಕಾವೇರಿ 5ನೇ ಹಂತದಲ್ಲಿ ಹೊಸಕೋಟೆಗೆ ನೀರು ಹರಿಸಲು ಮಂಜೂರಾತಿ ಮಾಡಬೇಕು ಎಂದು ಸಿದ್ದರಾಮಯ್ಯ ಅವರಿಗೆ ಶಾಸಕ ಎನ್.ನಾಗರಾಜು ಅವರು ಮನವಿ ಮಾಡಿದರು.

ಬ್ಯಾಂಕಿನ ಅಧ್ಯಕ್ಷ ಎಚ್.ಎನ್.ಶಶಿಧರ ಬ್ಯಾಂಕ್ ನಡೆದು ಬಂದ ದಾರಿ ಬಗ್ಗೆ ಮಾಹಿತಿ ನೀಡಿದರು. ಶತಮಾನೋತ್ಸವದ ಅಂಗವಾಗಿ ಪಟ್ಟಣದಲ್ಲಿ ಬ್ಯಾಂಕಿನ ನೂತನ ಶಾಖೆಯನ್ನು ಸಚಿವ ರೋಷನ್ ಬೇಗ್ ಉದ್ಘಾಟಿಸಿದರು.

ಬ್ಯಾಂಕಿನ ಸಿಟಿಎಸ್ ಚೆಕ್ ಸೌಲಭ್ಯಕ್ಕೆ ಚಾಲನೆ ನೀಡಲಾಯಿತು. ‘ಶತೋತ್ಸವ ಸಿರಿ’ ಸ್ಮರಣ ಸಂಚಿಕೆ ಹಾಗೂ ಎಟಿಎಂ ರುಪೆ ಕಾರ್ಡನ್ನು ಬಿಡುಗಡೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.