ADVERTISEMENT

ಜಗತ್ತಿನ ಶ್ರೇಷ್ಠ ಚಿತ್ರಗಳ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2018, 19:34 IST
Last Updated 9 ಫೆಬ್ರುವರಿ 2018, 19:34 IST
ಜಗತ್ತಿನ ಶ್ರೇಷ್ಠ ಚಿತ್ರಗಳ ಪ್ರದರ್ಶನ
ಜಗತ್ತಿನ ಶ್ರೇಷ್ಠ ಚಿತ್ರಗಳ ಪ್ರದರ್ಶನ   

ಬೆಂಗಳೂರು: ‘ಕಳೆದ ವರ್ಷ ಜಗತ್ತಿನ ಪ್ರಸಿದ್ಧ ಸಿನಿಮೋತ್ಸವಗಳಲ್ಲಿ ಪ್ರಶಸ್ತಿ ಪಡೆದ ಬಹುತೇಕ ಎಲ್ಲ ಸಿನಿಮಾಗಳೂ ಈ ವರ್ಷದ ಬೆಂಗಳೂರು ಅಂತರ
ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ’ ಎಂದು  ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ತಿಳಿಸಿದರು.

‘ಭಾರತದಲ್ಲಿಯೇ ಬೆಂಗಳೂರು ಚಿತ್ರೋತ್ಸವ ಶ್ರೇಷ್ಠ ದರ್ಜೆಯದು ಎಂದು ಹೆಸರು ಗಳಿಸಬೇಕು ಮತ್ತು ಕನ್ನಡ ಚಿತ್ರಗಳು ಅಂತರರಾಷ್ಟ್ರೀಯ ಮಟ್ಟ
ದಲ್ಲಿ ಗುರ್ತಿಸಿಕೊಳ್ಳುವಂತಾಗಬೇಕು ಎಂಬುದು ನಮ್ಮ ಉದ್ದೇಶ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಚಿತ್ರೋತ್ಸವದ 12 ವಿಭಾಗಗಳಲ್ಲಿ 200ಕ್ಕೂ ಅಧಿಕ ಸಿನಿಮಾಗಳು ಪ್ರದರ್ಶನ ಕಾಣಲಿವೆ. ನಗರದ ಒರಾಯನ್‌ ಮಾಲ್‌ನ 11 ಚಿತ್ರಮಂದಿರಗಳು ಮತ್ತು  ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಡಾ. ರಾಜ್‌ ಭವನದಲ್ಲಿ ಸಿನಿಮಾಗಳು ಪ್ರದರ್ಶಿತವಾಗಲಿವೆ.

ADVERTISEMENT

‘ಫೆ.22ರಂದು ವಿಧಾನಸೌಧದ ಮುಂಭಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಮಾ.1ರಂದು ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ರಾಜ್ಯಪಾಲ ವಜುಭಾಯ್‌ವಾಲಾ ವಿವಿಧ ಸ್ಪರ್ಧಾವಿಭಾಗಗಳಲ್ಲಿ ಪ್ರಶಸ್ತಿ ಗೆದ್ದ ಚಿತ್ರಗಳ ನಿರ್ಮಾಪಕರಿಗೆ ಪ್ರಶಸ್ತಿ ನೀಡಲಿದ್ದಾರೆ’ ಎಂದು ತಿಳಿಸಿದರು.

ರಾಷ್ಟ್ರೀಯ ಸಮಿತಿ: ಈ ವರ್ಷ ಅಂತರರಾಷ್ಟ್ರೀಯ ಸಿನಿಮಾ ವಿಭಾಗದಲ್ಲಿ ಪ್ರದರ್ಶಿತವಾಗಲಿರುವ ಸಿನಿಮಾಗಳ ಆಯ್ಕೆಗಾಗಿ ರಾಷ್ಟ್ರಮಟ್ಟದ ಸಮಿತಿ ರಚಿಸ
ಲಾಗಿತ್ತು. ದೆಹಲಿ, ಕೋಲ್ಕತ್ತ ಮತ್ತು ಮೈಸೂರಿನ ಸಿನಿಮಾ ತಜ್ಞರು ಆ ಸಮಿತಿಯಲ್ಲಿದ್ದರು. ಅದರ ಮಾರ್ಗದರ್ಶ ನಲ್ಲಿಯೇ ಸಿನಿಮಾಗಳನ್ನು ಆಯ್ಕೆ ಮಾಡಲಾಗಿದೆ.

ಪರಿಣತರ ದಂಡು: ಪ್ರತಿ ವರ್ಷದಂ ತೆಯೇ ಈ ವರ್ಷವೂ ದೇಶ, ವಿದೇಶಗಳ ಹಲವು ಸಿನಿಮಾ ಪರಿಣತರು, ತಂತ್ರಜ್ಞರು ಸಿನಿಮೋತ್ಸವದಲ್ಲಿ ವಿಚಾರ
ಸಂಕಿರಣ, ಕಾರ್ಯಾಗಾರ, ಸಂವಾದಗಳನ್ನು ನಡೆಸಿಕೊಡಲಿದ್ದಾರೆ. ವಿ.ಕೆ. ಮೂರ್ತಿ ಅವರ ಸ್ಮರಣಾರ್ಥ ನಡೆಯುವ ವಿಶೇಷ ಉಪನ್ಯಾಸವನ್ನು ಆಸ್ಟ್ರೇಲಿ
ಯಾದ ಛಾಯಾಗ್ರಾಹಕ ಟಾಮ್‌ ಕೋವನ್‌ ನೀಡಲಿದ್ದಾರೆ. ಅವರು ಕನ್ನಡದ ‘ಸಂಸ್ಕಾರ’ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದರು. ಹಿಂದಿ ನಿರ್ದೇಶಕ ರಾಕೇಶ್‌ ಓಂಪ್ರಕಾಶ್‌ ಮೆಹ್ರಾ ಅವರು ಸಂವಾದ ನಡೆಸಿಕೊಡಲಿದ್ದಾರೆ. ಕೋಲ್ಕತ್ತದ ಸ್ವಪನ್‌ ಮಲ್ಲಿಕ್‌ ಸತ್ಯಜಿತ್‌ ರೇ ಸಿನಿಮಾಗಳ ಕುರಿತು ಉಪನ್ಯಾಸ ನೀಡ
ಲಿದ್ದಾರೆ. ಫ್ರಾನ್ಸ್‌ನ ನಿರ್ದೇಶಕ ಮಾರ್ಕ್‌ ಬಸೆಟ್‌ ಜತೆ ಮುಂಬೈನ ರಾಹುಲ್‌ ಪುರಿಮುಕ್ತಾ ಅವರು ‘ಜಾಗತಿಕ ಚಲನಚಿತ್ರ ನಿರ್ಮಾಣ ಪ್ರಕ್ರಿಯೆ ಕುರಿತು’ ಸಂವಾದ ನಡೆಸಿಕೊಡಲಿದ್ದಾರೆ. ಲಿಂಗ ಸಂವೇದನೆ ಮತ್ತು ಸೃಜನಶೀಲ ಸ್ವಾತಂತ್ರ್ಯದ ಮೇಲೆ ನಡೆಯುತ್ತಿರುವ ದಾಳಿಯ ಕುರಿತು ವಿಚಾರ ಸಂಕಿರಣವೂ ನಡೆಯಲಿದೆ.

ಶಾಸಕರಿಗೆ ಪ್ರತ್ಯೇಕ ಪ್ರದರ್ಶನ: ‘ಪ್ರತಿವರ್ಷ ವಿಧಾನಸಭೆ ಮತ್ತು ವಿಧಾನಪರಿಷತ್‌ ಸದಸ್ಯರು ಸಿನಿಮಾ ನೋಡುವ ಆಸಕ್ತಿ ತೋರಿಸುತ್ತಿದ್ದರು. ಆದ್ದರಿಂದ ಈ ವರ್ಷ ಶಾಸಕರಿಗಾಗಿಯೇ ಒಂದು ಚಿತ್ರಮಂದಿರವನ್ನು ಮೀಸಲಿಡಲಾಗುವುದು’ ಎಂದು ತಿಳಿಸಿದರು.

ನೋಂದಣಿ ಆರಂಭ: ನಂದಿನಿ ಬಡಾವಣೆಯಲ್ಲಿರುವ ಚಲನಚಿತ್ರ ಅಕಾಡೆಮಿ ಕಚೇರಿ, ಇನ್‌ಫೆಂಟ್ರಿ ರಸ್ತೆಯಲ್ಲಿರುವ ವಾರ್ತಾ ಮತ್ತು ಸಾರ್ವಜನಿಕ ಇಲಾಖೆ ಕಚೇರಿ, ಕರ್ನಾಟಕ ವಾಣಿಜ್ಯ ಮಂಡಳಿ ಕಚೇರಿ, ಸುಚಿತ್ರಾ ಫಿಲಂ ಸೊಸೈಟಿ ಆವರಣಗಳಲ್ಲಿ ಚಿತ್ರೋತ್ಸವಕ್ಕೆ ನೋಂದಣಿ ಕೇಂದ್ರಗಳನ್ನು ತೆರೆಯಲಾಗಿದೆ. ಅಂತರ್ಜಾಲದ ಮೂಲಕವೂ (http://biffes.in) ನೋಂದಾಯಿಸಿಕೊಳ್ಳಬಹುದು. ಪ್ರತಿನಿಧಿ ಶುಲ್ಕ ಸಾರ್ವಜನಿಕರಿಗೆ ₹ 600, ವಿದ್ಯಾರ್ಥಿಗಳಿಗೆ, ಹಿರಿಯ ನಾಗರಿಕರಿಗೆ, ಫಿಲಂ ಸೊಸೈಟಿ ಸದಸ್ಯರಿಗೆ ₹ 300 ನಿಗದಿಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.