ADVERTISEMENT

₹90 ಲಕ್ಷ ಕದ್ದವರು ಬಳ್ಳಾರಿಯಲ್ಲಿ ಸಿಕ್ಕರು

‘ಸಿಎಂಎಸ್‌ ಸರ್ವಿಸ್‌’ ನೌಕರರು ಭಾಗಿ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2018, 19:34 IST
Last Updated 5 ಫೆಬ್ರುವರಿ 2018, 19:34 IST

ಬೆಂಗಳೂರು: ಎಟಿಎಂ ಯಂತ್ರಗಳಿಗೆ ತುಂಬಬೇಕಿದ್ದ 90 ಲಕ್ಷ ದೋಚಿ ಪರಾರಿಯಾಗಿದ್ದ ‘ಸಿಎಂಎಸ್ ಸರ್ವಿಸ್’ ಏಜೆನ್ಸಿಯ ನೌಕರರು ಬಳ್ಳಾರಿಯಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.

‘ಏಜೆನ್ಸಿಯ ವಾಹನ ಚಾಲಕ ನಾರಾಯಣಸ್ವಾಮಿ (45), ಆತನ ಸಹಾಯಕ ನರಸಿಂಹರಾಜು (28), ಸಹಚರರಾದ ರಿಯಾಜ್ (30) ಹಾಗೂ ಜಗದೀಶ್ (28) ಎಂಬುವರನ್ನು ಬಂಧಿಸಿ, ₹ 80 ಲಕ್ಷ ಜಪ್ತಿ ಮಾಡಿದ್ದೇವೆ. ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಸಿಬ್ಬಂದಿಯ ತಂಡ ಬಳ್ಳಾರಿಯಲ್ಲಿ ಶೋಧ ನಡೆಸುತ್ತಿದೆ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಸಿಎಂಎಸ್ ಏಜೆನ್ಸಿಯು ಎಚ್‌ಡಿಎಫ್‌ಸಿ, ಎಸ್‌ಬಿಐ ಹಾಗೂ ಕರ್ನಾಟಕ ಬ್ಯಾಂಕ್‌ನ ಎಟಿಎಂಗಳಿಗೆ ಹಣ ತುಂಬುವ ಗುತ್ತಿಗೆ ಪಡೆದಿದೆ. ಮೂರು ವರ್ಷಗಳಿಂದ ಅಲ್ಲಿ ಕೆಲಸ ಮಾಡುತ್ತಿದ್ದ ನಾರಾಯಣಸ್ವಾಮಿ ಹಾಗೂ ನರಸಿಂಹರಾಜು, ಹಣ ದೋಚಲು 15 ದಿನಗಳಿಂದ ಹೊಂಚು ಹಾಕಿದ್ದರು. ಕೃತ್ಯಕ್ಕೆ ನೆರವಾಗಲು ಇಬ್ಬರು ಸಹಚರರನ್ನು ಹೊಂದಿಸಿಕೊಂಡ ಅವರು, ಜ.29ರಂದು ₹ 90 ಲಕ್ಷ ನಗದು ಇದ್ದ ಟಾಟಾ ಸುಮೋ ಸಮೇತ ಪರಾರಿಯಾಗಿದ್ದರು.

ADVERTISEMENT

(ನಾರಾಯಣಸ್ವಾಮಿ)

ನಾರಾಯಣಸ್ವಾಮಿ ಹೇಳಿಕೆ: ‘ಏಜೆನ್ಸಿ ಕಸ್ಟೋಡಿಯನ್‌ಗಳಾದ ಪ್ರದೀಪ್ ಹಾಗೂ ಚಂದ್ರಶೇಖರ್ ಜತೆ ಜ.29ರ ಬೆಳಿಗ್ಗೆ ಎಟಿಎಂಗಳಿಗೆ ಹಣ ತುಂಬಲು ತೆರಳಿದ್ದೆ. ನಮ್ಮ ಜತೆ ಗನ್‌ಮ್ಯಾನ್ ನಟರಾಜ್ ಸಹ ಇದ್ದರು. ಹೊಸಕೆರೆಹಳ್ಳಿ, ಸೀತಾಸರ್ಕಲ್, ಶ್ರೀನಿವಾಸನಗರ, ಗಿರಿನಗರ, ಬಸವನಗುಡಿ ರಸ್ತೆ, ಗಾಂಧಿಬಜಾರ್, ವಿ.ವಿ.ಪುರ ಹಾಗೂ ಪಂತರಪಾಳ್ಯದ ಬಾಂಕ್ ಶಾಖೆಗಳಲ್ಲಿ ಹಣ ಸಂಗ್ರಹಿಸಿಕೊಂಡ ನಾವು, ಸಂಜೆ  4.30ರ ಸುಮಾರಿಗೆ ರಾಜರಾಜೇಶ್ವರಿನಗರಕ್ಕೆ ತೆರಳಿದೆವು.’

‘ಅಲ್ಲಿ ಇಳಿದುಕೊಂಡ ಪ್ರದೀಪ್ ಹಾಗೂ ಚಂದ್ರಶೇಖರ್, ‘ನೀವಿಬ್ಬರೂ ಜ್ಞಾನಜ್ಯೋತಿ ವೃತ್ತಕ್ಕೆ ಹೋಗಿ ಹಣ ಸಂಗ್ರಹಿಸಿಕೊಂಡು ಬನ್ನಿ’ ಎಂದು ಹೇಳಿ ಕಳುಹಿಸಿದ್ದರು. ಅದೇ ಸಮಯಕ್ಕಾಗಿ ಕಾಯುತ್ತಿದ್ದ ನಾನು, ಕೂಡಲೇ ಸಹಚರರಿಗೆ ಕರೆ ಮಾಡಿ ಅಲ್ಲಿಗೆ ಬರುವಂತೆ ಹೇಳಿದೆ. 4.50ಕ್ಕೆ ನಾನು ಹಾಗೂ ಗನ್‌ಮ್ಯಾನ್ ಆ ವೃತ್ತಕ್ಕೆ ಹೋದೆವು.’

(ನರಸಿಂಹರಾಜು)

‘ಅಂಗಡಿಯೊಂದರ ಬಳಿ ವಾಹನ ನಿಲ್ಲಿಸಿದ ನಾನು, ಗನ್‌ಮ್ಯಾನ್‌ಗೆ ₹ 100 ಕೊಟ್ಟು ಬಾಳೆ ಹಣ್ಣು ತರುವಂತೆ ಕಳುಹಿಸಿದೆ. ಆತ ಆ ಕಡೆ ಹೋಗುತ್ತಿದ್ದಂತೆಯೇ ಸಹಚರರು ಓಡಿ ಬಂದು ವಾಹನ ಹತ್ತಿದರು. ಅಲ್ಲಿಂದ ಹೊರಟು ಮಾದನಾಯಕನಹಳ್ಳಿ ಸಮೀಪದ ಕಿತ್ತನಹಳ್ಳಿ ಅರಣ್ಯ ಪ್ರದೇಶಕ್ಕೆ ಹೋದೆವು. ನೋಂದಣಿ ಸಂಖ್ಯೆ ಆಧರಿಸಿ ಪೊಲೀಸರು ನಮ್ಮನ್ನು ಪತ್ತೆ ಮಾಡಬಹುದೆಂದು, ವಾಹನವನ್ನು ಅಲ್ಲೇ ಬಿಟ್ಟು ಬಸ್‌ನಲ್ಲಿ ಬಳ್ಳಾರಿಗೆ ಹೋಗಿದ್ದೆವು’.

‘ಸ್ನೇಹಿತರ ಬಳಿ ₹ 15 ಲಕ್ಷ ಸಾಲ ಮಾಡಿದ್ದೆ. ಸಕಾಲಕ್ಕೆ ಹಣ ಮರಳಿಸಲಿಲ್ಲ ಎಂಬ ಕಾರಣಕ್ಕೆ ಅವರು ಮನೆ ಹತ್ತಿರ ಬಂದು ಗಲಾಟೆ ಮಾಡುತ್ತಿದ್ದರು. ಹೀಗಾಗಿ, ಕಳ್ಳತನ ಮಾಡಿದೆ’ ಎಂದು ನಾರಾಯಣಸ್ವಾಮಿ ಹೇಳಿಕೆ ಕೊಟ್ಟಿದ್ದಾನೆ.

ಟವರ್ ಡಂಪ್ ತನಿಖೆ

‘ಹಣ ಕಳವಾದ ಸಂಬಂಧ ಏಜೆನ್ಸಿಯ ವ್ಯವಸ್ಥಾಪಕ ಬಿ.ರಘುನಾಥ್ ದೂರು ಕೊಟ್ಟಿದ್ದರು. ನಾರಾಯಣಸ್ವಾಮಿ ಹಾಗೂ ನರಸಿಂಹರಾಜುವಿನ ಮೊಬೈಲ್ ಸಂಖ್ಯೆಗಳನ್ನು ಪಡೆದು ‘ಟವರ್ ಡಂಪ್’ ತನಿಖೆ ನಡೆಸಿದಾಗ ಶಿರಾ, ಚಳ್ಳಕೆರೆ, ರಾಯದುರ್ಗ ಮಾರ್ಗವಾಗಿ ಅವರು ಬಳ್ಳಾರಿಗೆ ಹೋಗಿರುವುದು ಗೊತ್ತಾಯಿತು. ಕೂಡಲೇ ಅಲ್ಲಿಗೆ ತೆರಳಿದ ಸಿಬ್ಬಂದಿ ತಂಡ, ಭಾನುವಾರ ಮಧ್ಯಾಹ್ನ ನಾಲ್ವರು ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಯಿತು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.